ಕಥುವಾ ಅತ್ಯಾಚಾರ, ಕೊಲೆ ಪ್ರಕರಣ : ಸಿಬಿಐ ತನಿಖೆಯ ಅಗತ್ಯವಿಲ್ಲ: ಮೆಹಬೂಬ ಮುಫ್ತಿ

Update: 2018-05-07 13:37 GMT

ಹೊಸದಿಲ್ಲಿ, ಮೇ 7: ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣದ ಬಗ್ಗೆ ಸಿಬಿಐ ತನಿಖೆಯ ಅಗತ್ಯವೇ ಇಲ್ಲ . ಜಮ್ಮು ಕಾಶ್ಮೀರದ ಪೊಲೀಸರ ಮೇಲೆ ನಿಮಗೆ ವಿಶ್ವಾಸ ಇಲ್ಲ ಎಂದಾದಲ್ಲಿ ರಾಜ್ಯದಲ್ಲಿ ವಿಶ್ವಾಸಕ್ಕೆ ಅರ್ಹರಾದವರು ಬೇರೆ ಯಾರೂ ಇಲ್ಲ ಎಂದು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.

ಪ್ರತೀ ಬಾರಿ ದುಷ್ಕೃತ್ಯ ನಡೆದಾಗ , ಅದರ ಬಗ್ಗೆ ತನಿಖೆ ನಡೆಸುವ ತನಿಖಾ ತಂಡದ ಬಗ್ಗೆ ಜನಾಭಿಮತ ರೂಪಿಸಲು ಸಾಧ್ಯವಾಗದು. ಕೆಲವು ಸ್ವಹಿತಾಸಕ್ತರು ಜಮ್ಮು ಕಾಶ್ಮೀರ ಪೊಲೀಸ್‌ನ ಕ್ರೈಂಬ್ರಾಂಚ್ ವಿಭಾಗದ ತನಿಖೆಯನ್ನು ಪ್ರಶ್ನಿಸುತ್ತಿದ್ದು, ಹೇಯ ಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ರಕ್ಷಿಸುವುದು ಇವರ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.

 ಕ್ರೈಂಬ್ರಾಂಚ್ ವಿಭಾಗ ಎಲ್ಲಾ ಸಾಕ್ಷಿಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಅತ್ಯುತ್ತಮ ತನಿಖಾ ಕಾರ್ಯ ನಿರ್ವಹಿಸಿದೆ. ಈಗ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ನ್ಯಾಯಾಲಯದ ತೀರ್ಪು ಎಲ್ಲವನ್ನೂ ನಿರ್ಧರಿಸಲಿದೆ. ಆದ್ದರಿಂದ ಸಿಬಿಐ ತನಿಖೆಯ ಅಗತ್ಯವೇ ಇಲ್ಲ. ಆರೋಪಿಗಳು ಒತ್ತಾಯಿಸುತ್ತಿದ್ದಾರೆ ಎಂಬ ಕಾರಣಕ್ಕೆ ಇಂತಹ ನಿರ್ಧಾರ ಕೈಗೊಳ್ಳಲಾಗದು ಎಂದು ಮುಫ್ತಿ ಹೇಳಿದ್ದಾರೆ. ಗ್ರಾಮದ ನಿವಾಸಿಯೊಬ್ಬನನ್ನು ಜೀಪಿಗೆ ಕಟ್ಟಿ ಎಳೆದೊಯ್ದ ಈ ನ್ಯಾಯಬಾಹಿರ ಕೃತ್ಯವನ್ನು ಟೀಕಿಸಿದರೆ ಸೇನಾಪಡೆಯ ನೈತಿಕ ಸ್ಥೈರ್ಯ ಕುಸಿಯುತ್ತದೆ ಎಂದು ನಮಗೆ ತಿಳಿಸಲಾಯಿತು. ಇದೇ ರೀತಿ, ಈಗ ಜಮ್ಮು ಕಾಶ್ಮೀರದ ಪೊಲೀಸರನ್ನು ಟೀಕಿಸಿದರೆ ಏನಾಗುತ್ತದೆ ಎಂದವರು ಪ್ರಶ್ನಿಸಿದರು.

ಸರಕಾರ ಈ ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್‌ಗೆ ವಹಿಸಿಕೊಟ್ಟಿರುವಾಗ ಆರೋಪಿಗಳು ಈ ವಿಷಯದಲ್ಲಿ ಮಾತಾಡುವ ಅಗತ್ಯವಿಲ್ಲ. ನಾವು ಹಲವು ಸವಾಲುಗಳನ್ನು ಎದುರಿಸಬೇಕಿದ್ದು ಕೋಮುವಾದದ ಜ್ವಾಲೆ ರಾಜ್ಯದಲ್ಲಿ ಎಲ್ಲವನ್ನೂ ಸುಟ್ಟು ಬಿಡಲು ನಾವು ಅವಕಾಶ ನೀಡುವುದಿಲ್ಲ. ನಮ್ಮ ಸರಕಾರ ಈ ಪ್ರಕರಣವನ್ನು ಸೂಕ್ತವಾಗಿ ನಿಭಾಯಿಸಿದೆ. ಕೆಲವರು ಈ ಹೇಯ ಕೃತ್ಯಕ್ಕೆ ಹಿಂದು-ಮುಸ್ಲಿಮ್ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮೆಹಬೂಬ ಮುಫ್ತಿ ಹೇಳಿದರು. ಪ್ರಕರಣದ ವಿಚಾರಣೆಯನ್ನು ಚಂಡೀಗಢಕ್ಕೆ ವರ್ಗಾಯಿಸಬೇಕೆಂದು ಕೋರಿ ಸಂತ್ರಸ್ತೆಯ ತಂದೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸೋಮವಾರ ನಡೆದಾಗ ಜಮ್ಮು-ಕಾಶ್ಮೀರ ಸರಕಾರ ವಿಚಾರಣೆಯನ್ನು ರಾಜ್ಯದಿಂದ ಹೊರಗೆ ನಡೆಸುವುದಕ್ಕೆ ಆಕ್ಷೇಪ ಸಲ್ಲಿಸಿತು. ಈ ಮಧ್ಯೆ ಭಾರತೀಯ ವಕೀಲರ ಮಂಡಳಿ(ಬಾರ್ ಕೌನ್ಸಿಲ್ ಆಫ್ ಇಂಡಿಯ) ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ , ಸಿಬಿಐ ತನಿಖೆಯ ಆಗ್ರಹ ಸಮರ್ಥನೀಯವಾಗಿದೆ ಎಂದು ತಿಳಿಸಿದೆ.

ಪ್ರಕರಣವನ್ನು ಸಿಬಿಐಗೆ ವಹಿಸುವುದಕ್ಕೆ ಜಮ್ಮು ಕಾಶ್ಮೀರ ಸರಕಾರದ ಅಂಗಪಕ್ಷವಾಗಿರುವ ಬಿಜೆಪಿ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಅಲ್ಲದೆ ಅತ್ಯಾಚಾರ ಆರೋಪಿಗಳನ್ನು ಬೆಂಬಲಿಸುತ್ತಿರುವ ಹಿಂದು ಏಕತಾ ಮಂಚ್‌ನಲ್ಲಿ ಸಕ್ರಿಯರಾಗಿರುವ ಹಲವರು ಬಿಜೆಪಿ ಮತ್ತು ಸಂಘ ಪರಿವಾರದೊಡನೆ ಸಂಬಂಧ ಹೊಂದಿದ್ದು ಇವರೂ ಕೂಡಾ ಸಿಬಿಐ ತನಿಖೆಯ ಪರವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News