ಶರಶಯ್ಯೆಯಲ್ಲಿ ದ್ರಾವಿಡ ಅಸ್ಮಿತೆ-ಕರುಣಾನಿಧಿ

Update: 2018-08-04 18:31 GMT

ತಮಿಳುನಾಡಿನ ರಾಜಕೀಯ ಮತ್ತು ಸಾಂಸ್ಕೃತಿಕ ಜಗತ್ತನ್ನು ಆರು ದಶಕಗಳ ಕಾಲ ಆಳಿದ 94 ವರ್ಷಗಳ ತಮಿಳರ ‘ಕಲೈಞರ್’ ಕರುಣಾನಿಧಿ ಅನಾರೋಗ್ಯಪೀಡಿತರಾಗಿ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಆ ಸುದ್ದಿ ಕೇಳಿಯೇ ಕಂಗಾಲಾದ ಅವರ 21 ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ಸ್ಟಾಲಿನ್, ‘‘ಭಾವಾವೇಶಕ್ಕೊಳಗಾಗಿ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ, ನಿಮ್ಮ ಸಾವನ್ನು ಸಹಿಸಿಕೊಳ್ಳುವ ಶಕ್ತಿ ನಮಗಿಲ್ಲ’’ ಎಂದು ಮನವಿ ಮಾಡಿಕೊಂಡಿದ್ದೂ ಆಗಿದೆ. ಆಸ್ಪತ್ರೆ ಮುಂದೆ ಜನಜಾತ್ರೆ ನೆರೆದು, ಪೂಜೆ, ಹರಕೆ, ಹಾರೈಕೆ ನಿತ್ಯ ನಿರಂತರವಾಗಿದೆ. ತಮಿಳುನಾಡಿನ ಜನರ ಅಂಧಾಭಿಮಾನವೋ ಅಥವಾ ಭಾವನಾತ್ಮಕ ಭ್ರಮೆಯೋ, ಪ್ರಾಣಾರ್ಪಣೆ ಮುಂದುವರಿದಿದೆ. ಕುತೂಹಲಕರ ಸಂಗತಿ ಎಂದರೆ, ತಮಿಳುನಾಡಿನಲ್ಲಿ ಅದು ನಾಯಕನಿಗೆ ತೋರುವ ಗೌರವದಂತೆಯೂ ಇತಿಹಾಸದ ಪುಟ ಸೇರುತ್ತಿದೆ. ಹಾಗೆಯೇ ನಾಯಕರ ಆಸ್ಪತ್ರೆ ವಾಸ ಕೂಡ.
ತಮಿಳುನಾಡಿನ ಅಂಧಾಭಿಮಾನವನ್ನು, ಅತಿರೇಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅಲ್ಲಿನ ಜನರ ನರನಾಡಿಗಳಲ್ಲಿ ಸಿನೆಮಾ ಬೆರೆತುಹೋಗಿರುವುದು ಎದ್ದು ಕಾಣುತ್ತದೆ. ಚಿತ್ರರಂಗದ ನಟನಟಿಯರು ರಾಜಕೀಯ ನಾಯಕರಾಗಿ ಹೊರಹೊಮ್ಮಿ ರಾಜ್ಯವಾಳಿರುವ ಮರ್ಮ ಗೋಚರಿಸುತ್ತದೆ. 10 ವರ್ಷ ಮುಖ್ಯಮಂತ್ರಿಯಾಗಿ ಮೆರೆದ ಜನಪ್ರಿಯ ಚಿತ್ರನಟ ಎಂಜಿಆರ್ ತಮಿಳರ ಆರಾಧ್ಯದೈವವೇ ಆಗಿಹೋಗಿದ್ದಾರೆ. ಹಾಗೆಯೇ 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಳಿದ ಚಿತ್ರನಟಿ ಜಯಲಲಿತಾ ತಮಿಳರ ‘ಅಮ್ಮ’ನಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದ್ದಾರೆ. ಇವರಿಬ್ಬರಿಗೂ ಮೊದಲೇ ಸಿನೆಮಾ ಕ್ಷೇತ್ರದಿಂದ ರಾಜಕಾರಣಕ್ಕಿಳಿದು, 19 ವರ್ಷಗಳ ಕಾಲ ತಮಿಳುನಾಡನ್ನು ಆಳಿದ ಕರುಣಾನಿಧಿ, ಶೂದ್ರ ಸಂಕೇತವಾಗಿ-ದ್ರಾವಿಡ ಅಸ್ಮಿತೆಯಾಗಿ ಅಪರೂಪದ ಸ್ಥಾನ ಅಲಂಕರಿಸಿದ್ದಾರೆ.
