ಪಾಕಿಸ್ತಾನ ರಕ್ಷಣಾ ಸಚಿವರಿಗೇ ಗುಂಡೇಟು

Update: 2018-05-07 03:58 GMT

ಹೊಸದಿಲ್ಲಿ, ಮೇ 7: ಪಾಕಿಸ್ತಾನದ ರಕ್ಷಣಾ ಸಚಿವ ಅಹ್ಸಾನ್ ಇಕ್ಬಾಲ್ ಮೇಲೆ ನರೋವಾಲ್‌ನಲ್ಲಿ ಆಗಂತುಕನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ತೀವ್ರ ಗಾಯಗೊಂಡಿರುವ ಸಚಿವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಕಿಸ್ತಾನ ಮುಸ್ಲಿಂ ಲೀಂಗ್ ಪಕ್ಷದ ಮುಖಂಡರಾಗಿರುವ ಇಕ್ಬಾಲ್ ಅವರ ಬಲತೋಳಿಗೆ ಗುಂಡು ತಗುಲಿದ್ದು, ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಇಕ್ಬಾಲ್ ಅವರನ್ನು ಗುರಿ ಮಾಡಿ ನಡೆದ ದಾಳಿಯಲ್ಲಿ ತೋಳಿಗೆ ಗುಂಡು ತಗುಲಿದೆ" ಎಂದು ಅಪ್ತ ಸಹಾಯಕ ಅಸೀಮ್ ಖಾನ್ ಹೇಳಿದ್ದಾರೆ. ಅವರು ಅಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಲಾಹೋರ್‌ಗೆ ಕರೆದೊಯ್ಯಲಾಗಿದೆ ಎಂದು ವಿವರಿಸಿದ್ದಾರೆ.

ದಾಳಿ ನಡೆಸಿದ್ದಾನೆ ಎನ್ನಲಾದ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 30 ಬೋರ್ ಪಿಸ್ತೂಲ್‌ನಿಂದ ಈ ದಾಳಿ ನಡೆದಿದ್ದು, 18 ಮೀಟರ್ ಅಂತರದಿಂದ ಗುಂಡು ಹಾರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಇಮ್ರಾನ್ ಕಿಸ್ವರ್ ಹೇಳಿದ್ದಾರೆ.

ಪಂಜಾಬ್ ಪ್ರಾಂತದ ತಮ್ಮ ತವರು ಜಿಲ್ಲೆಯಲ್ಲಿ ರಾಜಕೀಯ ರ್ಯಾಲಿಯಲ್ಲಿ ಸಚಿವರು ಪಾಲ್ಗೊಂಡಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಪಂಜಾಬ್ ಮುಖ್ಯಮಂತ್ರಿ ಶಹಬಾರ್ ಶರೀಫ್ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News