ಗೆಲ್ಲಬೇಕಾದ ಕ್ಲೀನ್ ಕಿಮ್ಮನೆ

Update: 2018-05-05 18:41 GMT

‘‘ಹಣದಿಂದ ಜನರನ್ನು ಗೆಲ್ಲಬಹುದು ಎನ್ನುವ ಮನೋಭಾವ ದವರು ಅಧಿಕವಾಗುತ್ತಿದ್ದಾರೆ. ಆದರೆ, ತೀರ್ಥಹಳ್ಳಿಯಂತಹ ಕ್ಷೇತ್ರದಲ್ಲಿ ಇದು ಸಾಧ್ಯವಿಲ್ಲದ ಮಾತು. ಕುವೆಂಪು, ಕಡಿದಾಳ್ ಮಂಜಪ್ಪ, ಗೋಪಾಲಗೌಡರ ಈ ನಾಡಿನಲ್ಲಿ ಯಾವತ್ತೂ ಜನರು ಸಜ್ಜನಿಕೆಯನ್ನು ಬಿಟ್ಟುಕೊಟ್ಟಿಲ್ಲ’’ ಎಂದು ತುಂಬು ವಿಶ್ವಾಸದಿಂದ ತನ್ನ ಕ್ಷೇತ್ರದ ಜನರ ಬಗ್ಗೆ ಹೇಳುವ ಕಿಮ್ಮನೆ ರತ್ನಾಕರ, ತಾವೂ ಕೂಡ ಜನರಿಟ್ಟ ನಂಬಿಕೆಗೆ ದ್ರೋಹ ಬಗೆಯದ, ಕೈ ಬಾಯಿ ಕೆಡಿಸಿಕೊಳ್ಳದ ಸರಳ ಸಜ್ಜನ ರಾಜಕಾರಣಿ.
ಸಮಕಾಲೀನ ಸಂದರ್ಭದಲ್ಲಿ ರಾಜಕಾರಣ ಎನ್ನುವುದು ಎಲ್ಲರಿಗೂ ಅಲ್ಲ. ಸುಲಭವೂ ಅಲ್ಲ. ಅಪಾರ ಹಣವಿರುವ, ಪ್ರತಿಷ್ಠಿತ ಕೌಟುಂಬಿಕ ಹಿನ್ನೆಲೆಯುಳ್ಳ, ಜಾತಿ ಬಲ, ತೋಳ್ಬಲ ಹೊಂದಿರುವ ವ್ಯಕ್ತಿಯಾಗಿರಬೇಕು. ಇದಲ್ಲದೆ ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುವ ಬುದ್ಧಿವಂತನಾಗಿರಬೇಕು. ಸಮಸ್ಯೆಗಳಿಗೆ ಸ್ಪಂದಿಸದಿದ್ದರೂ ಪಕ್ಷಕ್ಕೆ-ನಾಯಕರಿಗೆ ನಿಷ್ಠೆ ತೋರಬೇಕು. ಸುಳ್ಳನ್ನೇ ಸತ್ಯವೆಂದು ಸಾಬೀತುಪಡಿಸುವ ಛಾತಿಯಿರಬೇಕು. ಸುಲಭದಲ್ಲಿ ದುಡ್ಡು ಮಾಡುವ ಹಾದಿಗಳನ್ನು ಆವಿಷ್ಕರಿಸುವ ಚಾಣಾಕ್ಷನಾಗಿರಬೇಕು. ವಿರೋಧಿಗಳನ್ನು, ಮಾಧ್ಯಮಗಳನ್ನು ಮ್ಯಾನೇಜ್ ಮಾಡುವ ಕಲೆ ಕರಗತ ಮಾಡಿಕೊಂಡಿರಬೇಕು. ಇದು ಇವತ್ತಿನ ರಾಜಾರಣಿಗಿರಬೇಕಾದ ಗುಣ ಲಕ್ಷಣಗಳು.
