ಮ್ಯಾಡ್ರಿಡ್ ಓಪನ್‌ನಿಂದ ಹಿಂದೆ ಸರಿದ ಸೆರೆನಾ

Update: 2018-05-03 18:44 GMT

ಮ್ಯಾಡ್ರಿಡ್, ಮೇ 3: ವಿಶ್ವದ ಮಾಜಿ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮ್ಯಾಡ್ರಿಡ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ.

ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಫ್ರೆಂಚ್ ಓಪನ್‌ನಲ್ಲಿ ಸಂಪೂರ್ಣ ಫಿಟ್‌ನೆಸ್ ಪಡೆಯುವ ಉದ್ದೇಶದಿಂದ ಸೆರೆನಾ ವಿಶ್ರಾಂತಿಯ ಮೊರೆ ಹೋಗಿದ್ದಾರೆ ಎಂದು ಟೂರ್ನಿಯ ಸಂಘಟಕರು ಗುರುವಾರ ತಿಳಿಸಿದ್ದಾರೆ.

36ರ ಹರೆಯದ ಸೆರೆನಾ 2012 ಹಾಗೂ 2013ರಲ್ಲಿ ಮ್ಯಾಡ್ರಿಡ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದರು. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಬಳಿಕ ಮಾರ್ಚ್‌ನಲ್ಲಿ ಡಬ್ಲುಟಿಎ ಟೂರ್‌ನಲ್ಲಿ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದರು.

23 ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸಿಂಗಲ್ಸ್ ಚಾಂಪಿಯನ್ ಆಗಿರುವ ಸೆರೆನಾ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಸಹೋದರಿ ವೀನಸ್ ವಿರುದ್ಧ ಸೋಲುವುದರೊಂದಿಗೆ ಟೂರ್ನಿಯಿಂದ ನಿರ್ಗಮಿಸಿದ್ದರು. ಮಿಯಾಮಿ ಓಪನ್‌ನಲ್ಲಿ ಜಪಾನ್‌ನ ನೊಯೊಮಿ ಒಸಾಕಾ ವಿರುದ್ಧ ಮೊದಲ ಸುತ್ತಿನಲ್ಲಿ ಸೋತಿದ್ದರು.

ಮೇ 7 ರಿಂದ 13ರ ತನಕ ನಡೆಯಲಿರುವ ಮ್ಯಾಡ್ರಿಡ್ ಓಪನ್‌ನಿಂದ ಪೊಲೆಂಡ್‌ನ ಅಗ್ನೆಸ್ಕಾ ರಾಂಡ್ವಾಸ್ಕಾ ಕೂಡ ಹಿಂದೆ ಸರಿದಿದ್ದಾರೆ. ರಾಂಡ್ವಾಂಸ್ಕಾ ಬೆನ್ನುನೋವಿನಿಂದ ಬಳಲುತ್ತಿದ್ದಾರೆ.

ಜನವರಿಯಲ್ಲಿ ನಡೆದ ವರ್ಷದ ಮೊದಲ ಗ್ರಾನ್‌ಸ್ಲಾಮ್ ಆಸ್ಟ್ರೇಲಿಯನ್ ಓಪನ್‌ನಿಂದ ದೂರ ಉಳಿದಿದ್ದ ಸೆರೆನಾ ವಿಲಿಯಮ್ಸ್ ಮೇ 21 ರಿಂದ ಜೂ.10ರ ತನಕ ನಡೆಯುವ ಫ್ರೆಂಚ್ ಓಪನ್‌ನಲ್ಲಿ ಭಾಗವಹಿಸುವ ವಿಶ್ವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News