ಕಾಂಗ್ರೆಸ್ ಶಾಸಕನ ವಿರುದ್ಧ ಸುಳ್ಳು ಅತ್ಯಾಚಾರ ಅಸ್ತ್ರ ಪ್ರಯೋಗಿಸಿದ ಬಿಜೆಪಿ ಮುಖಂಡ

Update: 2018-05-04 04:23 GMT

ಜಬಲ್ಪುರ/ ಭೋಪಾಲ್, ಮೇ 4: "ಮಧ್ಯ ಪ್ರದೇಶದ ಬಿಜೆಪಿ ಮುಖಂಡ ಅರವಿಂದ್ ಭಡೋರಿಯಾ ನನ್ನನ್ನು ರಾಜಕೀಯ ಸಾಧನವಾಗಿ ಬಳಸಿಕೊಂಡು, ಕಾಂಗ್ರೆಸ್ ಶಾಸಕ ಹೇಮಂತ್ ಕಠಾರೆ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವಂತೆ ಕುಮ್ಮಕ್ಕು ನೀಡಿದ್ದಾರೆ. ಈ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ಕಟ್ಟುಕಥೆ" ಎಂದು ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳು ರಾಜ್ಯ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾಳೆ.

ಕಳೆದ ವರ್ಷ ವಿಧಾನಸಭಾ ಉಪಚುನಾವಣೆ ವೇಳೆ ಕಠಾರೆ, ಭಡೋರಿಯಾಗೆ ಅವಮಾನ ಮಾಡಿದ್ದರು ಎಂಬ ಕಾರಣಕ್ಕೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ತಂತ್ರ ಹೂಡಿದ್ದರು ಎಂದು ತಿಳಿದುಬಂದಿದೆ. ಆದರೆ ಇದನ್ನು ಬಿಜೆಪಿ ಮುಖಂಡ ನಿರಾಕರಿಸಿದ್ದು, ಯಾವುದೇ ತನಿಖೆ ಎದುರಿಸಲು ತಾನು ಸಿದ್ಧ ಎಂದು ಘೋಷಿಸಿದ್ದಾರೆ. "ಇದು ನನ್ನ ವಿರುದ್ಧದ ಪಿತೂರಿ. ಕಠಾರೆ, ಈ ಯುವತಿಯ ವಿರುದ್ಧ ಬ್ಲ್ಯಾಕ್‌ಮೇಲ್ ಪ್ರಕರಣ ದಾಖಲಿಸಿ, ಆಕೆಯನ್ನು ಬಂಧಿಸುವಂತೆ ಮಾಡಿದ್ದರು. ಜಬಲ್ಪುರದಲ್ಲಿ ಇಬ್ಬರೂ ಇಂದು ಜತೆಗಿದ್ದರು. ಇದು ಏನನ್ನು ಸೂಚಿಸುತ್ತದೆ?" ಎಂದು ಅವರು ಪ್ರಶ್ನಿಸಿದ್ದಾರೆ.

ಅಪರಾಧ ದಂಡ ಸಂಹಿತೆಯ ಸೆಕ್ಷನ್ 164ರ ಅನ್ವಯ ನ್ಯಾಯಾಧೀಶರ ಮುಂದೆ ಈ ಯುವತಿ ಹೇಳಿಕೆ ದಾಖಲಿಸಿದ್ದಳು. ಆಕೆ ಹಿಂದೆ ಏನು ಹೇಳಿದ್ದಳು ಹಾಗೂ ಈಗ ಏನು ಹೇಳುತ್ತಿದ್ದಾಳೆ ಎನ್ನುವ ಸತ್ಯಾಸತ್ಯತೆಯನ್ನು ನ್ಯಾಯಾಧೀಶರೇ ತೀರ್ಮಾನಿಸಲಿ ಎಂದು ಭಡಾರಿಯಾ ಹೇಳಿದ್ದಾರೆ. ಗುರುವಾರ ಶಾಸಕರ ವಿರುದ್ಧದ ಅತ್ಯಾಚಾರ ಪ್ರಕರಣ ವಿಚಾರಣೆ ನಡೆಯಬೇಕಿತ್ತು. ಆದರೆ ಯುವತಿ ಪ್ರಮಾಣಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಗಿದೆ.

"ಹಣ ಸುಲಿಗೆ ಆರೋಪದಲ್ಲಿ ನನ್ನನ್ನು ಬಂಧಿಸಿ ಭೋಪಾಲ್ ಕೇಂದ್ರೀಯ ಕಾರಾಗೃಹದಲ್ಲಿ ಬಂಧನದಲ್ಲಿಟ್ಟ ವೇಳೆ ಸಹ ಆರೋಪಿ ವಿಕ್ರಮ್‌ಜೀತ್, ಒಬ್ಬ ವಕೀಲ ಹಾಗೂ ಇಬ್ಬರು ಸ್ನೇಹಿತರ ಜತೆ 2018ರ ಜನವರಿ 27ರಂದು ಅಲ್ಲಿಗೆ ಆಗಮಿಸಿ, ಭಡೋರಿಯಾ ಸೂಚನೆಯಂತೆ ಇಲ್ಲಿಗೆ ಆಗಮಿಸಿದ್ದಾಗಿ ಹೇಳಿದ್ದ. ಹೇಮಂತ್ ವಿರುದ್ಧ ಅತ್ಯಾಚಾರ ದೂರು ನೀಡಿದರೆ ಉಚಿತ ಕಾನೂನು ನೆರವು ನೀಡುವುದಾಗಿ ತಿಳಿಸಿದ್ದ. ಇದಕ್ಕೆ ನಾನು ಒಪ್ಪದಿದ್ದಾಗ, ಜೈಲಿನಲ್ಲಿ ಕಿರುಕುಳ ನೀಡಲಾಯಿತು. ಕಿರುಕುಳದ ಹಿನ್ನೆಲೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದೆ" ಎಂದು ಯುವತಿ ಅಫಿಡವಿಟ್‌ನಲ್ಲಿ ವಿವರಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News