ಚಾಲಕರೇ ಹುಷಾರ್... ವೇಗ ಪತ್ತೆ ಹಚ್ಚುವ ಕ್ಯಾಮೆರಾಗಳಿವೆ

Update: 2018-05-09 03:55 GMT

ಕೊಚ್ಚಿನ್, ಮೇ 9: ವಾಹನ ಚಾಲಕರೇ, ಹುಷಾರ್ ! ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮುಖ್ಯ ಜಂಕ್ಷನ್‌ಗಳಲ್ಲಿ ನಿಮ್ಮ ಸ್ಪೀಡ್‌ಮೀಟರ್ ಮೇಲೆ ನಿಮ್ಮ ಗಮನ ಇರಲಿ. ಸಿಗ್ನಲ್‌ಜಂಪ್ ಮಾಡಿ ನೀವು ಸುರಕ್ಷಿತ ಎಂಬ ಭಾವನೆ ಇದ್ದರೆ ಅದನ್ನು ಬಿಟ್ಟು ಜಾಗರೂಕರಾಗಿ. ಕೇರಳದ ಮೋಟಾರು ವಾಹನ ಇಲಾಖೆ, ನಿಮ್ಮ ಶರವೇಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದ ಪ್ರಮುಖ ಜಂಕ್ಷನ್‌ಗಳಲ್ಲಿ ವೇಗ ಪತ್ತೆಯ 46 ಕ್ಯಾಮೆರಾಗಳನ್ನು ಅಳವಡಿಸಿದೆ.

ಸಾರಿಗೆ ಆಯುಕ್ತ ಕೆ.ಪದ್ಮಕುಮಾರ್ ನೇತೃತ್ವದಲ್ಲಿ ಕಳೆದ ವಾರ ನಡೆದ ಸಭೆಯಲ್ಲಿ ನೀಡಿದ ಸೂಚನೆಯ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. "ಸಿಗ್ನಲ್ ಜಂಪ್ ಪತ್ತೆ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಇಂಥ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ, ಜಂಕ್ಷನ್‌ಗಳಲ್ಲಿ ಗೆರೆಗಳ ಗುರುತು ಹಾಕದ ಹಿನ್ನೆಲೆಯಲ್ಲಿ ಜಂಕ್ಷನ್ ಕ್ಯಾಮೆರಾಗಳಿಂದ ಪ್ರಯೋಜನವಾಗುತ್ತಿಲ್ಲ. ವಾಹನ ಚಾಲಕ ಲಕ್ಷ್ಮಣರೇಖೆ ಉಲ್ಲಂಘಿಸಿದ್ದಾನೆಯೇ ಎಂದು ನಿರ್ಧರಿಸುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇವುಗಳ ಬದಲಾಗಿ ವೇಗ ಪತ್ತೆ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿ ಕೆ.ಎಂ.ಶಾಜಿ ಹೇಳಿದ್ದಾರೆ.

ಪ್ರಸ್ತುತ ಚೆರ್ಟಾಲದಿಂದ ಮಂಜೇಶ್ವರ ನಡುವೆ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ 201 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ವಡಕ್ಕೆಂಚೇರಿ ಯಿಂದ ವಲಯಾರ್ ವರೆಗೆ 38 ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಈ ಕ್ಯಾಮೆರಾಗಳಿಂದಾಗಿ ದಿನಕ್ಕೆ 8000 ಉಲ್ಲಂಘನೆ ಪ್ರಕರಣಗಳು ಪತ್ತೆಯಾಗುತ್ತಿವೆ. ಸಾಕಷ್ಟು ಸಿಬ್ಬಂದಿ ಇಲ್ಲದ ಕಾರಣ ದಿನಕ್ಕೆ 3000 ಮಂದಿಗೆ ಮಾತ್ರ ನೋಟಿಸ್ ನೀಡಲು ಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಕ್ಕನಾಡ್ ಸಿವಿಲ್ ಸ್ಟೇಷನ್‌ನಲ್ಲಿ ಸ್ವಯಂಚಾಲಿತ ಜಾರಿ ಕಚೇರಿಯನ್ನು ವಿಸ್ತರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News