ನೀವು ಕುಡಿಯುವ ನೀರು ಎಷ್ಟು ಸುರಕ್ಷಿತ

Update: 2018-05-10 17:07 GMT

ಹೊಸದಿಲ್ಲಿ, ಮೇ 10: ಭಾರತದಲ್ಲಿ ಸುಮಾರು 1.47 ಕೋಟಿ ಜನತೆ ಅರ್ಸನಿಕ್ ಮಿಶ್ರ ನೀರು ಸೇವಿಸುತ್ತಿದ್ದಾರೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ.

 ಕುಡಿಯುವ ನೀರಿನಲ್ಲಿ ಸ್ವೀಕೃತ ಮಟ್ಟಕ್ಕಿಂತ ಹೆಚ್ಚಿನ ಅರ್ಸನಿಕ್ ಅಂಶವು 16,889 ಸ್ಥಳಗಳಲ್ಲಿ ಕಂಡುಬಂದಿದ್ದರೆ, 12,029 ಸ್ಥಳಗಳಲ್ಲಿ ನೀರಿನಲ್ಲಿರುವ ಫ್ಲೋರೈಡ್‌ನ ಪ್ರಮಾಣ ಅಧಿಕವಾಗಿದೆ. 23,613 ಪ್ರದೇಶಗಳಲ್ಲಿನ ಕುಡಿಯುವ ನೀರಿನಲ್ಲಿ ಕಬ್ಬಿಣಾಂಶದ ಪ್ರಮಾಣವಿದ್ದರೆ ಸುಮಾರು 14,069 ಪ್ರದೇಶಗಳಲ್ಲಿ ಕುಡಿಯುವ ನೀರಿನಲ್ಲಿ ಲವಣತ್ವ(ಕ್ಷಾರತೆ)ಯ ಪ್ರಮಾಣ ಹೆಚ್ಚಿದ್ದರೆ, 1809 ಪ್ರದೇಶಗಳಲ್ಲಿ ನೈಟ್ರೇಟ್‌ನ ಅಂಶ ಕಂಡುಬಂದಿದೆ. ಕಳೆದ ತಿಂಗಳು ಕುಡಿಯುವ ನೀರಿನ ಮಲಿನತೆಯ ಬಗ್ಗೆ ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಸರಕಾರ, ಲವಣಾಂಶ, ಕಬ್ಬಿಣಾಂಶ, ನೈಟ್ರೇಟ್ ಅಂಶ ಇತ್ಯಾದಿಗಳು ಹೆಚ್ಚಿದ್ದು, ಕುಡಿಯುವ ನೀರು ಮಲಿನಗೊಂಡಿರುವ ಒಟ್ಟು 70,793 ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿತ್ತು. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಪ್ರಕಾರ ಕುಡಿಯುವ ನೀರಿನಲ್ಲಿ ಅರ್ಸೆನಿಕ್ ಅಂಶ ಅಧಿಕ ಇರುವ ರಾಜ್ಯಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಲ ಮೊದಲ ಸ್ಥಾನದಲ್ಲಿ(9756 ಪ್ರದೇಶಗಳು ಬಾಧಿತವಾಗಿವೆ), ಅಸ್ಸಾಂ ದ್ವಿತೀಯ ಸ್ಥಾನ(4,416 ಪ್ರದೇಶ)ದಲ್ಲಿದೆ. ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳೂ ಈ ಪಟ್ಟಿಯಲ್ಲಿವೆ.

ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಮಿಶ್ರಿತವಾಗಿರುವ ರಾಜ್ಯಗಳ ಪಟ್ಟಿಯಲ್ಲಿ ರಾಜಸ್ತಾನ ಅಗ್ರಸ್ಥಾನದಲ್ಲಿ (5939 ಬಾಧಿತ ಪ್ರದೇಶಗಳು), ಪ.ಬಂಗಾಲ (1293) ಮತ್ತು ಬಿಹಾರ (898) ಆ ಬಳಿಕದ ಸ್ಥಾನದಲ್ಲಿವೆ. 2378 ಪ್ರದೇಶಗಳ ಕುಡಿಯುವ ನೀರಿನಲ್ಲಿ ಅಧಿಕ ಲೋಹದ ಅಂಶ ಕಂಡುಬಂದಿದೆ. ಮಲಿನಗೊಂಡಿರುವ ಕುಡಿಯುವ ನೀರನ್ನು ಹೊಂದಿರುವ ವಾಸಸ್ಥಾನದ ಸಂಖ್ಯೆ ಕಳೆದ ಐದು ವರ್ಷದಲ್ಲಿ ಕಡಿಮೆಯಾಗಿದ್ದರೂ, 2016ರಲ್ಲಿ ಈ ಪ್ರಮಾಣ ಮತ್ತೆ ಹೆಚ್ಚಿದೆ. 2009ರಲ್ಲಿ 9,504 ವಾಸಸ್ಥಾನಗಳಲ್ಲಿ ಕುಡಿಯುವ ನೀರು ಮಲಿನವಾಗಿದ್ದರೆ, 2014ರಲ್ಲಿ ಈ ಪ್ರಮಾಣ 1,800ಕ್ಕೆ ಇಳಿದಿದೆ. ಆದರೆ 2016ರಲ್ಲಿ 14,413ಕ್ಕೆ ತಲುಪಿದೆ. ಈ ಅಂಕಿ ಅಂಶಗಳು ರಾಜ್ಯ ಸರಕಾರದ ವರದಿಯನ್ನು ಆಧರಿಸಿವೆ ಎಂದು ಸಚಿವಾಲಯ ತಿಳಿಸಿದೆ. ಅರ್ಸೆನಿಕ್ ಕುಡಿಯುವ ನೀರನ್ನು ಮಲಿನಗೊಳಿಸುವ ಅತ್ಯಂತ ಅಪಾಯಕಾರಿ ದ್ರಾವಣವಾಗಿದೆ. ಅರ್ಸೆನಿಕ್ ಮಿಶ್ರಿತ ಕುಡಿಯುವ ನೀರನ್ನು ಸುದೀರ್ಘಾವಧಿಯಲ್ಲಿ ಸೇವಿಸುತ್ತಾ ಬಂದರೆ ಚರ್ಮ, ಶ್ವಾಸಕೋಶ, ಕರುಳು, ಕಿಡ್ನಿಯ ಕ್ಯಾನ್ಸರ್ ಬರಬಹುದು. ನೀರಿನಲ್ಲಿ ಫ್ಲೋರೈಡ್‌ನ ಪ್ರಮಾಣ ಹೆಚ್ಚಿದ್ದರೆ ಹಲ್ಲುಗಳು ಬಣ್ಣಗೆಡುವುದು ಮತ್ತು ಎಲುಬಿನ ಸಮಸ್ಯೆ ಬರಬಹುದು ಹಾಗೂ ನರವ್ಯವಸ್ಥೆಗೆ ಹಾನಿಯಾಗಬಹುದು. ಕಬ್ಬಿಣದ ಅಂಶ ಹೆಚ್ಚಿದ್ದರೆ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ . ಗ್ರಾಮೀಣ ನೀರು ಪೂರೈಕೆಯು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿರುವ ಕಾರಣ ಕೇಂದ್ರ ಸರಕಾರವು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳ ಹಾಗೂ  ಕೇಂದ್ರ ಪ್ರಾಯೋಜಿತ ಯೋಜನೆಗಳ ಮೂಲಕ ತಾಂತ್ರಿಕ ಹಾಗೂ ಆರ್ಥಿಕ ನೆರವು ನೀಡುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News