ಗರ್ಭಿಣಿಯರ ಸ್ಕ್ಯಾನಿಂಗ್‌ಗೆ ವಿಳಾಸ ದೃಢೀಕರಣ ಕಡ್ಡಾಯ

Update: 2018-05-20 03:57 GMT

ಬೆಂಗಳೂರು, ಮೇ 20: ರಾಜ್ಯದಲ್ಲಿ ಇನ್ನು ಮುಂದೆ ಸ್ಕ್ಯಾನಿಂಗ್‌ಗೆ ಒಳಪಡುವ ಗರ್ಭಿಣಿಯರು ತಮ್ಮ ವಿಳಾಸ ದೃಢೀಕರಣ ಪತ್ರವನ್ನು ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸಲ್ಲಿಸುವುದು ಕಡ್ಡಾಯ.

ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಪಿಸಿಪಿಎನ್‌ಡಿಟಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಿದ್ದು, ಸ್ಕ್ಯಾನಿಂಗ್‌ಗೆ ಒಳಪಡುವ ಮಹಿಳೆಯರ ವಿಳಾಸ ದೃಢೀಕರಣವನ್ನು ನೀಡುವುದು ಕಡ್ಡಾಯವಾಗಿದೆ. ರೋಗಿಗಳ ವೈದ್ಯಕೀಯ ಇತಿಹಾಸವನ್ನು ಒಳಗೊಂಡ ಎಫ್ ಅರ್ಜಿ ನಮೂನೆಯಲ್ಲಿ ಇದನ್ನು ಸಲ್ಲಿಸಬೇಕಾಗುತ್ತದೆ.

ಇದುವರೆಗೆ ಸೂಕ್ತ ಸಾಫ್ಟ್‌ವೇರ್ ಕೊರತೆಯಿಂದಾಗಿ ಸ್ಕ್ಯಾನಿಂಗ್ ಸೆಂಟರ್‌ಗಳು ಎಫ್ ನಮೂನೆಯ ಪ್ರತಿಯನ್ನು ಪ್ರತಿ ತಿಂಗಳು ಆರೋಗ್ಯ ಇಲಾಖೆಗೆ ಸಲ್ಲಿಸುತ್ತಿದ್ದವು. ಆದರೆ ಅಸಮರ್ಪಕ ಹಾಗೂ ಅಪೂರ್ಣ ಅರ್ಜಿ ನಮೂನೆಗಳು ದೊಡ್ಡ ಸವಾಲಾಗಿದ್ದವು. 16ರಿಂದ 20ನೇ ವಾರದಲ್ಲಿ ಮಗುವಿನ ಲಿಂಗ ನಿರ್ಧರಿಸಲು ಸಾಧ್ಯವಿದ್ದು, ವೈದ್ಯಕೀಯ ಗರ್ಭಪಾತದ ಮೇಲೆ ಕಣ್ಣಿಡುವ ಸಲುವಾಗಿಯೇ ಬಾಲಿಕಾ ಎಂಬ ಸಾಫ್ಟ್‌ವೇರ್ ಬಳಕೆಗೆ ಬಂದಿದೆ. ಈ ಸಾಫ್ಟ್‌ವೇರ್ ಈಗಾಗಲೇ ರಾಜಸ್ಥಾನ ಹಾಗೂ ಬಿಹಾರದಲ್ಲಿ ಬಳಕೆಯಲ್ಲಿವೆ.

ರಾಜ್ಯದಲ್ಲಿ 4616 ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು, 2617 ಕೇಂದ್ರಗಳು ಈ ಸಾಫ್ಟ್‌ವೇರ್ ಪಡೆಯಲು ಪಾಸ್‌ವರ್ಡ್ ಹೊಂದಿವೆ. ಇಂಥ ಕೇಂದ್ರಗಳು ಈ ಸಾಫ್ಟ್‌ವೇರ್ ಸಹಾಯದಿಂದ ಆನ್‌ಲೈನ್ ಮೂಲಕವೇ ಎಫ್ ಅರ್ಜಿ ನಮೂನೆ ಭರ್ತಿ ಮಾಡಬೇಕಾಗುತ್ತದೆ.

ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ಅಥವಾ ಕಾಯ್ದೆಯ ಉಲ್ಲಂಘನೆ ಪ್ರಕರಣಗಳ ವಿಚಾರಣೆ ನಡೆಸುವಾಗ, ಎಫ್ ಅರ್ಜಿ ನಮೂನೆ ಸಾಂದರ್ಭಿಕ ಪುರಾವೆಯಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪಿಸಿಪಿಎನ್‌ಡಿಟಿ ಕೋಶದ ಉಪ ನಿರ್ದೇಶಕ ರಾಮಚಂದ್ರ ಬಾಯರಿ ಸ್ಪಷ್ಟಪಡಿಸಿದ್ದಾರೆ.

ವಿಳಾಸ ಪ್ರಮಾಣ ಪತ್ರ ಹಾಗೂ ಫೋಟೊ ಐಡಿ ಕಾರ್ಡ್‌ಗಳನ್ನು ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸಲ್ಲಿಸುವುದು ಇನ್ನು ಕಡ್ಡಾಯವಾಗಲಿದೆ. 2011ರ ಜನಗಣತಿಯಂತೆ ರಾಜ್ಯದಲ್ಲಿ 6 ವರ್ಷದೊಳಗಿನ ಮಕ್ಕಳ ಲಿಂಗಾನುಪಾತ 1000ಕ್ಕೆ 948 ಇರುವ ಹಿನ್ನೆಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News