ಮುದ್ದು-ಮದ್ದು-ಸದ್ದುಗಳ ಸಂಜು

Update: 2018-06-30 18:34 GMT

ಹಿಂದಿ ಚಿತ್ರನಟ ಸಂಜಯ್ ದತ್ ಈ ಜುಲೈ ಇಪ್ಪತ್ತೊಂಬತ್ತಕ್ಕೆ ಅರವತ್ತನೆ ವರ್ಷಕ್ಕೆ ಕಾಲಿಡುತ್ತಾರೆ. ಈತ ಒಂದಷ್ಟು ಒಳ್ಳೆಯ ಚಿತ್ರಗಳಲ್ಲಿ ನಟಿಸಿ, ಜನಪ್ರಿಯತೆ ಗಳಿಸಿ, ಪ್ರಶಸ್ತಿಗಳನ್ನು ಪಡೆದದ್ದು ಬಿಟ್ಟರೆ, ಮಹತ್ತರ ಸಾಧನೆ ಮಾಡಿದ ಮಹಾನುಭಾವರೇನಲ್ಲ. ನಾಲ್ಕು ಜನಕ್ಕೆ ಮಾದರಿಯಾಗಿ ನಿಲ್ಲಬಲ್ಲ ವ್ಯಕ್ತಿತ್ವವೂ ಅವರದಲ್ಲ. ಬದಲಿಗೆ ಜೀವನದುದ್ದಕ್ಕೂ ವಿಕ್ಷಿಪ್ತ ಮತ್ತು ವಿವಾದಾತ್ಮಕ ನಡೆ-ನುಡಿಯಿಂದಾಗಿ ಸದಾ ಸುದ್ದಿಯಲ್ಲಿದ್ದವರು. ಕಾಲದ ಮಹಿಮೆಯೋ ಏನೋ, ಸಂಜಯ್‌ನ ವಿವಾದಾತ್ಮಕ ಬದುಕು ಈ ಕಾಲಕ್ಕೆ ವಿಶಿಷ್ಟವಾಗಿ ಕಾಣುತ್ತಿದೆ. ಅದು ‘ಸಂಜು’ ಎಂಬ ಚಿತ್ರವಾಗಿ ತೆರೆಯ ಮೇಲೆ ರಾರಾಜಿಸುತ್ತಿದೆ. ಟೀಸರ್‌ನಿಂದ ಹಿಡಿದು ಚಿತ್ರ ಬಿಡುಗಡೆಯವರೆಗೆ, ಸುದ್ದಿ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ.

ಸಂಜಯ್ ದತ್ ಜೀವನವನ್ನಾಧರಿಸಿದ ‘ಸಂಜು’ ಸಿನೆಮಾದ ಟ್ರೇಲರ್ ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಜನರಿಂದ ವೀಕ್ಷಣೆಗೊಳಗಾಗಿದೆ. ಮುದ್ದು ಹುಡುಗ ಮದ್ದಿನ ನಶೆಗೆ ಸಿಲುಕಿ, ಭೂಗತ ಜಗತ್ತಿನ ನಂಟು ಬೆಳೆಸಿ, ಭಯೋತ್ಪಾದಕನ ಬಲೆಯಲ್ಲಿ ಬಿದ್ದು, ಮದುವೆ-ಸಂಸಾರದಲ್ಲಿ ಬಿರುಕುಂಟಾಗಿ, ತಂದೆ-ತಾಯಿ ಪ್ರೀತಿ ಅತಿಯಾಗಿ, ಸೆರೆವಾಸ, ಸಿನೆಮಾ, ಬದಲಾದ ಪಾತ್ರ-ವೇಷ... ನಿಜಕ್ಕೂ ಹೀಗಿತ್ತಾ ಸಂಜಯ್ ದತ್ ಬದುಕು ಎಂದು ಕುತೂಹಲ ಕೆರಳಿಸುತ್ತದೆ. ಸಾಮಾನ್ಯವಾಗಿ ಸಿನೆಮಾಗಳನ್ನು ಲಾರ್ಜರ್ ದ್ಯಾನ್ ಲೈಫ್ ಎನ್ನುತ್ತಾರೆ. ಆದರೆ ‘ಸಂಜು’ ಸಿನೆಮಾ ಅದನ್ನೂ ಮೀರಿದ್ದು. ಹೀರೋ-ವಿಲನ್ ಇಬ್ಬರೂ ಒಬ್ಬನೆ. ಪ್ರತಿ ದೃಶ್ಯವೂ ವಾಸ್ತವ ಮತ್ತು ಚಿತ್ರ ಜಗತ್ತಿನ ನಡುವಿನ ತಾಕಲಾಟವನ್ನು ತೋರುವಂತಹದ್ದು. ‘ಒನ್ ಮ್ಯಾನ್‌ಮೆನಿ ಲೈವ್ಸ್’ ಅಡಿ ಬರಹ ಹೊಂದಿರುವ ‘ಸಂಜು’ ಸಿನೆಮಾದೊಂದಿಗೆ ಹಗರಣ, ನೋವು, ಜೈಲು, ಟೀಕೆ, ಅವಮಾನ ಹೀಗೆ ಸಂಜಯ್ ದತ್ ಅವರ ಕಾಣದ ಮುಖಗಳು ಇಲ್ಲಿ ತೆರೆದುಕೊಳ್ಳುತ್ತವೆ. ರಣಬೀರ್ ಕಪೂರ್, ಸಂಜಯ್ ದತ್ ತದ್ರೂಪಿಯಂತೆ ಕಾಣುತ್ತಾರೆ. ಸಂಜಯ್ ದತ್ ಅವರ ಪತ್ನಿ ಮಾನ್ಯತಾ ದತ್ ಪಾತ್ರದಲ್ಲಿ ದಿಯಾ ಮಿರ್ಜಾ ಕಾಣಿಸಿಕೊಂಡಿದ್ದಾರೆ. ರಾಜ್‌ಕುಮಾರ್ ಹಿರಾನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಧು ವಿನೋದ್ ಛೋಪ್ರಾ ನಿರ್ಮಿಸಿದ್ದಾರೆ. ಇವತ್ತಿನ ಸುದ್ದಿ ಮಾಧ್ಯಮಗಳಿಗೆ- ಅದರಲ್ಲೂ ದೃಶ್ಯ ಮಾಧ್ಯಮಗಳಿಗೆ- ಗ್ಲ್ಯಾಮರ್, ಕ್ರೈಮ್, ಸೆಕ್ಸ್ ಈ ಮೂರೂ ಇದ್ದ ಸುದ್ದಿಗಳು ಮುಖ್ಯವಾಗುತ್ತವೆ. ಸಂಘರ್ಷ, ಪ್ರಮಾದ, ದುರಂತಗಳು ಮುನ್ನೆಲೆಗೆ ಬರುತ್ತವೆ. ಕಾಕತಾಳೀಯವೋ ಏನೋ, ಸಂಜಯ್ ದತ್ ಬದುಕಿನಲ್ಲಿ ಇವೆಲ್ಲವೂ ಹೇರಳವಾಗಿವೆ. ಇವೆಲ್ಲವನ್ನೂ ಒಳಗೊಂಡ ‘ಸಂಜು’ ಸಮಾಜಕ್ಕೆ ಸಂದೇಶ ಸಾರುವ, ಕೆಡುಕನ್ನು ವಿಸ್ತರಿಸುವ ಚಿತ್ರವೂ ಆಗಿದೆ. ಸಂಜಯ್ ದತ್‌ರನ್ನು ಹಾದಿ ತಪ್ಪಿದ ಹುಡುಗನನ್ನಾಗಿ, ವಯೋಸಹಜ ದಿನಗಳಲ್ಲಾದ ಹಳವಂಡಗಳಿಗೆ ಬಲಿಯಾದ ವ್ಯಕ್ತಿಯನ್ನಾಗಿ, ಮನುಷ್ಯ ಸಹಜ ಗುಣಾವಗುಣಗಳು ಆತನಲ್ಲೂ ಇದ್ದವು ಎನ್ನುವುದಾಗಿ ಚಿತ್ರಿಸಿ ಜನರ ಮುಂದಿಡಲು ಯತ್ನಿಸಲಾಗಿದೆ. ಇದು ಸಹಜವಾಗಿಯೇ, ದೃಶ್ಯ ಮಾಧ್ಯಮಗಳ ಸಾಲಿಡ್ ಸ್ಟೋರಿಗೆ ವಸ್ತುವಾಗಿದೆ. ‘ನಾನು 308 ಮಹಿಳೆಯರ ಜತೆ ಮಲಗಿದ್ದೇನೆ’ ಎಂಬಂತಹ ಹೇಳಿಕೆಗಳು ದಿನಕ್ಕೊಂದು ಕತೆ ಕಟ್ಟಲು ಅನುಕೂಲವಾಗಿವೆ. ಕತೆಯೊಂದಿಗೆ ಚಿತ್ರದ ತುಣುಕುಗಳನ್ನು ಪೋಣಿಸಿ ಪ್ರಸಾರ ಮಾಡುತ್ತ ಟಿಆರ್‌ಪಿ ಹೆಚ್ಚಿಸಿಕೊಂಡಿದ್ದೂ ಆಗಿದೆ.
ಈ ಸಂಜಯ್ ದತ್- ಹಿಂದಿ ಚಿತ್ರರಂಗದ ಖ್ಯಾತ ಕಲಾವಿದರಾದ ಸುನಿಲ್ ದತ್ ಮತ್ತು ನರ್ಗಿಸ್‌ರ ಮಗ. ತಂದೆ ಸುನಿಲ್ ದತ್ ಸೌಮ್ಯ ಸ್ವಭಾವದ ಸಜ್ಜನ. ಅಪ್ಪಟ ದೇಶಪ್ರೇಮಿ. ಸಾಮಾಜಿಕ ಕಾಳಜಿಯುಳ್ಳ ಮಾನವೀಯ ಮನುಷ್ಯ. ತಾಯಿ ನರ್ಗಿಸ್ ಮಿತ ಮಾತಿನ ಮುಗ್ಧೆ. ನೋವು ನುಂಗಿ ಅರಳಿದ ನಿಜಕಲಾವಿದೆ. ಭಾರತೀಯ ಚಿತ್ರರಂಗದ ಖ್ಯಾತ ಅಭಿನೇತ್ರಿ. ಕುತೂಹಲಕರ ಸಂಗತಿ ಎಂದರೆ, ಸಂಜಯ್ ಬೆಳೆಯುವ ಸಮಯಕ್ಕೆ ಇಬ್ಬರೂ ಬಿಡುವಿಲ್ಲದ ಕಲಾವಿದರಾಗಿ ಲಾಲನೆ-ಪಾಲನೆ ಬಗ್ಗೆ ಗಮನ ಹರಿಸದೆ ಹೋದದ್ದು, ಪೋಷಕರ ಖ್ಯಾತಿ, ಹಣ ಅನಾಯಾಸವಾಗಿ ಸಿಕ್ಕಿದ್ದು, ಮಕ್ಕಳಿಗೆ ಯಾವುದೇ ಕೊರತೆಯಾಗದಿರಲಿ ಎಂದು ಅವರು ಕೇಳುವುದಕ್ಕೆ ಮುಂಚೆಯೇ ಕೊಡಿಸಿದ್ದು, ಸ್ವತಂತ್ರ, ಸ್ವೇಚ್ಛಾಚಾರ ಜೊತೆಯಾಗಿದ್ದು- ಸಂಜಯ್ ದತ್ ಹಾದಿ ತಪ್ಪಿದ ಹುಡುಗನಾಗಲು ಕಾರಣವಾಯಿತೇ? ಮುಂಬೈ ಬಾಂಬ್ ಬ್ಲಾಸ್ಟ್‌ನಂತಹ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗುವಂತೆ ಮಾಡಿತೇ? ಎ್ನುವುದೀಗ ಚರ್ಚೆಯ ವಸ್ತುವಾಗಿದೆ.