ಹಾಗೆ ನೋಡಿದರೆ ಕರುಣಾನಿಧಿ ರಾಜಮಹಾರಾಜರ ವಂಶಸ್ಥರಲ್ಲ. ಅವರ ಪೋಷಕರು ಸುಶಿಕ್ಷಿತರಲ್ಲ. ಶ್ರೀಮಂತರಲ್ಲ. ಮೇಲ್ಜಾತಿಗೆ ಸೇರಿದವರಲ್ಲ. ತಮಿಳು ಅವರ ಮನೆಮಾತಲ್ಲ. ಸ್ಫುರದ್ರೂಪಿ ನಾಯಕನಟನಂತೂ ಅಲ್ಲವೇ ಅಲ್ಲ. ಇಷ್ಟಾದರೂ, ತಮಿಳುನಾಡಿನ ಜನ ಕರುಣಾನಿಧಿಗಾಗಿ ಪ್ರಾಣ ಬಿಡಲೂ ಸಿದ್ಧರಿದ್ದಾರೆಂದರೆ- ಒಂದು, ತಮಿಳುನಾಡಿನ ಜನರ ಜಾಯಮಾನವೇ ಅಂಥದ್ದಿರಬೇಕು. ಇಲ್ಲ, ಆ ವ್ಯಕ್ತಿ ತಮಿಳು ನಾಡು ಸ್ಮರಿಸುವಂತಹ ಕೊಡುಗೆ ಕೊಟ್ಟಿರಬೇಕು. ಎರಡೂ ನಿಜ.
ತಮಿಳುನಾಡಿನ ಜಸ್ಟೀಸ್ ಪಾರ್ಟಿಯ ಅಳಗಿರಿಸ್ವಾಮಿಯ ಹಿಂದಿ ವಿರೋಧಿ ಭಾಷಣ ಮತ್ತು ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ವೈದಿಕ ವಿರೋಧಿ ವಿಚಾರಗಳಿಂದ ಸ್ಫೂರ್ತಿ ಪಡೆದ 14 ವರ್ಷದ ಹುಡುಗನೊಬ್ಬ, 1938ರಲ್ಲಿ ತನ್ನನ್ನು ತಾನು ದ್ರಾವಿಡ ಹೋರಾಟಕ್ಕೆ ಅರ್ಪಿಸಿಕೊಳ್ಳುತ್ತಾನೆ. ಬಡವರು, ಅಸಹಾಯಕರು, ಶೋಷಿತರ ಪರವಾಗಿ ಕೆಲಸ ಮಾಡುತ್ತಾ; ಸಾಮಾಜಿಕ ಬದಲಾವಣೆಗಾಗಿ ಹೋರಾಟ, ಚಳವಳಿ ರೂಪಿಸುತ್ತಾ; ಸಮಾನಮನಸ್ಕ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುತ್ತಾನೆ. ‘ತಮಿಳುನಾಡು ತಮಿಳ್ ಮಾನವರ್ ಮನ್ರಮ್’ ಎಂಬ ವಿದ್ಯಾರ್ಥಿ ಸಂಘ ಸ್ಥಾಪಿಸಿ, ನೇತಾರನಾಗುತ್ತಾನೆ. ಆ ತಂಡದ ಸದಸ್ಯರ ಬೌದ್ಧಿಕ ಬೆಳವಣಿಗೆಗಾಗಿ ‘ಮಾನವರ್’ ಎಂಬ ಕೈಬರಹದ ಪತ್ರಿಕೆಯನ್ನೂ ಶುರು ಮಾಡುತ್ತಾನೆ. ಅಂದಿನ ಆ ಯುವಕನೇ ಇಂದಿನ ಕಪ್ಪು ಕನ್ನಡಕ ಮತ್ತು ಹಳದಿ ಶಾಲಿನ ದ್ರಾವಿಡ ನಾಯಕ ಕರುಣಾನಿಧಿ.
ವಿದ್ಯಾರ್ಥಿ ದೆಸೆಯಿಂದಲೇ ಓದು ಬರಹದಲ್ಲಿ ಮುಂದಿದ್ದು, ವೈಚಾರಿಕ ನಾಟಕಗಳ ರಚನೆ ಮೂಲಕ ಗುರುತಿಸಿಕೊಂಡಿದ್ದ ಕರುಣಾನಿಧಿ, ಸಿನೆಮಾಗಳಿಗೆ ಗೀತರಚನೆ, ಸಂಭಾಷಣೆ ಬರೆಯು ವುದರಲ್ಲಿಯೂ ಹೆಸರು ಗಳಿಸಿದ್ದರು. 1952ರಲ್ಲಿ ‘ಪರಾಸಕ್ತಿ’ ಎನ್ನುವ ಚಿತ್ರಕ್ಕೆ ಕ್ರಾಂತಿಕಾರಿ ವಿಷಯಗಳನ್ನೊಳಗೊಂಡ ಚಿತ್ರಕಥೆ ಬರೆಯುವ ಮೂಲಕ ತಮಿಳು ಚಿತ್ರರಂಗದಲ್ಲಿ ಭದ್ರವಾಗಿ ಬೇರು ಬಿಟ್ಟಿದ್ದರು. ಆದರೆ ವಿವಾದಕ್ಕೆ ಈಡಾದ ‘ಪರಾಸಕ್ತಿ’ ಚಿತ್ರ ನಿಷೇಧಕ್ಕೊಳಗಾಯಿತು. ಹೋರಾಟದ ನಂತರ ಬಿಡುಗಡೆಯಾಗಿ, ಅಪಾರ ಜನಮನ್ನಣೆ ಗಳಿಸಿ, ಬಾಕ್ಸಾಫೀಸ್ ಹಿಟ್ ಚಿತ್ರವಾಗಿ ಹೊರಹೊಮ್ಮಿತು. ಹಾಗೆಯೇ, ಹಿಂದೂ ಸಂಪ್ರದಾಯಸ್ಥರ ಕಣ್ಣುರಿಗೆ, ವೈದಿಕರ ಕಟು ಟೀಕೆಗೆ ಗುರಿಯಾಯಿತು. ಅಲ್ಲಿಗೆ ಕರುಣಾನಿಧಿ ವಿವಾದಾತ್ಮಕ ವ್ಯಕ್ತಿಯಾಗಿ, ವೈಚಾರಿಕ ಪ್ರಜ್ಞೆಯುಳ್ಳ ಪ್ರತಿಭಾವಂತನಾಗಿ ಗುರುತಿಸಿಕೊಂಡಿದ್ದರು.
1953ರಲ್ಲಿ ಕಲ್ಲುಕುಡಿ ಎಂಬಲ್ಲಿ ಉತ್ತರ ಭಾರತದ ದಾಲ್ಮಿಯಾ ಎಂಬ ಕೈಗಾರಿಕೋದ್ಯಮಿ ಸಿಮೆಂಟ್ ಕಾರ್ಖಾನೆ ತೆರೆದು, ಸ್ಥಳೀಯರನ್ನು ನಿರ್ಲಕ್ಷಿಸಿ ಊರಿನ ರೈಲ್ವೇ ಸ್ಟೇಷನ್‌ಗೆ ದಾಲ್ಮಿಯಾಪುರಂ ಎಂದು ಹೊಸದಾಗಿ ನಾಮಕರಣ ಮಾಡುತ್ತಾನೆ. ಉತ್ತರದವರ ಹಿಂದಿ ಹೇರಿಕೆ, ಸ್ಥಳೀಯತೆಯ ಮೇಲಿನ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ 29ರ ಹರೆಯದ ಕರುಣಾನಿಧಿ, ಸ್ಥಳೀಯರನ್ನು ಸಂಘಟಿಸಿ ಹೋರಾಟ ಹುಟ್ಟುಹಾಕುತ್ತಾರೆ. ಬಂಡವಾಳಶಾಹಿಗಳ ದೌರ್ಜನ್ಯದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಈ ಹೋರಾಟದಲ್ಲಿ ಇಬ್ಬರು ಅಸುನೀಗಿ, ಕರುಣಾನಿಧಿ ಬಂಧನವಾಗುತ್ತದೆ. ಕೊನೆಗೆ ಕಲ್ಲುಕುಡಿ, ಕಲ್ಲುಕುಡಿಯಾಗಿಯೇ ಉಳಿಯುತ್ತದೆ. ಕರುಣಾನಿಧಿ ಹೋರಾಟಗಾರನಾಗಿ, ನಾಯಕನಾಗಿ ರೂಪುಗೊಂಡ ಬಗೆ ಇದು.
