ಚುನಾವಣೆ : ಹಣ ಕೊಟ್ಟು ಬಳಸುವ ವೇದಿಕೆಯಾಗಿರುವ ಟಿವಿ ಚಾನೆಲ್ ಗಳ ಮೇಲೆ ಏಕಿಲ್ಲ ಆಯೋಗದ ನಿಗಾ ?

Update: 2018-05-07 10:09 GMT

ಯಾವುದೇ ಚುನಾವಣೆಯಿರಲಿ,ಟಿವಿ ಚಾನೆಲ್‌ಗಳು ಅದನ್ನು ವರದಿ ಮಾಡುವ ರೀತಿಯು ಕೇವಲ ಬಾಹ್ಯತೋರಿಕೆಯದ್ದಾಗಿರುತ್ತದೆಯೇ ಹೊರತು ಅದರ ಆಳಕ್ಕಿಳಿಯುವ ಪ್ರಯತ್ನಗಳು ನಡೆಯುವುದಿಲ್ಲ. ನಾಯಕರ ಬೆನ್ನು ಬೀಳುವುದೇ ಚಾನೆಲ್‌ಗಳ ಸ್ವಭಾವವಾಗಿದೆ. ಯಾವುದೇ ಚಾನೆಲ್ ಸತ್ಯಶೋಧನೆಯ ಗೋಜಿಗೆ ಹೋಗುತ್ತಿಲ್ಲ,ಅದರ ಬದಲು ಚರ್ಚೆಯ ಹೆಸರಿನಲ್ಲಿ ಇಬ್ಬರು ವಕ್ತಾರರನ್ನು ಆಮಂತ್ರಿಸಿ ಅವರು ಏನು ಹೇಳಬೇಕೋ ಅದನ್ನು ಹೇಳಲು ಅವಕಾಶ ಕಲ್ಪಿಸುತ್ತಿವೆ. ಸಮತೋಲನದ ಹೆಸರಿನಲ್ಲಿ ಅಗತ್ಯ ಮಾಹಿತಿಗಳೇ ನಾಪತ್ತೆಯಾಗುತ್ತಿವೆ. ರಾಹುಲ್ ಗಾಂಧಿ ಅಥವಾ ಅವರ ಪಕ್ಷದ ರಾಜ್ಯಸರಕಾರದ ಹೇಳಿಕೆಗಳು ಅಥವಾ ಪ್ರಧಾನಿ ಮತ್ತು ಅವರ ಪಕ್ಷದ ಜಾಹೀರಾತುಗಳಲ್ಲಿಯ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿಲ್ಲ. ಚಾನೆಲ್‌ಗಳು ಈಗ ಕೇವಲ ವೇದಿಕೆಗಳಾಗಿಬಿಟ್ಟಿವೆ. ದುಡ್ಡನ್ನು ಬಿಸಾಡಿ ಮತ್ತು ಅದನ್ನು ಬಳಸಿಕೊಳ್ಳಿ!

ಚಾನೆಲ್‌ಗಳ ಈ ಪರಿಪಾಠ ಕಳೆದ ಹಲವು ವರ್ಷಗಳಿಂದಲೂ ನಡೆದುಕೊಂಡುಬಂದಿದೆ ಮತ್ತು ಅದೀಗ ತನ್ನ ಉತ್ತುಂಗ ಸ್ಥಿತಿಯನ್ನು ತಲುಪಿದೆ. ಇದೇ ಕಾರಣದಿಂದ ಚುನಾವಣೆಗಳನ್ನು ಟಿವಿಯ ಮೂಲಕ ನಿರ್ವಹಿಸುವುದು ಸುಲಭವಾಗಿದೆ. ವರದಿಗಾರರು ಕೇವಲ ಹೇಳಿಕೆಗಳ ಹಿಂದೆ ಓಡುತ್ತಾರೆ. ಒಬ್ಬರು ಲಾಡುಗಳ ಫೋಟೊ ಟ್ವೀಟ್ ಮಾಡಿದರೆ ಇನ್ನೊಬ್ಬರು ಮೀನಿನ ಉಪ್ಪಿನಕಾಯಿಯ ಫೋಟೊ ಟ್ವೀಟ್ ಮಾಡುತ್ತಾರೆ. ಆ್ಯಂಕರ್‌ಗಳ ಮಾತುಗಳೂ ಕ್ರಿಕೆಟ್ ಕಮೆಂಟರಿಯಂತಾಗಿಬಿಟ್ಟಿವೆ. ಈಗ ಮೋದಿಯವರು ಬಂದರು ಮತ್ತು ಸಿಕ್ಸರ್ ಹೊಡೆಯುತ್ತಾರೆ!