ಹಾಗೆ ನೋಡಿದರೆ, ಸಂಜಯ್ ದತ್ ತಂದೆ ಸುನಿಲ್ ದತ್ ಹಿಂದೂ, ತಾಯಿ ನರ್ಗಿಸ್ ಮುಸ್ಲಿಂ. ಇಬ್ಬರ ರಕ್ತವನ್ನು ಹಂಚಿಕೊಂಡು ಹುಟ್ಟಿದ ಸಂಜಯ್ ನಿಜವಾದ ಜಾತ್ಯತೀತನಾಗಬೇಕಾಗಿತ್ತು. ಈ ದೇಶದ ಮಣ್ಣಿನ ಗುಣವನ್ನು ಪ್ರತಿನಿಧಿಸುವ ಮನುಷ್ಯನಾಗಬೇಕಾಗಿತ್ತು. ಹಾಗಾಗದೆ, ಮಾದಕ ವ್ಯಸನಿಯಾದ. ಗುಂಡುಗಳಿದ್ದ ಬಂದೂಕು ಆಟದ ವಸ್ತುವಾಗಿ, ಪ್ರಾಣಿಗಳನ್ನು ಬೇಟೆಯಾಡಿ ವಿವಾದಕ್ಕೊಳಗಾದ. ಕಾಯ್ದೆ-ಕಾನೂನುಗಳನ್ನು ಉಲ್ಲಂಘಿಸಿದ. ಸರಿ-ತಪ್ಪುಗಳ ಗಡಿ ದಾಟಿದ. ಸ್ಟಾರ್ ಎಂಬ ಧಿಮಾಕು ಬೆಳೆಸಿಕೊಂಡ. ಬಟ್ಟೆ ಬದಲಿಸಿದಂತೆ ಹುಡುಗಿಯರನ್ನು ಬದಲಾಯಿಸಿದ. ಎಲ್ಲದರಲ್ಲೂ ಉನ್ಮತ್ತ ಸ್ಥಿತಿ ತಲುಪಿದ. ಬೇಡದ ಭೂಗತ ಲೋಕದ ಸಹವಾಸಕ್ಕೆ ಬಿದ್ದು ವಿವೇಚನಾಶೂನ್ಯನಾದ. ಮುಂಬೈ ಬಾಂಬ್ ಸ್ಫೋಟದಲ್ಲಿ ಹೆಸರು ತಳಕು ಹಾಕಿಕೊಂಡು ಐದು ರ್ಷಗಳ ಕಾಲ ಸೆರೆಮನೆ ವಾಸಿಯಾದ.
1981 ರಲ್ಲಿ ಚಿತ್ರರಂಗಕ್ಕೆ ನಾಯಕನಟನಾಗಿ ಅಡಿಯಿಟ್ಟಾಗ, ಆರಡಿ ಎತ್ತರದ ಅಮಲುಗಣ್ಣಿನ ಹುಡುಗನಾಗಿದ್ದ. ಶರ್ಟಿನ ಮೇಲಿನೆರಡು ಬಟನ್ ಬಿಚ್ಚಿ ತೆರೆದೆದೆ ತೋರುವ, ಉದ್ದ ಕೂದಲಿನ, ತುಟಿಯಂಚಲ್ಲಿ ಸದಾ ಸಿಗರೇಟು ಸುಡುತ್ತ, ಬೆಂಕಿಯ ಕಿಡಿಯಂತಿದ್ದ. ಅದೇ ಸಮಯದಲ್ಲಿ ಅತಿಯಾಗಿ ಪ್ರೀತಿಸುತ್ತಿದ್ದ ಅಮ್ಮ ನರ್ಗಿಸ್ ನಿಧನರಾದರು. ಇದು ಆತನ ಬದುಕಲ್ಲಿ ಭಾರೀ ಬದಲಾವಣೆಗೆ ಕಾರಣವಾಯಿತು. ಮೊದಲೇ ಅತಂತ್ರವಾಗಿದ್ದ ಬದುಕು ಬಿರುಗಾಳಿಗೆ ಸಿಕ್ಕ ಗಾಳಿಪಟದಂತಾಯಿತು. ಮಾಡಿದ ಮೊದಲ ಚಿತ್ರ ಭಾರೀ ಗಳಿಕೆ ಕಂಡು, ಭವಿಷ್ಯದ ಚಿತ್ರಬದುಕನ್ನು ಭದ್ರ ಮಾಡುವತ್ತ ಭರವಸೆ ನೀಡುತ್ತಿದ್ದರೆ, ಮತ್ತೊಂದು ಕಡೆ ಬದುಕಿನ ಆಧಾರಸ್ತಂಭವಾಗಿದ್ದ ಅಮ್ಮನ ಕಣ್ಮರೆಯಿಂದಾಗಿ ಕತ್ತಲಾವರಿಸಿತ್ತು. ಒಂದು ಕಡೆ ಕೀರ್ತಿ, ಮತ್ತೊಂದು ಕಡೆ ಕೊರಗು. ಹೊರಬರಲು ಮಾದಕವಸ್ತುವಿನ ಮೊರೆ ಹೋದ. ಅಮಲಿನಲ್ಲಿ ತೇಲಾಡಿದ. ಊಹೆ ಕೂ ಮಾಡದ ಜಾಗಕ್ಕೆ ಬಂದು ನಿಂತಿದ್ದ.
ನರ್ಗಿಸ್ ಇಲ್ಲವಾದ ನಂತರ ಸುನಿಲ್ ದತ್, ಅರ್ಧಜೀವವಾಗಿದ್ದರು. ಜೊತೆಗೆ ಮಗನ ಅವಾಂತರಗಳು ಅವರನ್ನು ಇದ್ದೂ ಇಲ್ಲದಂತಾಗಿಸಿದ್ದವು. ಆದರೆ ಸಂಜಯ್ ದತ್ ಮಾತ್ರ ಒಂದರ ಮೇಲೊಂದರಂತೆ ಪ್ರೇಯಸಿಯರನ್ನು, ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಲೇ ಹೋದರು. ತಮ್ಮ 37 ವರ್ಷಗಳ ಚಿತ್ರಜೀವನದಲ್ಲಿ ಸುಮಾರು 187 ಚಿತ್ರಗಳಲ್ಲಿ ನಟಿಸಿ, ಜನಮನ್ನಣೆಗೂ ಪಾತ್ರರಾದರು. ಹಣ, ಖ್ಯಾತಿ, ಪ್ರಚಾರವನ್ನು ಪಡೆದರು. ಸಂಜಯ್ ದತ್‌ರ ಬದುಕನ್ನು ಬಹಳ ಹತ್ತಿರದಿಂದ ಕಂಡಿದ್ದ ಪತ್ರಕರ್ತ ಯಾಸಿರ್ ಉಸ್ಮಾನ್, ‘ದ ಕ್ರೇಝಿ ಅನ್ಟೋಲ್ಡ್ ಸ್ಟೋರಿ ಆಫ್ ಬಾಲಿವುಡ್ಸ್ ಬ್ಯಾಡ್ ಬಾಯ್ ಸಂಜಯ್ ದತ್’ ಪುಸ್ತಕ ಬರೆದರು. ಉಸ್ಮಾನ್ ಈ ಮುಂಚೆ ರೇಖಾ ಮತ್ತು ರಾಜೇಶ್ ಖನ್ನಾರ ಮೇಲೆ ಪುಸ್ತಕ ಬರೆದು ಖ್ಯಾತಿ ಗಳಿಸಿದ್ದ ಲೇಖಕನಾದ್ದರಿಂದ, ಸಹಜವಾಗಿಯೇ ಸಂಜಯ್ ದತ್ ಪುಸ್ತಕ ಓದುಗರಲ್ಲಿ ಕುತೂಹಲ ಕೆರಳಿಸಿತು. ‘ಸಂಜಯ್‌ನೊಳಗಿರುವುದು ಇನ್ನೂ ಬೆಳೆಯದ ಮಗು’ ಎಂದು ವ್ಯಾಖ್ಯಾನಿಸುವ ಲೇಖಕ, ಹೊರಜಗತ್ತಿಗೆ ಗೊತ್ತಿಲ್ಲದ ಆತನ ಅನೇಕ ಅಪರಾಧಗಳ ಬಗ್ಗೆ ಹೇಳುತ್ತಾರೆ. ತನ್ನ ಗರ್ಲ್ ಫ್ರೆಂಡ್ ಒಬ್ಬಳನ್ನು ಕೆಣಕಿದ್ದಕ್ಕೆ ವ್ಯಕ್ತಿಯೊಬ್ಬನ ಬಟ್ಟೆಬಿಚ್ಚಿ ಹೊಡೆದಿದ್ದನ್ನು ವಿವರಿಸುತ್ತಾರೆ. ಮಾಧುರಿ ದೀಕ್ಷಿತ್ ಮತ್ತು ಸಂಜಯ್ ನಡುವಿನ ಪ್ರೇಮ ಪ್ರಸಂಗವನ್ನು ಉಲ್ಲೇಖಿಸುತ್ತಾರೆ. ಪ್ರತಿಯೊಬ್ಬ ಹೊಸ ಪ್ರೇಯಸಿಯನ್ನು ಅಮ್ಮನ ಸಮಾಧಿ ಮುಂದೆ ನಿಲ್ಲಿಸಿ ಮನವೊಲಿಸುತ್ತಿದ್ದ ಬಗೆಯನ್ನು ಬಿಚ್ಚಿಡುತ್ತಾರೆ.
ಸಂಜಯ್ ದತ್ ನಟನೆಯಲ್ಲಿ ಅಷ್ಟೇ ಅಲ್ಲ, ಲೈಫ್ ಸ್ಪೈಲ್ ಕೂಡಾ ಇತರ ಬಾಲಿವುಡ್ ನಟರಿಗಿಂತಲೂ ಭಿನ್ನ. ಜೊತೆಗೆ ಐಷಾರಾಮಿ ಖಯಾಲಿಗಳು. ಪ್ರತಿಷ್ಠಿತ ಕಂಪೆನಿಗಳ ದುಬಾರಿ ಬೈಕ್ ಮತ್ತು ಕಾರುಗಳೆಷ್ಟಿವೆಯೋ ಲೆಕ್ಕವಿಲ್ಲ. ಸಂಜಯ್ ಜೊತೆಗಿನ ಹಿಂದಿನ ಸಂದರ್ಶನಗಳನ್ನು ಮಾತ್ರ ಆಧರಿಸದೆ, ನಿರ್ಮಾಪಕರು, ಸಹನಟರು, ಗೆಳೆಯರು, ಶಿಕ್ಷಕರು, ಪೊಲೀಸ್ ಅಧಿಕಾರಿಗಳು, ಜೈಲಿನಲ್ಲಿ ಆತನ ಜೊತೆಗಿದ್ದವರು, ರಾಜಕಾರಣಿಗಳು ಎಲ್ಲರೊಂದಿಗೆ ನಡೆಸಿದ ಮಾತುಕತೆಗಳ ಮೂಲಕ ಉಸ್ಮಾನ್ ಜೀವನಕಥನವನ್ನು ಕಟ್ಟಿಕೊಟ್ಟಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಪ್ರಕರಣದಲ್ಲಿ 42 ತಿಂಗಳ ಜೈಲುವಾಸ ಮುಗಿಸಿ ಹೊರಬರುವತನಕದ ವಿವರಗಳನ್ನು ಒಳಗೊಳಿಸಿಕೊಂಡಿದ್ದಾರೆ. ಇಷ್ಟೆಲ್ಲ ರೋಚಕತೆ ಇರುವ ಕಥಾವಸ್ತುವನ್ನು ಮುಂಬೈ ಮಂದಿ ಸಿನೆಮಾ ಮಾಡದೆ ಬಿಡುತ್ತಾರೆಯೇ. ಸಂಜಯ್ ದತ್‌ಗೆ ಆತ್ಮೀಯನಾಗಿರುವ ರಾಜಕುಮಾರ್ ಹಿರಾನಿಯೇ ಸಂಜಯ್ ದತ್ ಜೀವನವೃತ್ತಾಂತದ ‘ಸಂಜು’ವನ್ನೂ ತೆರೆಗೆ ತಂದಿದ್ದಾರೆ.
