ಆಧಾರ್ ಎಂಬ ಮಹಾ ಭದ್ರತಾ ದುಃಸ್ವಪ್ನ

Update: 2018-05-15 18:44 GMT

ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕವಾಗಿ ವರದಿಯಾದ ಎಲ್ಲ ಆಧಾರ್- ಸಂಬಂಧಿತ ಅಥವಾ ಆಧಾರ್‌ನಿಂದಾಗಿ ಸಾಧ್ಯವಾದ ವಂಚನೆ ಪ್ರಕರಣಗಳ ವಿವರವಾದ ಒಂದು ವಿಶ್ಲೇಷಣೆಯು ಆಧಾರ್ ಸಮಸ್ಯೆ ನಿಜವಷ್ಟೇ ಅಲ್ಲ. ಬದಲಾಗಿ ಇದುವರೆಗೆ ಅದಕ್ಕೆ ನೀಡಲಾಗಿರುವ ಗಮನಕ್ಕಿಂತ ಹೆಚ್ಚಿನ ಗಮನ ನೀಡಬೇಕಾಗಿದೆ ಎಂಬುದನ್ನು ತೋರಿಸುತ್ತದೆ.


ಭಾಗ-1

ಭಾರತದ ಬಯೋಮೆಟ್ರಿಕ್ ಗುರುತು ಕಾರ್ಯಕ್ರಮವಾಗಿರುವ ಆಧಾರ್‌ನ ಕಾನೂನು ಬದ್ಧತೆಯನ್ನು, ಸಾಂವಿಧಾನಿಕ ಬಂಧುತ್ವವನ್ನು ಪ್ರಶ್ನಿಸಿದ್ದ ಮೊಕದ್ದಮೆಯ 38ನೆಯ ಹಾಗೂ ಕೊನೆಯ ದಿನದ ವಿಚಾರಣೆ ಇತ್ತೀಚೆಗಷ್ಟೇ ಮುಗಿದಿದೆ. ಉಭಯ ಪಕ್ಷಗಳ ವಾರಗಟ್ಟಲೆ ವಾದಗಳನ್ನು ಆಲಿಸಿದ ಬಳಿಕ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ದಿನಗಣನೆ ಆರಂಭವಾಗಿದೆ. ಆರಂಭದಿಂದಲೂ, ಆಧಾರ್ ಯೋಜನೆ ವಿವಾದದಿಂದ ಹಗರಣದ ಕಡೆಗೆ ಸಾಗುತ್ತ ಬಂದಿದೆ. ಕಳೆದ ಎರಡು ವರ್ಷಗಳಲ್ಲಿ, ಆಧಾರ್‌ಗೆ ನಾಗರಿಕರು ನೀಡುವ ದತ್ತಾಂಶಗಳ ಭದ್ರತೆ, ಖಾಸಗಿತನ ಮತ್ತು ಸರಕಾರದ ವ್ಯಾಪ್ತಿ ಮೀರಿದ ಅತಿಯಾದ ಕ್ರಮಗಳ ಸುತ್ತ ಚರ್ಚೆ ನಡೆದಿದೆ. ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ವಿಮರ್ಶಾತ್ಮಕವಾದ ಸಾರ್ವಜನಿಕ ಚರ್ಚೆಗೆ ಪ್ರತಿಕ್ರಿಯಿಸಿದ ರೀತಿಯಿಂದಾಗಿ ಚರ್ಚೆ ಗೊಂದಲ ಪೂರಿತವಾಗುವಂತಾಗಿದೆ.

ಇಡೀ ದೇಶ ಅತ್ಯುಚ್ಚ ನ್ಯಾಯಾಲಯದ ತೀರ್ಪಿಗೆ ಕಾಯುತ್ತಿರುವಾಗ, ಆಧಾರ್ ವ್ಯವಸ್ಥೆಯಲ್ಲಿರುವ ಭದ್ರತಾ ಹಾಗೂ ಖಾಸಗಿತನದ ದೋಷಗಳನ್ನು, ಅಪಾಯಗಳನ್ನು ಪರಿಗಣಿಸಲು, ವಿಶ್ಲೇಷಿಸಲು ಇದು ಸೂಕ್ತ ಸಮಯ.

ಮಾಹಿತಿ ಭದ್ರತೆ ಬಗ್ಗೆ ಪ್ರಚಲಿತವಿರುವ ಸಡಿಲು ಧೋರಣೆಯಿಂದಾಗಿ ಆಧಾರ್ ನಂಬರ್‌ಗಳನ್ನು ಸಂಗ್ರಹಿಸುವುದು ಒಂದು ಕ್ಷುಲ್ಲಕ ವಿಷಯವಾಗಿ ಬಿಟ್ಟಿದೆ. ಆಧಾರ್ ಸಿಂಧುತ್ವವನ್ನು (ಅಥೆಂಟಿಕೇಶನ್) ಅನುಷ್ಠಾನಗೊಳಿಸುವ ಅನೇಕ ಸರಕಾರಿ ವೆಬ್‌ಸೈಟ್‌ಗಳಿವೆ. ಇವುಗಳಲ್ಲಿ ಪ್ರಾಥಮಿಕ ಭದ್ರತಾ ವ್ಯವಸ್ಥೆಗಳು ಕೂಡ ಇಲ್ಲ. ವಿದೇಶ ವ್ಯಾಪಾರದ ಮಹಾ ನಿರ್ದೇಶಕರ ವೆಬ್‌ಸೈಟ್, ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದ ವೆಬ್‌ಸೈಟ್ ನಂತಹ ವೆಬ್‌ಸೈಟ್‌ಗಳನ್ನು ಇಲ್ಲಿ ಉದಾಹರಿಸಬಹುದು.

ಹಲವಾರು ಸರಕಾರಿ ವೆಬ್‌ಸೈಟ್‌ಗಳು ವಂಚಕರಿಗೆ ಸುಲಭವಾಗಿ ಲಭ್ಯವಿರುವಾಗ, ಆಯಕಟ್ಟಿನ ದತ್ತಾಂಶಗಳನ್ನು ಕಾಪಿಡಲು ಸರಕಾರದ ಮುಕ್ತ ಡೈರಕ್ಟರಿಗಳ ಬಳಕೆ ಗಾಬರಿ ಹುಟ್ಟಿಸುತ್ತದೆ.

ಆಧಾರ್ ಕಾರ್ಡ್‌ಗಳ ಪಿಡಿಎಫ್ ಸ್ಕಾನ್‌ಗಳನ್ನು ಹೊಂದಿರುವ ಮುಕ್ತ ವೆಬ್ ಡೈರಕ್ಟರಿಗಳನ್ನು ಹೊಂದಿದ ಸರಕಾರಿ ವೆಬ್‌ಸೈಟ್‌ಗಳು ಸ್ವೀಕಾರಾರ್ಹವಲ್ಲ, ಆದರೂ ಕೂಡ ಕಳೆದ ಒಂದೆರಡು ವರ್ಷಗಳಲ್ಲಿ ಹಲವು ಸರಕಾರಿ ವೆಬ್‌ಸೈಟ್‌ಗಳು ನಾಗರಿಕರ ಖಾಸಗಿ ಮಾಹಿತಿಯನ್ನು ಪ್ರಕಟಿಸಿರುವ ಉದಾಹರಣೆಗಳಿವೆ. ಇದರಿಂದಾಗಿ ಆಗಬಹುದಾದ ಪರಿಣಾಮಗಳ ಬಗ್ಗೆ ಸರಕಾರ ಚಿಂತಿಸಿದಂತಿಲ್ಲ.

ಭದ್ರತೆ ಮತ್ತು ಖಾಸಗಿತನದ ಪ್ರಶ್ನೆಗಳನ್ನೆತ್ತಿದಾಗ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಅಂತಹ ತಕರಾರುಗಳನ್ನು ತಳ್ಳಿ ಹಾಕುವ ಧೋರಣೆಯನ್ನು ಪ್ರಕಟಿಸಿದೆ.
ಓರ್ವ ಭದ್ರತಾ ಸಂಶೋಧಕನಾಗಿ ನನ್ನ ವೈಯಕ್ತಿಕ ಅನುಭವದಿಂದ ಹೇಳುತ್ತೇನೆ: ನಾನು 40,000ಕ್ಕಿಂತಲೂ ಹೆಚ್ಚು ಆಧಾರ್ ಕಾರ್ಡ್‌ಗಳ ಮಾಹಿತಿಯನ್ನು ಖಾಸಗಿ ಕಂಪೆನಿಯೊಂದರ ಭದ್ರತೆಯಿಲ್ಲದ ದತ್ತಾಂಶಗಳ ಮೂಲಕ ಪಡೆದಿದ್ದೇನೆ ಮತ್ತು ಈ ಬಗ್ಗೆ ವರದಿ ಮಾಡಿದ್ದೇನೆ ಕೂಡ. ಇನ್ನಷ್ಟು ಶೋಚನೀಯ ಹಾಗೂ ಆಘಾತಕಾರಿ ವಿಷಯ ಎಂದರೆ, ಹೀಗೆ ಬೆಳಕಿಗೆ ಬರುವ ಆಧಾರ್ ಮಾಹಿತಿ ಸೋರಿಕೆಯ ಹಿಮಬಂಡೆಯ ಮೇಲ್ಭಾಗ ಮಾತ್ರ. ಈ ಹನ್ನೆರಡು ಅಂಕೆಗಳು ಮತ್ತು ಅವುಗಳ ಮೂಲಕ ಲಭಿಸುವ ಮಹಿತಿಯು ಕ್ರಿಮಿನಲ್‌ಗಳಿಗೆ, ಗುರುತು ಕಳ್ಳತನ ಮತ್ತು ಸಿಮ್ ಹಾಗೂ ಬ್ಯಾಂಕಿಂಗ್ ವಂಚನೆಯನ್ನು ತುಂಬ ಸುಲಭವಾಗಿಸುತ್ತವೆ ಎಂಬುದನ್ನು ಮರೆಯಬಾರದು.

ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕವಾಗಿ ವರದಿಯಾದ ಎಲ್ಲ ಆಧಾರ್- ಸಂಬಂಧಿತ ಅಥವಾ ಆಧಾರ್‌ನಿಂದಾಗಿ ಸಾಧ್ಯವಾದ ವಂಚನೆ ಪ್ರಕರಣಗಳ ವಿವರವಾದ ಒಂದು ವಿಶ್ಲೇಷಣೆಯು ಆಧಾರ್ ಸಮಸ್ಯೆ ನಿಜವಷ್ಟೇ ಅಲ್ಲ. ಬದಲಾಗಿ ಇದುವರೆಗೆ ಅದಕ್ಕೆ ನೀಡಲಾಗಿರುವ ಗಮನಕ್ಕಿಂತ ಹೆಚ್ಚಿನ ಗಮನ ನೀಡಬೇಕಾಗಿದೆ ಎಂಬುದನ್ನು ತೋರಿಸುತ್ತದೆ.

