ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸದೇ ಇರಲು ನಿರ್ಧರಿಸಿದ ನಿರ್ಭಯಾ ಹೆತ್ತವರು

Update: 2018-05-05 13:09 GMT

ಹೊಸದಿಲ್ಲಿ, ಮೇ 5: ದೇಶವನ್ನೇ  ಬೆಚ್ಚಿಬೀಳಿಸಿದ್ದ ನಿರ್ಭಯಾ ಪ್ರಕರಣದಲ್ಲಿ ತೀರ್ಪು ಹೊರಬಿದ್ದಿದ್ದರೂ ಆಕೆಯ ಹೆತ್ತವರಿಗಿನ್ನೂ ನ್ಯಾಯ ದೊರಕಿಲ್ಲ. ನ್ಯಾಯದಾನದಲ್ಲಿ ಆಗುತ್ತಿರುವ ಭಾರೀ ವಿಳಂಬವನ್ನು ವಿರೋಧಿಸಿ ಅವರು ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಮತ ಚಲಾಯಿಸದೇ ಇರಲು ನಿರ್ಧರಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ  ಗಲ್ಲು ಶಿಕ್ಷೆ ಘೋಷಿಸಿದ್ದರೂ ಆಕೆಯ ಹೆತ್ತವರಿಗೆ ಸಮಾಧಾನವಾಗಿಲ್ಲ. ತಮಗೆ ನೀಡಲಾದ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿರುವ ಅಪೀಲಿನ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ.

"ಸರಕಾರವು ನಿರ್ಭಯಾ ಪ್ರಕರಣದಲ್ಲಿ ಶೀಘ್ರ ನ್ಯಾಯ ದೊರಕಿಸಿದ್ದರೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯಾಂಗ ಪ್ರಕ್ರಿಯೆ ವಿಳಂಬವಾಗದಂತೆ ನೋಡಿಕೊಂಡಿದ್ದರೆ ಕಥುವಾ ಮತ್ತು ಉನ್ನಾವೋದಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ,'' ಎಂದು ನಿರ್ಭಯಾ ತಂದೆ ಬದ್ರಿನಾಥ್ ಹೇಳಿದ್ದಾರೆ.

ನಿರ್ಭಯಾ ಪ್ರಕರಣದ ಆರು ಆರೋಪಿಗಳ ಪೈಕಿ ಬಸ್ಸು ಚಾಲಕ ರಾಮ್ ಸಿಂಗ್ ಜೈಲಿನಲ್ಲಿಯೇ ಆತ್ಮಹತ್ಯೆಗೈದಿದ್ದರೆ, ಇನ್ನೊಬ್ಬ ಆರೋಪಿಗೆ ಪ್ರಕರಣ ನಡೆದಾಗ 18 ತುಂಬಲು ಕೆಲವೇ ದಿನಗಳು ಬಾಕಿಯಿದ್ದುದರಿಂದ ಆತನನ್ನು ಬಾಲಾಪರಾಧಿಗಳ ನಿಲಯಕ್ಕೆ ಕಳುಹಿಸಿ ನಂತರ ಬಿಡುಗಡೆಗೊಳಿಸಲಾಗಿತ್ತು. ಉಳಿದ ನಾಲ್ಕು ಮಂದಿ ಗಲ್ಲು ಶಿಕ್ಷೆಗೆ ಒಳಗಾಗಿದ್ದಾರೆ.

"ನನ್ನ ಮಗಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಕೇವಲ ಕಾಗದದಲ್ಲಿ ಉಳಿದಿದೆ. ನಿರ್ಭಯಾ ನಿಧಿಯ ಹಣವನ್ನು ಸೀಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಉಪಯೋಗಿಸಲಾಗುವುದೆಂದು ಹೇಳಲಾಗಿತ್ತು. ಆದರೆ ನಮ್ಮ ಪ್ರಶ್ನೆಗಳಿಗೆ ಉತ್ತರ ದೊರಕಿಲ್ಲ'' ಎಂದು ನಿರ್ಭಯಾ ಹೆತ್ತವರು ಹೇಳುತ್ತಾರೆ.

ಪ್ರಕರಣದ ಪ್ರತಿ ವಿಚಾರಣೆ ವೇಳೆಯೂ ತಾವು ಅತ್ಯಾಚಾರಿಗಳ ಪರ ವಾದವನ್ನು ಆಲಿಸುತ್ತಿರುವುದಾಗಿ ಅವರು ನೋವಿನಿಂದ ಹೇಳುತ್ತಾರೆ. "ಅಪರಾಧಿಗಳು ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದ್ದಾರೆ. ಅವರನ್ನು ಬಿಡುಗಡೆಗೊಳಿಸಬೇಕು ಎಂದು ಅವರ ವಕೀಲರು ಹೇಳುತ್ತಿದ್ದಾರೆ. ನನ್ನ ಪುತ್ರಿ ಒಬ್ಬ ಉತ್ತಮ ನಾಗರಿಕಳಾಗಿರಲಿಲ್ಲವೇ ಎಂದು ನಾನು ಅವರನ್ನು ಪ್ರಶ್ನಿಸಲು ಬಯಸುತ್ತೇನೆ. ಆಕೆ ಒಬ್ಬಳು ವೈದ್ಯೆಯಾಗಿ ದೇಶ ಸೇವೆಗೈದು ಎಲ್ಲರಿಗೂ ಹೆಮ್ಮೆ ತರುತ್ತಿದ್ದಳು,'' ಎಂದು ನಿರ್ಭಯಾ ತಾಯಿ ಆಶಾ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News