ಸಂಜಯ್ ದತ್ 42 ತಿಂಗಳ ಕಾಲ ಜೈಲು ವಾಸ ಅನುಭವಿಸಿ ಪುಣೆಯ ಯರವಾಡಾ ಜೈಲಿನಿಂದ ಬಿಡುಗಡೆಯಾದ ಬಳಿಕ, ‘‘ನಾನು ಉಗ್ರನಲ್ಲ. ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಪ್ರಕರಣದಲ್ಲಿ ನನಗೆ ಶಿಕ್ಷೆಯಾಗಿದೆ. ಟಾಡಾ ಆಕ್ಟ್‌ನಲ್ಲಿ ಸುಪ್ರೀಂ ಕೋರ್ಟ್ ನನ್ನನ್ನು ಆರೋಪ ಮುಕ್ತ ಮಾಡಿದೆ. ಎಲ್ಲಿಯೂ ನನ್ನನ್ನು 1993 ರ ಮುಂಬೈ ಸ್ಫೋಟದ ಅಪರಾಧಿ ಎಂದು ಕರೆಯಬೇಡಿ’’ ಎಂದು ಮಾಧ್ಯಮ ಪ್ರತಿನಿಧಿಗಳ ಎದುರು ಕೈ ಮುಗಿದು ಬೇಡಿಕೊಂಡಿದ್ದರು. ಮುಂದುವರಿದು, ‘‘ಕಳೆದ 23 ವರ್ಷಗಳಿಂದ ಹೋರಾಟವೇ ಬದುಕಾಗಿತ್ತು. ಇಂದು ನನಗೆ ನಿಜವಾದ ಸ್ವಾತಂತ್ರ್ಯ ದೊರಕಿದೆ. ಭಾರತದಲ್ಲಿ ಹುಟ್ಟಿದ್ದೇನೆ, ಭಾರತ ದಲ್ಲಿಯೇ ಸಾಯುತ್ತೇನೆ. ದೇಶಕ್ಕಾಗಿ ಕೆಲಸ ಮಾುವ ಹಂಬಲ ನನ್ನದು’’ ಎಂದಿದ್ದಾರೆ.
ಪೋಷಕರ ಅತಿಯಾದ ಪ್ರೀತಿ, ವ್ಯಾಮೋಹ ಮತ್ತು ನಿರೀಕ್ಷೆಗಳೇ ಸಂಜಯ್ ದತ್‌ನ ಇಂದಿನ ಸ್ಥಿತಿಗೆ ಕಾರಣ ಎಂದು ವ್ಯಾಖ್ಯಾನಿಸುವವರಿದ್ದಾರೆ. ಅದು ಅರ್ಧ ನಿಜ, ಅರ್ಧ ಸುಳ್ಳಿರಬಹುದು. ಜೈಲಿಗೆ ಹೋಗಿಬಂದ ಸಂಜಯ್ ಈಗ ಮನುಷ್ಯರಾಗಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಪೋಷಕರು ಮತ್ತು ಮಕ್ಕಳು, ಸುನಿಲ್ ದತ್-ನರ್ಗಿಸ್-ಸಂಜಯ್ ದತ್‌ನನ್ನೂ ಮೀರಿ ಮುಂದೆ ಹೋಗಿದ್ದಾರೆ. ಅಂತಹವರಿಗೆ ‘ಸಂಜು’ ಚಿತ್ರ ತಮ್ಮದೇ ಕತೆಯಂತೆ ಕಂಡು ಚಿಂತನೆಗೆ ಹಚ್ಚಬಹುದೆ, ಮನುಷ್ಯರನ್ನಾಗಿಸಬಹುದೆ?

Writer - -ಬಸು ಮೇಗಲಕೇರಿ

contributor

Editor - -ಬಸು ಮೇಗಲಕೇರಿ

contributor

Similar News