ವಿದ್ಯಾರ್ಥಿ ಸಂಘಟನೆ ದ್ರಾವಿಡ ಮುನ್ನೇತ್ರ ಕಳಗಂ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು, ಸಮಾಜ ಸೇವೆ ಮತ್ತು ಸುಧಾರಣೆಗೆ ಮುಂದಾಗಿ ಜನಮನ್ನಣೆ ಗಳಿಸುತ್ತಿರು ವಾಗಲೇ 1957ರಲ್ಲಿ, ಕುಲಿತಲೈ ವಿಧಾನಸಭಾ ಕ್ಷೇತ್ರದಿಂದ ಮೊತ್ತ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಅರಸಿ ಬರುತ್ತದೆ. ಆ ಮೂಲಕ ಕರುಣಾನಿಧಿ ಸಾರ್ವಜನಿಕ ಬದುಕಿಗೆ, ರಾಜಕಾರಣಕ್ಕೆ ಅಧಿಕೃತವಾಗಿ ಅಡಿಯಿಡುತ್ತಾರೆ. ರಾಜಕಾರಣದಲ್ಲಿದ್ದುಕೊಂಡೇ ನೂರಾರು ಸಿನೆಮಾಗಳಿಗೆ ಚಿತ್ರಕಥೆ ರಚಿಸುತ್ತಾ, ಸಮಾಜವನ್ನು ಜಾಗೃತಗೊಳಿಸುವ ನಾಟಕಗಳನ್ನು ಆಡಿಸುತ್ತಾ, ವಿಚಾರ ಪ್ರಚೋದಕ ಪುಸ್ತಕ ಗಳನ್ನು ಪ್ರಕಟಿಸುತ್ತಾ ಇತರರಿಗಿಂತ ಭಿನ್ನ ಎಂಬುದನ್ನು ಸಾಬೀತುಪಡಿಸುತ್ತಾರೆ. ಆ ಕಾರಣದಿಂದಾಗಿಯೇ ಮುಖ್ಯಮಂತ್ರಿ ಅಣ್ಣಾ ದೊರೈ, ಕರುಣಾನಿಧಿಯ ಸಾಮಾಜಿಕ ಕಾಳಜಿ, ಕ್ರಾಂತಿಕಾರಿ ಹೋರಾಟ, ಪ್ರಖರ ವಿಚಾರ ಮಂಡನೆಯನ್ನು ಗಮನಿಸಿ, 1967ರಲ್ಲಿ ಲೋಕೋಪಯೋಗಿ ಸಚಿವರನ್ನಾಗಿ ಮಾಡುತ್ತಾರೆ. ಕರುಣಾನಿಧಿಯ ಅದೃಷ್ಟವೋ ಏನೋ, 1969ರಲ್ಲಿ ಅಣ್ಣಾ ದೊರೈ ತೀರಿಹೋಗಿ, ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತಾರೆ. 1969ರಿಂದ 2011ರವರೆಗೆ, 13 ಬಾರಿ ಶಾಸಕರಾಗಿ ಆಯ್ಕೆಯಾಗಿ, 5 ಬಾರಿ ಮುಖ್ಯಮಂತ್ರಿಯಾಗಿ, 19 ವರ್ಷಗಳ ಕಾಲ ಆಡಳಿತ ನೆಸಿ ದಾಖಲೆ ಬರೆಯುತ್ತಾರೆ.