ಜನರಿಗೆ ಟಿವಿಯನ್ನು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ ಮತ್ತು ಇದೇ ಕಾರಣದಿಂದ ಅದರ ಅಪಾಯಗಳನ್ನು ತಿಳಿಯಲಾಗುತ್ತಿಲ್ಲ. ಸುದ್ದಿ ವಾಹಿನಿಗಳಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ ಎಂದು ಈಗಲೂ ಅವರು ಭಾವಿಸುತ್ತಿದ್ದಾರೆ. ಆದರೆ ಚುನಾವಣೆಗಳು ಬಂದವೆಂದರೆ ಚಾನೆಲ್‌ಗಳ ನಡೆ ಬದಲಾಗುತ್ತದೆ ಎನ್ನುವುದನ್ನು ನೀವೇ ನೋಡಿ. ಮೊದಲೂ ಹಾಗೆಯೇ ಇರುತ್ತವೆ,ಆದರೆ ಚುನಾವಣೆಯ ಸಮಯದಲ್ಲಿ ಅಪಾಯಕಾರಿಯಾಗಿಬಿಡುತ್ತವೆ.

ಕರ್ನಾಟಕದಲ್ಲಿ ಚುನಾವಣೆಯ ಸಮಯದಲ್ಲಿ ರಾಜ್ಯದ ಆಡಳಿತ ಪಕ್ಷ ಮತ್ತು ಕೇಂದ್ರದ ಆಡಳಿತ ಪಕ್ಷದ ನಡುವೆ ಸಂತುಲನ ಹೇಗಿದೆ ಎನ್ನುವದರ ಬಗ್ಗೆ ಅಲ್ಲಿಯ ಟಿವಿ ವಾಹಿನಿಗಳು ಮತ್ತು ವೃತ್ತಪತ್ರಿಕೆಗಳಲ್ಲಿ ಪ್ರತಿನಿತ್ಯ ಸಮೀಕ್ಷೆ ನಡೆಯಬೇಕಾಗಿತ್ತು. ಕನ್ನಡ ಚಾನೆಲ್‌ಗಳಲ್ಲಿ ಯಾವ ಪಕ್ಷದ ಜಾಹೀರಾತುಗಳು ಹೆಚ್ಚಿಗೆ ಇವೆ,ಯಾವ ಪಕ್ಷದ ಜಾಹೀರಾತುಗಳು ಕಡಿಮೆ ಇವೆ,ಎರಡರಲ್ಲೂ ಎಷ್ಟು ಅಂತರವಿದೆ ಎನ್ನುವುದನ್ನು ನಂತರ ಓದಿ ಯಾರೇನು ಮಾಡಬೇಕಾಗಿದೆ? ಇವೆಲ್ಲವೂ ಚುನಾವಣೆಯ ಸಮಯದಲ್ಲಿಯೇ ನಡೆಯಬೇಕು. ಕನ್ನಡ ಚಾನೆಲ್‌ಗಳಲ್ಲಿ ಬಿಜೆಪಿಯ ಎಷ್ಟು ಜಾಹೀರಾತುಗಳು ಬರುತ್ತಿವೆ ಮತ್ತು ಕಾಂಗ್ರೆಸ್‌ನ ಎಷ್ಟು ಜಾಹೀರಾತುಗಳು ಬರುತ್ತಿವೆ ಎನ್ನುವುದನ್ನು ಯಾರಾದರೂ ಹೇಳಬಹುದೇ?

ಯಾರ ರ‍್ಯಾಲಿಯನ್ನು ದಿನಕ್ಕೆಷ್ಟು ಬಾರಿ ತೋರಿಸಲಾಗುತ್ತಿದೆ? ಪ್ರಧಾನಿ ಮೋದಿ,ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ,ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ಅವರ ರ‍್ಯಾಲಿಗಳನ್ನು ವರದಿ ಮಾಡುವಲ್ಲಿ ಸಂತುಲನವಿದೆಯೇ? ಈಗ ಈ ಆಟವನ್ನು ಸಾಕಷ್ಟು ಪೂರ್ವಸಿದ್ಧತೆಗಳೊಂದಿಗೆ ಆಡಲಾಗುತ್ತಿದೆ. ಯಾವ ನಾಯಕನ ಹೇಳಿಕೆಯ ಮೇಲೆ ಚರ್ಚೆ ನಡೆಯುತ್ತಿದೆ,ಯಾವ ಕೋನದಲ್ಲಿ ಚರ್ಚೆ ನಡೆಯುತ್ತಿದೆ,ಯಾರ ಪರವಾಗಿ ಚಾನೆಲ್‌ನಲ್ಲಿ ವೋಟಿಂಗ್ ನಡೆಯುತ್ತಿದೆ ಎನ್ನುವುದೆಲ್ಲ ನಮಗೆ ಗೊತ್ತೇ ಆಗುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಇವೆಲ್ಲ ವಿಷಯಗಳ ಅಧ್ಯಯನ ನಡೆಸಿ ಜನರ ಮುಂದಿಡುವ ಪ್ರಯತ್ನಗಳನ್ನು ಯಾರೂ ಮಾಡುತ್ತಿಲ್ಲ ಎನ್ನುವುದು ಕಳವಳಕಾರಿಯಾಗಿದೆ.