 
ಇದಾವ ಗುಣಲಕ್ಷಣಗಳನ್ನು ಹೊಂದಿರದ, ಮೂರು ದಶಕಗಳ ರಾಜಕಾರಣದಲ್ಲಿ ಇದೆಲ್ಲವನ್ನೂ ಬಹಳ ಹತ್ತಿರದಿಂದ ಕಂಡಿರುವ ಕಿಮ್ಮನೆ ರತ್ನಾಕರ, ‘‘ನಾನು ಮತ್ತು ನನ್ನ ಕ್ಷೇತ್ರದ ಜನ ಇವತ್ತಿಗೂ ಈ ಹೊಸ ರಾಜಕಾರಣಕ್ಕೆ ಬಲಿ ಬೀಳದೆ, ಬದಲಾಗದೆ ನಮ್ಮತನವನ್ನು ಉಳಿಸಿಕೊಂಡಿದ್ದೇವೆ’’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮತ್ತು ತೀರ್ಥಹಳ್ಳಿ ಕ್ಷೇತ್ರದಲ್ಲಿ ಅಂತಹ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಕುವೆಂಪು, ಕಡಿದಾಳ್ ಮಂಜಪ್ಪ, ಗೋಪಾಲಗೌಡರ ತೀರ್ಥಹಳ್ಳಿಯ ಘನತೆ, ಗೌರವವನ್ನು ಉಳಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಕಿಮ್ಮನೆಯ ಮಂಜಪ್ಪಗೌಡರು, ಒಕ್ಕಲಿಗ ಜಾತಿಗೆ ಸೇರಿದ ಶ್ರೀಮಂತ ಜಮೀನ್ದಾರರು. 11 ಜನ ಮಕ್ಕಳ ಬಹಳ ದೊಡ್ಡ ಕೂಡು ಕುಟುಂಬ. ಅವರ ಮಗನಾದ ರತ್ನಾಕರ ಎಸೆಸೆಲ್ಸಿವರೆಗೆ ತೀರ್ಥಹಳ್ಳಿಯಲ್ಲಿ ಓದಿ, ಪಿಯುಸಿಯನ್ನು ಕಾರ್ಕಳದಲ್ಲಿ ಮುಗಿಸಿ, ಶಿವಮೊಗ್ಗದಲ್ಲಿ ಎಲ್‌ಎಲ್‌ಬಿ ಪದವಿ ಪಡೆದವರು. ಶಿವಮೊಗ್ಗದಲ್ಲಿಯೇ ವಕೀಲ ವೃತ್ತಿ ಆರಂಭಿಸಿದ ರತ್ನಾಕರ, ತೀರ್ಥಹಳ್ಳಿಯಲ್ಲಿ ಕೋರ್ಟ್ ಆರಂಭವಾದ ನಂತರ, ಅಲ್ಲಿಯೇ ವೃತ್ತಿ ಮುಂದುವರಿಸಿದವರು. ಸಮಾಜವಾದಿ ಗೋಪಾಲಗೌಡರ ಹೋರಾಟದ ಬದುಕು, ವಿಶ್ವಮಾನವ ಕುವೆಂಪು ಸಾಹಿತ್ಯ, ಬಡ ಗೇಣಿದಾರರ ಕಷ್ಟಗಳನ್ನು ಅರಗಿಸಿಕೊಂಡಿದ್ದ ರತ್ನಾಕರ, ಬಡ ರೈತರ ಪರ ಉಚಿತವಾಗಿ ವಕಾಲತ್ತು ವಹಿಸುತ್ತ, ಅವರಿಗೆ ನೆರವಾಗುತ್ತ ಜನಾನುರಾಗಿಯಾಗಿ ಬೆಳೆದವರು.
ಜನರೊಂದಿಗೆ ಬೆರೆತು ಬೆಳೆಯುತ್ತಲೇ ರಾಜಕಾರಣದತ್ತ ಆಕರ್ಷಿತರಾದ ಕಿಮ್ಮನೆಯವರು, 1990ರಲ್ಲಿ ದೇವೇಗೌಡರ ಜನತಾ ಪಕ್ಷ ಸೇರಿ, ಸ್ವಲ್ಪದಿನ ಸೈಕಲ್ ಹೊಡೆದು, ನಂತರ ಕಾಂಗ್ರೆಸ್ ಸೇರಿದರು. 2004ರಲ್ಲಿ ತೀರ್ಥಹಳ್ಳಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ, ಬಿಜೆಪಿಯ ಅರಗ ಜ್ಞಾನೇಂದ್ರರಿಂದ ಸೋತರು. ನಂತರ 2008ರಲ್ಲಿ ಗೆದ್ದರು. 2013ರಲ್ಲಿ ಸತತ ಎರಡನೇ ಬಾರಿ ಗೆದ್ದು, ಅನುಭವಿ ಶಾಸಕರಾಗಿ ರೂಪಗೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ತಮ್ಮ ಇತಿಮಿತಿಯಲ್ಲಿಯೇ ಇಲಾಖೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವ ಮೂಲಕ ರಾಜ್ಯದ ಗಮನ ಸೆಳೆದರು. ಸಂಪುಟ ಪುನಾರಚನೆಯ ಸಂದರ್ಭದಲ್ಲಿ, ಯಾವ ಆಪಾದನೆಗಳಿಲ್ಲದಿದ್ದರೂ ಸಚಿವ ಸ್ಥಾನದಿಂದ ತೆರವುಗೊಳಿಸಲು ಪಕ್ಷ ತೀರ್ಮಾನಿಸಿದಾಗ, ‘‘ನನಗಿಂತ ಹಿರಿಯರಾದ ಕಾಗೋಡು ತಿಮ್ಮಪ್ಪನವರು ಸಚಿವರಾಗುತ್ತಾರೆಂದರೆ, ಅದು ನಮ್ಮ ಜಿಲ್ಲೆಯ ಗೌರವದ ಸಂಕೇತ. ಅವರಿಗಾಗಿ ಸ್ಥಾನ ಬಿಟ್ಟುಕೊಡುವುದು ನನ್ನ ಪಾಲಿನ ಸೌಭಾಗ್ಯ’’ ಎಂದು ರಾಜಕಾರಣದಲ್ಲಿ ಕಾಣಲಾರದ ಸೌಜನ್ಯ ತೋರಿ ದೊಡ್ಡ ಮನುಷ್ಯ ಎನಿಸಿಕೊಂಡರು. ಹಣ ಅಧಿಕಾರದ ಆಸೆಗೆ ಬೀಳದೆ ಪ್ರತಿಯೊಬ್ಬ ರಾಜಕಾರಣಿಗೂ ಮಾದರಿಯಾದರು. ಅಂತಹ ರಾಜಕಾರಣಿಗಳು ಕರ್ನಾಟಕದಲ್ಲಿ ದ್ದಾರೆ ಎಂದು ದೇಶಕ್ಕೆ ಸಾರಿದರು.