ಡಿಎಂಕೆ ಪಕ್ಷದ ಮುಂಚೂಣಿ ನಾಯಕನಾಗಿ ಗಟ್ಟಿಗೊಳ್ಳುತ್ತಾ, ಮುಖ್ಯಮಂತ್ರಿಯಾಗಿ ಆಡಳಿತಾತ್ಮಕ ಆಯಾಮಗಳನ್ನು ಅನುಭವದಿಂದಲೇ ಅರಗಿಸಿಕೊಳ್ಳತ್ತಾ ಹೋದ ಕರುಣಾನಿಧಿ, 1971ರಲ್ಲಿ ಎರಡನೇ ಬಾರಿಗೆ ಮತ್ತೆ ಮುಖ್ಯಮಂತ್ರಿಯ ಗದ್ದುಗೆ ಏರುತ್ತಾರೆ. 1972ರಲ್ಲಿ ‘‘ತಮಿಳುನಾಡಿನ ದೇವಾಲಯಗಳಲ್ಲಿ ಪೌರೋಹಿತ್ಯ ಮಾಡಲು ಬ್ರಾಹ್ಮಣರೇ ಆಗಬೇಕಿಲ್ಲ. ಹಿಂದೂ ಧರ್ಮದ ಎಲ್ಲ ಜಾತಿಯ ಜನರೂ ಪೌರೋಹಿತ್ಯವನ್ನು ಮಾಡಬಹುದು’’ ಎಂಬ ಕ್ರಾಂತಿಕಾರಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ತಮ್ಮ ಎಡಪಂಥೀಯ ನಿಲುವನ್ನು ಪ್ರದರ್ಶಿಸುತ್ತಾರೆ. ತಮಿಳುನಾಡಿನಲ್ಲಿ ದ್ರಾವಿಡ ಚಳವಳಿಯನ್ನು ಹುಟ್ಟುಹಾಕಿ, ಜನರಲ್ಲಿ ಜಾಗೃತಿ ಉಂಟುಮಾಡಿದ್ದ ಪೆರಿಯಾರ್ ರಾಮಸ್ವಾಮಿಯವರ ಕ್ರಾಂತಿಕಾರಿ ಚಿಂತನೆಗೆ ಕರುಣಾನಿಧಿಯವರು ಕಾಯ್ದೆಯ ಮೂಲಕ ಮನ್ನಣೆ ನೀಡುತ್ತಾರೆ. ವೈದಿಕರಷ್ಟೇ ಶ್ರೇಷ್ಠ ಎನ್ನುವ ಭಾವನೆ ಹೋಗಲಾಡಿಸಲು ಮತ್ತು ಗೊಡ್ಡು ಸಂಪ್ರದಾಯ, ಮೌಢ್ಯಾಚರಣೆ ತೊಲಗಿಸಲು ಶ್ರಮಿಸುತ್ತಾರೆ. ಆದರೆ ಈ ಆದೇಶ ಕರ್ಮಠರ ಕಟು ಟೀಕೆಗೆ ಒಳಗಾಗುತ್ತದೆ, ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ ಸರಕಾರಿ ಆದೇಶ ತಡೆ ಹಿಡಿಯಲ್ಪಡುತ್ತದೆ.
1972ರಲ್ಲಾದ ಈ ಹಿನ್ನಡೆಗೆ ಕರುಣಾನಿಧಿ 2006ರವರೆಗೂ ಕಾಯುತ್ತಾರೆ. ಐದನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದಂತೆ ತಮ್ಮ ಹಳೆಯ ಆದೇಶಕ್ಕೆ ಚಾಲನೆ ನೀಡುತ್ತಾರೆ. ಸರಕಾರದ ವತಿಯಿಂದಲೇ ಬ್ರಾಹ್ಮಣೇತರಿಗೆ ಪೌರೋಹಿತ್ಯದ ತರಬೇತಿ ನೀಡುವ ಕೇಂದ್ರಗಳನ್ನು ಸ್ಥಾಪಿಸುತ್ತಾರೆ. ದಲಿತರೂ ಒಳಗೊಂಡಂತೆ 206 ವ್ಯಕ್ತಿಗಳ ತರಬೇತಿಗೆ ಅವಕಾಶ ಕಲ್ಪಿಸಿಕೊಡುತ್ತಾರೆ. ಕೊನೆಗೆ ಸುಪ್ರೀಂ ಕೋರ್ಟ್ 2015ರಲ್ಲಿ ‘‘ಆಗಮಶಾಸ್ತ್ರಗಳನ್ನು ಅಭ್ಯಾಸ ಮಾಡಿದ ಅರ್ಹ ವ್ಯಕ್ತಿಯನ್ನು ಪೌರೋಹಿತ್ಯ ಮಾಡಲು ನೇಮಕ ಮಾಡಬಹುದು’’ ಎಂದು ಆದೇಶ ಹೊರಡಿಸುತ್ತದೆ. ಇಷ್ಟಾದರೂ ಸರಕಾರ ಬ್ರಾಹ್ಮಣೇತರ ಪುರೋಹಿತರನ್ನು ನೇಮಕ ಮಾಡಲು ಮೀನಮೇಷ ಎಣಿಸುತ್ತಲೇ ಬಂದು, ಕೊನೆಗೆ 2018ರ ಮಾರ್ಚ್ 1ನೇ ತಾರೀಕಿನಂದು ಮಧುರೈನ ತಾಲ್ಲಕುಲಮ್ ಅಯ್ಯಪ್ಪನ್ ದೇವಾಲಯಕ್ಕೆ ಅರ್ಚಕರಾಗಿ ನೇಮಕ ಮಾಡುತ್ತದೆ.
