ಕಾಸರಗೋಡು: ಮಸೀದಿಯಲ್ಲಿ ಸಂವಿಧಾನ ಮೌಲ್ಯಗಳ ಬೋಧನೆ

Update: 2018-05-11 05:17 GMT

ತಿರುವನಂತಪುರ, ಮೇ 11: ಕಾಸರಗೋಡಿನ ಈ ಮಸೀದಿಯಲ್ಲಿ ಪ್ರತಿ ಶುಕ್ರವಾರ ಕುತುಬಾ ಪಾರಾಯಣದ ಬಳಿಕ, ಮುಸ್ಲಿಂ ಯುವಕರ ಒಂದು ಗುಂಪು ಭಾರತದ ಸಂವಿಧಾನ ಮೌಲ್ಯಗಳನ್ನು ಮತ್ತು ಪ್ರತಿ ನಾಗರಿಕರಿಗೆ ಸಂವಿಧಾನ ಖಾತ್ರಿಪಡಿಸುವ ಸ್ವಾತಂತ್ರ್ಯದ ಬಗ್ಗೆ ಕಲಿಯಲು ಸೇರುತ್ತಾರೆ.

ಮಸೀದಿಯ ಇಮಾಮ್ ಈ ವಿಷಯ ಬೋಧನೆಗೆ ಆಯ್ಕೆಯಾದ ತಜ್ಞರಲ್ಲೊಬ್ಬರು. ಕೇರಳ ಪೊಲೀಸ್ ಇಲಾಖೆ ಭಾರತೀಯ ನಾಗರಿಕರ ಸಂವಿಧಾನಾತ್ಮಕ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಯುವಕರಿಗೆ ಬೋಧಿಸುವ ವಿನೂತನ ಯೋಜನೆ ಆರಂಭಿಸಿದ್ದು, ಇದಕ್ಕಾಗಿಯೇ ರಚಿತವಾದ ವಿಶೇಷ ತಂಡದ ಜತೆ ಇಮಾಮ್ ಸಹಕರಿಸುತ್ತಿದ್ದಾರೆ.

ಕಳೆದ ಮೂರು ತಿಂಗಳಿಂದ ಕೇರಳ ಪೊಲೀಸರು ಯಶಸ್ವಿಯಾಗಿ ಈ ತರಗತಿಗಳನ್ನು ನಡೆಸುತ್ತಿದ್ದು,  ಈ ಯೋಜನೆ ಕೇವಲ ಕಾಸರಗೋಡಿಗಷ್ಟೇ ಸೀಮಿತವಲ್ಲ. ಉತ್ತರ ಕೇರಳದ ಪ್ರದೇಶಗಳನ್ನು ಸಾಮಾಜಿಕ ಸಮೀಕ್ಷೆ ಮೂಲಕ ಗುರುತಿಸಿರುವ ಪೊಲೀಸರು, ಈ ಎಲ್ಲ ಕಡೆಗಳಲ್ಲಿ ಇಂಥ ಪ್ರಯತ್ನ ನಡೆಸಿದ್ದಾರೆ. ಈ ಯೋಜನೆಯಡಿ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಲು ಪೊಲೀಸರು, ಕುರ್ ಆನ್ ಮತ್ತು ಹದೀಸ್ ಬಗ್ಗೆ ಆಳವಾದ ಜ್ಞಾನ ಇರುವ ಇಸ್ಲಾಂ ಪ್ರಾಜ್ಞರು ಮತ್ತು ಧರ್ಮಗುರುಗಳನ್ನು ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ಜ್ಞಾನ ಇರುವ ನಿವೃತ್ತ ಪೊಲೀಸ್ ಅಧಿಕಾರಿಗಳ ನೆರವನ್ನೂ ಇಲಾಖೆ ಪಡೆದಿದೆ.

"ಈ ಯೋಜನೆ ಈಗಷ್ಟೇ ಅನುಷ್ಠಾನಗೊಳ್ಳುತ್ತಿದೆ. ಧನಾತ್ಮಕ ಸ್ಪಂದನೆ ದೊರಕಿದೆ. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ" ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಹೇಳಿದ್ದಾರೆ. ಹಂತಹಂತವಾಗಿ ಇದನ್ನು ವಿಸ್ತರಿಸಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News