ಬೆದರಿಕೆಯ ಮಟ್ಟ ಅನಂತ, ಅಸೀಮಿತ
 ಆಧಾರ್ ಯೋಜನೆಯು, ಈಗ ನಿಯಂತ್ರಿಸಲು ಒದ್ದಾಡುತ್ತಿರುವ ಒಂದು ಪರಿಸರ ವ್ಯವಸ್ಥೆಯಾಗಿ (ಇಕೊ ಸಿಸ್ಟಮ್) ಮಾರ್ಪಟ್ಟಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಉದಾಹರಣೆಗೆ, ಆಧಾರ್ ಕಾಯ್ದೆಯಲ್ಲಿ ಹೇಳಲಾಗಿರುವಂತೆ, ಡೆಮಾಗ್ರಾಫಿಕ್ ಮಾಹಿತಿಯೂ ಮೂಲತಃ ರಹಸ್ಯವಾಗಿಡಲಾಗುವ (ಕಾನ್ಫಿಡೆನ್ಸಿಯಲ್) ಮಾಹಿತಿ ಎಂದು ಪರಿಗಣಿಸಲ್ಪಟ್ಟಿತ್ತು. ಅಂದರೆ ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿಯಾಗಿ ನಿಮ್ಮ ಡೆಮಾಗ್ರಾಫಿಕ್ ಮಾಹಿತಿಯನ್ನು ನೀಡುವಂತೆ ಯಾವುದೆ ಸಂಘ, ಸಂಸ್ಥೆ, ಏಜನ್ಸಿ, ಪ್ರಾಧಿಕಾರ ನಿಮ್ಮಾಡನೆ ವಿನಂತಿಸಿಕೊಳ್ಳುವಂತಿಲ್ಲ. ಇಲೆಕ್ಟ್ರಾನಿಕ್ ನೋ (know) ಯುವರ್ ಕಸ್ಟಮರ್ (ಇಕೆವೈಸಿ) ಉದ್ದೇಶಗಳಿಗಾಗಿ ಹೀಗೆ ಕೇಳುವಂತಿಲ್ಲ ಎನ್ನಲಾಗಿತ್ತು. ಆದರೆ ಆಧಾರ್ ಇಕೊ ಸಿಸ್ಟಮ್ ಅಭಿವೃದ್ಧಿ ಹೊಂದುತ್ತ ಹೋದಂತೆ, ಪೇಟಿಎಂನಂತಹ ಕಂಪೆನಿಗಳು ಇಕೆವೈಸಿಯನ್ನು ಅನುಷ್ಠಾನಗೊಳಿಸುವ ಮತ್ತು ಬಳಸುವ ವಿಧಾನಗಳು ಕೂಡ ಬದಲಾದವು. ಕಂಪೆನಿಗಳು ಗ್ರಾಹಕನ ಕುರಿತಾದ ಮಾಹಿತಿಯನ್ನು ಚೆಕ್ ಮಾಡುವ ಉದ್ದೇಶಗಳಿಗಾಗಿ ಆಧಾರ್ ಮಾಹಿತಿಯನ್ನು ಕೇಳಲಾರಂಭಿಸಿದವು. ಹೀಗೆ ಪಡೆಯಲಾದ ನಮ್ಮ ದತ್ತಾಂಶಗಳನ್ನು ಇಂತಹ ಕಂಪೆನಿಗಳು ಭವಿಷ್ಯದಲ್ಲಿ ತಮಗೆ ಬೇಕಾದಾಗ ಬಳಸಿಕೊಳ್ಳಬಹುದಾಗಿದೆ. ಅಂತಹ ಬಳಕೆಯ ಮೇಲೆ ನಮಗೆ ಯಾವ ನಿಯಂತ್ರಣವೂ ಇರುವುದಿಲ್ಲ ಎಂಬುದು ಗಮನಾರ್ಹ.

ಹೀಗೆ, ಎಂದಾದರೂ ಇಂತಹ ದತ್ತಾಂಶಗಳ ಸೋರಿಕೆ/ಪ್ರಸರಣವಾದಲ್ಲಿ ಅದು ಒಂದು ಬಿಲಿಯ ಜನರಿಗಿಂತಲೂ ಹೆಚ್ಚಿನ ಜನರ ಮೇಲೆ ಪರಿಣಾಮ ಬೀರಲಿದೆ. ಸರಳವಾಗಿ ಹೇಳುವುದಾದರೆ, ಅದು ವಿಶ್ವದಲ್ಲೇ ಅತ್ಯಂತ ಬೃಹತ್ತಾದ ದತ್ತಾಂಶಗಳ ಒಂದು ಸೋರಿಕೆ ಪ್ರಕರಣವಾಗುತ್ತದೆ ಮತ್ತು ಇದರಿಂದಾಗುವ ಪರಿಣಾಮಗಳನ್ನು ನಿಯಂತ್ರಿಸಲು ಅಥವಾ ತಡೆಯಲು ಸಾಧ್ಯವಾಗುವುದಿಲ್ಲ ಎಂಬುದು ನಿಜವಾಗಿಯೂ ಆತಂಕಕಾರಿಯಾದ ವಿಷಯ.

ಕೃಪೆ: thewire.in

Writer - ಕರಣ್ ಸೈನಿ

contributor

Editor - ಕರಣ್ ಸೈನಿ

contributor

Similar News