ಇನ್ನು ನಂದಿನಿ ಎಂಬ ಹುಡುಗಿಯ ಆತ್ಮಹತ್ಯೆ ಪ್ರಕರಣದಲ್ಲಿ ಕೋಮುವಾದಿಗಳು ಕಿಮ್ಮನೆಯವರನ್ನು ನೇಣುಗಂಬಕ್ಕೇರಿಸಿ, ತೀರ್ಥಹಳ್ಳಿಗೆ ಬೆಂಕಿ ಹಚ್ಚುವುದರಲ್ಲಿದ್ದರು. ಆದರೆ ಕಿಮ್ಮನೆಯವರ ನೇರ ನಡವಳಿಕೆ ಮತ್ತು ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ಸ್ವಲ್ಪದರಲ್ಲಿಯೇ ತಪ್ಪಿತು ಹಾಗೂ ತೀರ್ಥಹಳ್ಳಿಯ ಜನ ನೆಮ್ಮದಿಯ ನಿಟ್ಟುಸಿರುಬಿಡುವಂತಾಯಿತು. ಇವತ್ತಿಗೂ ಕಿಮ್ಮನೆಯವರು ಶಾಸಕ, ಮಂತ್ರಿ ಎಂಬ ಅಧಿಕಾರದ ಪಿತ್ತ ನೆತ್ತಿಗೇರಿಸಿಕೊಳ್ಳದವರು. ಕಟೌಟ್, ಬ್ಯಾನರ್, ಫ್ಲೆಕ್ಸ್ ಗಳನ್ನು ಹಾಕಿಸಿಕೊಳ್ಳದವರು. ಪುಂಡು ಪುಢಾರಿಗಳ ಪಠಾಲಂ ಕಟ್ಟಿಕೊಳ್ಳದವರು. ದ್ವೇಷದ ರಾಜಕಾರಣದಿಂದ ದೂರವುಳಿದವರು. ಪರಮ ಪ್ರಾಮಾಣಿಕರು. ಊರಿನ ಬೀದಿಗಳಲ್ಲಿ ಒಬ್ಬರೇ ಬೆಳಗಿನ ಜಾವ ವಾಕ್ ಮಾಡುತ್ತ ಜನರ ಕೈಗೆ ಸಿಗುವಷ್ಟು ಸರಳರು. 2013 ರಲ್ಲಿ ಮಂತ್ರಿಯಾಗಿದ್ದಾಗ ಊರಿಗೆ ಬರುವ ದಾರಿಯಲ್ಲಿ ಕೆರೆಯಲ್ಲಿ ಮುಳುಗುತ್ತಿದ್ದ ಕಾರನ್ನು ಕಂಡು, ಖುದ್ದು ನೀರಿಗಿಳಿದು ಆರು ಜನರನ್ನು ಮೇಲೆತ್ತಿ ಪ್ರಾಣ ಉಳಿಸಿ ಮಾನವೀಯತೆ ಮೆರೆದವರು.
ಇಂತಹ ವಿಷಮ ಪರಿಸ್ಥಿತಿಯಲ್ಲೂ ಭಿನ್ನ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರೂ, ತೀರ್ಥಹಳ್ಳಿಯ ಸಾಮಾನ್ಯ ಮತದಾರರು ಕಿಮ್ಮನೆ ಕುರಿತು ಹೇಳುವುದೇ ಬೇರೆ ‘‘ಕಿಮ್ಮನೆ ರತ್ನಾಕರ ತುಂಬಾ ಒಳ್ಳೆಯವರು, ಕೆಲಸಗಾರರು, ಎರಡು ಮಾತಿಲ್ಲ. ದುಡ್ಡು ಕಾಸಿಗೆ ಆಸೆ ಪಟ್ಟವರಲ್ಲ. ನಮ್ಮ ತೀರ್ಥಹಳ್ಳಿ ಕ್ಷೇತ್ರದ ರಸ್ತೆಗಳು, ಅವುಗಳ ಗುಣಮಟ್ಟ ನೋಡಿದರೆ, ಅದು ಅರ್ಥವಾಗುತ್ತದೆ. ದುಡ್ಡು ಸಂಪಾದನೆ ಮಾಡಬೇಕೆಂದು ರಾಜಕಾರಣಕ್ಕೆ ಬಂದವರಲ್ಲ. ದುರಹಂಕಾರಿಯಲ್ಲ. ದ್ವೇಷ, ಅಸೂಯೆ, ಹೊಟ್ಟೆಕಿಚ್ಚು ಅವರಲ್ಲಿಲ್ಲ. ಅವರ ಮೇಲೆ ಯಾವ ಗುರುತರವಾದ ಆರೋಪಗಳೂ ಇಲ್ಲ. ಸಭ್ಯ ರಾಜಕಾರಣಿ ಎಂಬುದಕ್ಕೆ ನಮಗೆ ಹೆಮ್ಮೆ ಇದೆ. ಆದರೆ ಡೌನ್ ಟು ಅರ್ಥ್ ಅಲ್ಲ, ಪಕ್ಷದ ಕಾರ್ಯಕರ್ತರಿಗೆ ಸ್ಪಂದಿಸುವುದಿಲ್ಲ. ಸಮಾಜವಾದಿ ಅಂತಾರೆ, ಗೋಪಾಲಗೌಡ್ರು ಕೋಣಂದೂರು ಲಿಂಗಪ್ಪನವರನ್ನು ಬೆಳೆಸಿದರು. ಅವರ ಹಾದಿಯಲ್ಲಿಯೇ ಬಂದ ಕಿಮ್ಮನೆಯವರು ಸೆಕೆಂಡ್ ಲೈನ್ ಲೀಡರ್‌ಗಳನ್ನು ಬೆಳೆಸಲಿಲ್ಲ. ಕ್ಷೇತ್ರದಲ್ಲಿ ಬಂಟರು, ಈಡಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ಒಕ್ಕಲಿಗರನ್ನು ಬಿಟ್ಟು ಮಿಕ್ಕ ಜಾತಿ ಜನಗಳಿಗೆ ಅವಕಾಶ ಕಲ್ಪಿಸಿಕೊಡಲಿಲ್ಲ. ಮರಳು ಮಾಫಿಯಾ ಅತಿಯಾಗಿದೆ, ತಡೆಯಲಿಲ್ಲ. ಅಧಿಕಾರಿಗಳಿಗೆ ಭಯವಿಲ್ಲ, ಸರಕಾರಿ ಕಚೇರಿಗಳು ಭ್ರಷ್ಟ ವ್ಯವಸ್ಥೆಯಿಂದ ಮುಕ್ತವಾಗಲಿಲ್ಲ. ಕುವೆಂಪು-ವೈಚಾರಿಕತೆ ಬಗ್ಗೆ ಮಾತನಾಡುತ್ತಾರೆ. ಆದರೆ ಸಣ್ಣಪುಟ್ಟ ವಿಷಯಕ್ಕೂ ದೇವರು-ದೇವಸ್ಥಾನ ಅಂತಾರೆ, ಆಣೆ ಪ್ರಮಾಣ ಮಾಡಕ್ಕೆ ಮುಂದಾಗ್ತಾರೆ. ಬ್ರಾಹ್ಮಣರು ಬಿಜೆಪಿ ಪರವಾಗಿದ್ದಾರೆಂದು ಭಾವಿಸಿ, ಅವರನ್ನು ಅಗತ್ಯಕ್ಕಿಂತ ಹೆಚ್ಚು ಓಲೈಸುತ್ತಾರೆ. ಅವರೇಳಿದಂತೆ ಕೇಳುತ್ತಾರೆ’’ ಎಂದು ಆರೋಪಿಸುತ್ತಾರೆ.
