ಐದು ಗಂಟೆ ರನ್‌ ವೇನಲ್ಲೇ ಉಳಿದ ಇಂಡಿಗೊ ವಿಮಾನ: ಯಾನಿಗಳ ಪ್ರತಿಭಟನೆ

Update: 2018-05-04 05:16 GMT

ಹೊಸದಿಲ್ಲಿ, ಮೇ 4: ದೆಹಲಿಯಿಂದ ಗುವಾಹತಿಗೆ ಹೊರಟಿದ್ದ ಇಂಡಿಗೊ ವಿಮಾನ ಐದು ಗಂಟೆಗೂ ಹೆಚ್ಚು ಕಾಲ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ ವೇನಲ್ಲೇ ಉಳಿದಿದ್ದರಿಂದ ಉದ್ರಿಕ್ತರಾದ ಪ್ರಯಾಣಿಕರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ವಿಳಂಬ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಆಕ್ರೋಶಗೊಂಡ ಪ್ರಯಾಣಿಕರು ವಿಮಾನದಿಂದ ಕೆಳಗಿಳಿದು ರನ್‌ವೇಯಿಂದ ಅನತಿ ದೂರದಲ್ಲೇ ಪ್ರತಿಭಟನೆ ನಡೆಸಿದರು. ಬುಧವಾರ ರಾತ್ರಿ ಹವಾಮಾನದಲ್ಲಿ ದಿಢೀರ್ ವ್ಯತ್ಯಯವಾದ್ದು ದೆಹಲಿ- ಗುವಾಹತಿ ವಿಮಾನ (6ಇ 694) ವಿಳಂಬಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೊನೆಗೆ ಸಿಐಎಸ್‌ಎಫ್ ಸಿಬ್ಬಂದಿ ಮಧ್ಯಪ್ರವೇಶಿಸಿ ಬಲವಂತವಾಗಿ ಪ್ರಯಾಣಿಕರನ್ನು ವಿಮಾನದೊಳಕ್ಕೆ ಕಳುಹಿಸಬೇಕಾಯಿತು. ಸಂಜೆ 6:30ಕ್ಕೆ ಹೊರಡಬೇಕಾದ ವಿಮಾನ ಕೊನೆಗೆ 11:45ಕ್ಕೆ ಯಾನ ಆರಂಭಿಸಿತು.

ರಾತ್ರಿ 10:10ಕ್ಕೆ ಘಟನೆ ನಡೆದಿದ್ದು, ಹವಾಮಾನ ವೈಪರೀತ್ಯದಿಂದಾಗಿ ಹಲವು ವಿಮಾನಗಳ ಸಂಚಾರ ವ್ಯತ್ಯಯಗೊಂಡಿತು. ಜತೆಗೆ ದೆಹಲಿಗೆ ಬರುತ್ತಿದ್ದ 15 ವಿಮಾನಗಳನ್ನು ಬೇರೆಡೆಗೆ ಕಳುಹಿಸಲಾಯಿತು. 177 ಪ್ರಯಾಣಿಕರನ್ನು ಒಳಗೊಂಡಿದ್ದ 6ಇ 694 ವಿಮಾನ ಟೇಕಾಫ್‌ಗೆ ವಾಯು ಸಂಚಾರ ನಿಯಂತ್ರಣ ಸಿಬ್ಬಂದಿಯ ಅನುಮೋದನೆಗಾಗಿ ಕಾಯುತ್ತಿತ್ತು. ಹವಾಮಾನ ಪರಿಸ್ಥಿತಿ ಪೂರಕವಾಗಿಲ್ಲ ಎಂಬ ಕಾರಣಕ್ಕಾಗಿ ವಿಮಾನ ಟೇಕಾಫ್‌ಗೆ ಕಾಯುವಂತೆ ಸೂಚಿಸಲಾಗಿತ್ತು.

ಈ ಮಧ್ಯೆ ವಿಮಾನ ವಿಳಂಬವಾದ ಹಿನ್ನೆಲೆಯಲ್ಲಿ ಪೈಲಟ್ ಹಾಗೂ ಇತರ ಸಿಬ್ಬಂದಿಯ ಕರ್ತವ್ಯದ ಅವಧಿ ಮುಗಿದಿತ್ತು. ಇದರಿಂದಾಗಿ ಹೊಸ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಬೇಕಾಯಿತು. ಹೊಸ ಸಿಬ್ಬಂದಿ ಎಟಿಸಿ ನಿರ್ಗಮನ ಸಿಗ್ನಲ್‌ಗಾಗಿ ಹೊಸ ಸ್ಲಾಟ್ ಪಡೆಯಬೇಕಾಯಿತು. ಇದು ಯಾನ ಮತ್ತಷ್ಟು ವಿಳಂಬವಾಗಲು ಕಾರಣ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News