ಇದು ನಿಜಕ್ಕೂ ಪೆರಿಯಾರ್ ಕನಸನ್ನು ಕರುಣಾನಿಧಿ ನನಸು ಮಾಡಿದ, ತಮಿಳುನಾಡಿನ ಸಾಮಾಜಿಕ ಬದುಕಿನಲ್ಲಾದ, ಬಹುಮುಖ್ಯ ಬದಲಾವಣೆ ಎನ್ನುವವರಿದ್ದಾರೆ. ಹಾಗೆಯೇ ಒಬ್ಬ ಪುರೋಹಿತನ ನೇಮಕದಿಂದ ವೈದಿಕ ವ್ಯವಸ್ಥೆಯೇನು ಬದಲಾಗುವುದಿಲ್ಲ, ಬದಲಾಗಿದ್ದೂ ಇಲ್ಲ ಎಂದು ವಾದಿಸುವವರೂ ಇದ್ದಾರೆ. ಎರಡೂ ನಿಜವಿರಬಹುದು. ಆದರೆ ಕರುಣಾನಿಧಿಯವರ ರಾಜಕೀಯ ಇಚ್ಛಾಶಕ್ತಿ, ಬದ್ಧತೆಯನ್ನು ಮಾತ್ರ ಪ್ರಶ್ನಿಸುವಂತಿಲ್ಲ. ಇವುಗಳ ನಡುವೆಯೇ ಕರುಣಾನಿಧಿಯವರು 19 ವರ್ಷಗಳ ಕಾಲ ತಮಿಳು ನಾಡನ್ನು ಆಳಿದರೂ, ಇವತ್ತಿಗೂ ದಟ್ಟ ದರಿದ್ರ ಸ್ಥಿತಿಯನ್ನು ಬದಲಾ ಯಿಸಲಾಗಿಲ್ಲ ಎನ್ನುವ ಕಠೋರ ಸತ್ಯವನ್ನೂ ಒಪ್ಪಿಕೊಳ್ಳಬೇಕಾಗಿದೆ.
ಹಾಗೆಯೇ ದ್ರಾವಿಡ ಮುನ್ನೇಟ್ರ ಕಳಗಂ ಪಕ್ಷದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಎಂಜಿಆರ್‌ರನ್ನು ಪಕ್ಷ ತೊರೆಯುವಂತೆ ಮಾಡಿದ್ದು, ರಾಜಕಾರಣಕ್ಕೆ ಸ್ನೇಹಿತರೇ ಎದುರಾಳಿಗಳಾಗಿ ತಮಿಳರನ್ನು ಇಬ್ಭಾಗಿಸಿದ್ದು, ಎಂಜಿಆರ್ ಅವರ ಉತ್ತರಾಧಿಕಾರಿ ಎಂಬ ಕಾರಣಕ್ಕೆ ಜಯಲಲಿತಾರನ್ನು ಘನತೆವೆತ್ತ ವಿಧಾನಸಭೆಯಲ್ಲಿ ಜುಟ್ಟು ಹಿಡಿದು ಎಳೆದಾಡಿ ಅವಮಾನಿಸಿದ್ದು, ರಾಜೀವ್ ಗಾಂಧಿ ಹತ್ಯೆ ಮಾಡಿದ ಎಲ್‌ಟಿಟಿಇ ಎಂಬ ಉಗ್ರ ಸಂಘಟನೆಯ ಸಿಂಪಥೈಸರ್ ಆಗಿದ್ದು, ಡಿಎಂಕೆ ಪಕ್ಷವನ್ನು ಕುಟುಂಬದ ಆಸ್ತಿಯನ್ನಾಗಿ ಮಾಡಿದ್ದು, ಅಧಿಕಾರಕ್ಕೇರಿದಾಗ ಅಸಹ್ಯ ಪಡುವಷ್ಟು ಆಸ್ತಿ ಮಾಡಿ ಕೊಂಡಿದ್ದು, ಮಗಳು ಕನಿಮೊಳಿ 2ಜಿ ಹಗರಣದಲ್ಲಿ ಭಾಗಿಯಾಗಿದ್ದಾಗ ಬಲಪಂಥೀಯ ಬಿಜೆಪಿಗೆ ಬೆಂಡಾಗಿ ಬಿಡಿಸಿಕೊಂಡಿದ್ದು, ಆಸ್ತಿ-ಅಧಿಕಾರಕ್ಕಾಗಿ ಅಣ್ಣತಮ್ಮಂದಿರಾದ ಅಳಗಿರಿ-ಸ್ಟಾಲಿನ್ ಸಾರ್ವಜನಿಕವಾಗಿ ಕಿತ್ತಾಡಿದ್ದು, ಮಗನೇ ಉತ್ತರಾಧಿಕಾರಿಯಾಗುವಂತೆ ಸಜ್ಜುಗೊಳಿಸಿ ವಂಶ ಪಾರಂಪರ್ಯ ಆಡಳಿತಕ್ಕೆ ಒತ್ತು ಕೊಟ್ಟು ಪ್ರಜಾಪ್ರಭುತ್ವ-ಸಂವಿಧಾನವನ್ನು ಅಪಹಾಸ್ಯಕ್ಕೀಡುಮಾಡಿದ್ದು ಕರುಣಾನಿಧಿಯವರ ಮೇಲಿರುವ ಗುರುತರ ಆರೋಪಗಳು.
ಇಷ್ಟಾದರೂ ಕರುಣಾನಿಧಿಯಿಂದ ಹೋರಾಟಗಾರರು ಮತ್ತು ರಾಜಕೀಯ ನಾಯಕರು ಕಲಿಯಬೇಕಾದ್ದು ಬಹಳಷ್ಟಿದೆ. ಭಾಷೆಯ ಬಗೆಗಿನ ಅವರ ಅಪರಿಮಿತ ಅಭಿಮಾನ, ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ನಿರಂತರ ಒಗ್ಗಟ್ಟಿನ ಹೋರಾಟ, ಕಾವೇರಿ ನೀರಿಗಾಗಿ ಅಧಿಕಾರವನ್ನೇ ಪಣಕ್ಕಿಟ್ಟು ಹೋರಾಡುವ ಬದ್ಧತೆ, ಮೇಲ್ಜಾತಿಯ ವೈದಿಕರ ವಿರುದ್ಧ ದ್ರಾವಿಡ ಅಸ್ಮಿತೆಯನ್ನು ಬಲಿಷ್ಠಗೊಳಿಸಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಮಿಳುನಾಡಿನಲ್ಲಿ ನೆಲೆಯೂರದಂತೆ ನೋಡಿಕೊಂಡಿದ್ದು, ತಮಿಳುನಾಡಿನಲ್ಲೇನಿದ್ದರೂ ಪ್ರಾದೇಶಿಕ ಪಕ್ಷಗಳದ್ದೇ ಪ್ರಾಬಲ್ಯ ಎಂದು ಸಾರಿ ಹೇಳಿದ್ದು ಕರುಣಾನಿಧಿಯವರ ಹೆಗ್ಗಳಿಕೆ.
ಒಟ್ಟಿನಲ್ಲಿ ಪೆರಿಯಾರ್ ವಿಚಾರಧಾರೆಯ ಕೊನೆಯ ಕೊಂಡಿಯಂತಿದ್ದ ಕರುಣಾನಿಧಿ, ತಮ್ಮ ಕೊನೆಗಾಲದಲ್ಲಿ ಆ ವಿಚಾರಧಾರೆಯನ್ನು ಬರವಣಿಗೆಗೆ, ಭಾಷಣಕ್ಕೆ ಸೀಮಿತಗೊಳಿಸಿದ್ದರೂ, ಪ್ರಸ್ತುತ ರಾಜಕೀಯ ನಾಯಕರ ನಡುವೆ ದಕ್ಷಿಣ ಭಾರತದ ಧೀಮಂತ ದ್ರಾವಿಡ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ.

Writer - -ಬಸು ಮೇಗಲಕೇರಿ

contributor

Editor - -ಬಸು ಮೇಗಲಕೇರಿ

contributor

Similar News