ಚುನಾವಣಾ ರ‍್ಯಾಲಿಗಳು ಈಗ ಟಿವಿಗಾಗಿ ನಡೆಯುತ್ತಿವೆ. ಟಿವಿಯಲ್ಲಿ ಕಾಣಿಸಿಕೊಳ್ಳಲು ಪಕ್ಷಗಳು ತಾವೇ ಖುದ್ದಾಗಿ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿವೆ. ತಮ್ಮ ಬಳಿಯೇ ಚಾನೆಲ್ ಇದೆಯೇನೋ ಎಂಬಂತೆ ಈ ಕಾರ್ಯಕ್ರಮಗಳನ್ನು ಎಡಿಟ್ ಮಾಡುವ ಅವು ಯೂ ಟ್ಯೂಬ್‌ನಲ್ಲಿ ಪೋಸ್ಟ್ ಮಾಡಿ ಎಲ್ಲವೂ ಲೈವ್ ಆಗಿ ನಡೆಯುತ್ತಿದೆ ಎಂಬ ಭಾವನೆಯನ್ನು ಸೃಷ್ಟಿಸುತ್ತಿವೆ. ಈ ಕಾರ್ಯಕ್ರಮಗಳನ್ನು ಅರ್ಥ ಮಾಡಿಕೊಳ್ಳಲು,ಅವುಗಳ ಮೇಲೆ ಬರೆಯಲು ಯಾರ ಬಳಿಯೂ ನುರಿತ ತಂಡವಿಲ್ಲ,ಕ್ಷಮತೆಯೂ ಇಲ್ಲ.

ಪ್ರಜಾಪ್ರಭುತ್ವದಲ್ಲಿ,ವಿಶೇಷವಾಗಿ ಚುನಾವಣೆಗಳಲ್ಲಿ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶವಿಲ್ಲ ಮತ್ತು ಹಣದ ಬಲದಿಂದ ಯಾವುದಾದರೂ ಪಕ್ಷ ಹೆಚ್ಚು ಅವಕಾಶವನ್ನು ಪಡೆದುಕೊಳ್ಳುತ್ತದೆ ಎಂದಾದರೆ ಅದು ಒಳ್ಳೆಯದಲ್ಲ. ಮಾಧ್ಯಮಗಳು ಯಾರದಾದರೂ ಹೇಳಿಕೆಯನ್ನು ಸುಲಭವಾಗಿ ಮಾಯ ಮಾಡುತ್ತಿವೆ ಮತ್ತು ಯಾರದಾದರೂ ಹೇಳಿಕೆಯನ್ನು ಪ್ರಮುಖವಾಗಿ ಬಿಂಬಿಸುತ್ತವೆ. ಇವೆಲ್ಲವುಗಳ ಬಗ್ಗೆ ರಾಜಕೀಯ ಪಕ್ಷಗಳು ತಕ್ಷಣ ಹೇಳಿಕೆಗಳನ್ನು ನೀಡಬೇಕು ಮತ್ತು ಮಾಧ್ಯಮಗಳ ಮೇಲೂ ಕಣ್ಣಿಡಬೇಕು.

ಯಾರಾದರೂ ಮತದಾನಕ್ಕೆ ಹೋಗುತ್ತಿಲ್ಲವೆಂದರೆ ಅವರ ಕೈಕಾಲುಗಳನ್ನು ಕಟ್ಟಿಯಾದರೂ ಮತಗಟ್ಟೆಗೆ ಒಯ್ದು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ. ನಮ್ಮ ಚುನಾವಣಾ ಆಯೋಗವೂ ಆಲಸಿಯಾಗಿಬಿಟ್ಟಿದೆ. ಮಾಧ್ಯಮಗಳು ವರದಿ ಮಾಡುವ ವೈಖರಿಗಳು ಮತ್ತು ಇಂತಹ ಹೇಳಿಕೆಗಳ ಮೇಲೆ ಕಣ್ಣಿಡುವ ಮತ್ತು ಕ್ರಮಗಳನ್ನು ತೆಗೆದುಕೊಳ್ಳುವ ಕಾರ್ಯ ಚುನಾವಣೆಯ ಸಂದರ್ಭದಲ್ಲಿಯೇ ನಡೆಯಬೇಕೇ ಹೊರತು ಚುನಾವಣೆಗಳು ಮುಗಿದ ಮೂರು ವರ್ಷಗಳ ಬಳಿಕ ಅಲ್ಲ ಎನ್ನುವುದನ್ನು ಆಯೋಗವು ಯಾವಾಗ ಅರ್ಥ ಮಾಡಿಕೊಳ್ಳುತ್ತದೆ?

Full View

Writer - ರವೀಶ್ ಕುಮಾರ್

contributor

Editor - ರವೀಶ್ ಕುಮಾರ್

contributor

Similar News