ಇದರಲ್ಲಿ ಸತ್ಯವಿರಲೂಬಹುದು. ಮನುಷ್ಯ ಅಂದಮೇಲೆ ಒಪ್ಪುವವರು, ತಪ್ಪುಕಂಡು ಹಿಡಿದು ತೆಗಳುವವರು ಇದ್ದೇ ಇರುತ್ತಾರೆ. ಅದರಲ್ಲೂ ರಾಜಕಾರಣದಂತಹ ಸಾರ್ವಜನಿಕ ಬದುಕಿನಲ್ಲಿ, ಎಲ್ಲರೂ ಮೆಚ್ಚುವಂತೆ ಬದುಕಲಿಕ್ಕಾಗುವುದಿಲ್ಲ. ಆದರೆ ಬಿಜೆಪಿಯ ಅರಗ ಜ್ಞಾನೇಂದ್ರರಿಗಿಂತ, ಜೆಡಿಎಸ್‌ನ ಮಂಜುನಾಥ್ ಗೌಡರಿಗಿಂತ ಒಂದಲ್ಲ, ಎರಡಲ್ಲ, ಸಾವಿರ ಪಾಲು ಉತ್ತಮ. ಕಿಮ್ಮನೆ ರತ್ನಾಕರ ಅವರ ಮೂರು ದಶಕದ ಸ್ವಚ್ಛ ರಾಜಕೀಯ ನಡೆಯೇ ಅದನ್ನು ಸಾಬೀತು ಪಡಿಸಿದೆ. ಯಡಿಯೂರಪ್ಪನವರನ್ನು ಎದುರು ಹಾಕಿಕೊಂಡಿರುವ ಅರಗ ಜ್ಞಾನೇಂದ್ರ ಗೆಲ್ಲುವುದಿಲ್ಲ. ಸಹಕಾರಿ ಬ್ಯಾಂಕ್ ಮುಳುಗಿಸಿದ ಮಂಜುನಾಥ್ ಗೌಡ ಗೆಲ್ಲುವುದು ಬಿಜೆಪಿಯವರಿಗೂ ಇಷ್ಟವಿಲ್ಲ. ಅಂದಮೇಲೆ ಸಾಮಾಜಿಕ ಕಳಕಳಿಯುಳ್ಳ, ಬಡವರ, ಶೋಷಿತರ ದನಿಯಾಗಿರುವ ಕಿಮ್ಮನೆಗಿಂತ ಉತ್ತಮ ಯೋಗ್ಯ ಅಭ್ಯರ್ಥಿ ಯಾರಿದ್ದಾರೆ? ತೀರ್ಥಹಳ್ಳಿಯ ಜನ ಕಿಮ್ಮನೆ ರತ್ನಾಕರ ಥರದ ರಾಜಕಾರಣಿಗಳನ್ನು ಗೆಲ್ಲಿಸುವ ಮೂಲಕ ಮಲೆನಾಡಿಗೆ ಮರ್ಯಾದೆಯನ್ನು, ಸಭ್ಯ ರಾಜಕಾರಣದ ಪರಂಪರೆಯನ್ನು ಮುಂದುವರಿಸಬೇಕಾಗಿದೆ.
ಹಾಗೆಯೇ, ಈ ಬಾರಿಯ 2018ರ ವಿಧಾನಸಭಾ ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ ಅವರಂತೆಯೇ ಇನ್ನೊಂದಷ್ಟು ಜನ ಸಭ್ಯರು, ಸರಳರು, ಪ್ರಾಮಾಣಿಕರು, ಮಾನವಂತರು, ಮುತ್ಸದ್ದಿಗಳು, ಬದಲಾವಣೆ ಬಯಸುವ ಉತ್ಸಾಹಿ ತರುಣರು, ಹೋರಾಟಗಾರರು ಕಣದಲ್ಲಿದ್ದಾರೆ. ಸದ್ಯದ ರಾಜಕಾರಣದಲ್ಲಿ ಪರಮ ಸತ್ಯಸಂದನನ್ನು ಹುಡುಕುವುದು ಕಡು ಕಷ್ಟದ ಕೆಲಸ. ಅದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೂ, ಆಯ್ಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ, ಸ್ಪರ್ಧಾಕಣದಲ್ಲಿರುವ ಮೂವರಲ್ಲಿ ಕಡಿಮೆ ಅಪಾಯಕಾರಿಯಾದವರನ್ನು ಆರಿಸಿಕೊಳ್ಳುವ ಜಾಣ್ಮೆ ಈಗ ಮತದಾರರ ಮುಂದಿದೆ.

Writer - -ಬಸು ಮೇಗಲಕೇರಿ

contributor

Editor - -ಬಸು ಮೇಗಲಕೇರಿ

contributor

Similar News