ಭಾರತದಲ್ಲಿ 5 ವರ್ಷಗಳ ಕಾಲ ವಿಮಾನ ಪ್ರಯಾಣ ನಿಷೇಧಕ್ಕೊಳಗಾದ ಮೊಟ್ಟಮೊದಲ ವ್ಯಕ್ತಿ

Update: 2018-05-20 06:57 GMT

ಹೊಸದಿಲ್ಲಿ, ಮೇ 20: ಕಳೆದ ವರ್ಷ ಜೆಟ್ ಏರ್ ವೇಸ್ ವಿಮಾನದಲ್ಲಿ ಹೈಜಾಕ್ ಭೀತಿ ಹುಟ್ಟಿಸಿದ್ದ ಮುಂಬೈನ ಚಿನ್ನದ ವ್ಯಾಪಾರಿ ಬ್ರಿಜು ಕಿಶೋಲ್ ಸಲ್ಲಾ, ದೇಶದಲ್ಲಿ ನೋ ಫ್ಲೈ ಲಿಸ್ಟ್ (ಹಾರಾಟ ನಿಷೇಧಿತ ವ್ಯಕ್ತಿಗಳ ಪಟ್ಟಿ)ಗೆ ಸೇರಿದ ಮೊಟ್ಟಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಐದು ವರ್ಷಗಳ ಕಾಲ ಇವರನ್ನು ಜೆಟ್ ಏರ್ ವೇಸ್ ವಿಮಾನ ಏರದಂತೆ ನಿಷೇಧ ವಿಧಿಸಲಾಗಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಈ ಬಗ್ಗೆ ಹೇಳಿಕೆ ನೀಡಿ, ಭಾರತೀಯ ವೈಮಾನಿಕ ಸಂಸ್ಥೆಯೊಂದು ಹಾರಾಟ ನಿಷೇಧಿತರ ಪಟ್ಟಿಗೆ ಹೆಸರು ಸೇರಿಸುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ. ಸೂಕ್ತ ವಿಧಿವಿಧಾನಗಳನ್ನು ಅನುಸರಿಸಿದ ಬಳಿಕ ಸಲ್ಲಾ ಅವರನ್ನು ಐದು ವರ್ಷಗಳ ಕಾಲ ನಿಷೇಧಿಸಿರುವ ಬಗ್ಗೆ ಜೆಟ್ ಏರ್ ವೇಸ್ ಮಾಹಿತಿ ನೀಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಭದ್ರತಾ ಉಲ್ಲಂಘನೆಗಾಗಿ 2017ರಿಂದ ಪೂರ್ವಾನ್ವಯವಾಗುವಂತೆ ಈ ನಿಷೇಧ ವಿಧಿಸಲಾಗಿದೆ.

ಈ ವ್ಯಕ್ತಿಯನ್ನು ಹಾರಾಟ ನಿಷೇಧಿತರ ಪಟ್ಟಿಗೆ ಸೇರಿಸಲು ಇತರ ವಿಮಾನಯಾನ ಕಂಪನಿಗಳಿಗೆ ಮಾಹಿತಿ ನೀಡಿ ಮನವಿ ಮಾಡಿಕೊಳ್ಳುವುದು ಜೆಟ್ ಏರ್ ವೇಸ್ನ ಹೊಣೆ. ಅಂತಹ ಪ್ರಯಾಣಿಕರ ಡಾಟಾಬೇಸ್ ನಿರ್ವಹಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ,

ಶೌಚಾಲಯದಲ್ಲಿ ಬಾಂಬ್ ಮತ್ತು ಅಪಹರಣದ ಬಗ್ಗೆ ಟಿಪ್ಪಣಿ ಇರಿಸಿದ ಆರೋಪದಲ್ಲಿ 2017ರ ಅಕ್ಟೋಬರ್ 30ರಂದು ಸಲ್ಲಾರನ್ನು ಬಂಧಿಸಲಾಗಿತ್ತು. ಘಟನೆ ಹಿನ್ನೆಲೆಯಲ್ಲಿ ವಿಮಾನ ಅಹ್ಮದಾಬಾದ್‍ನಲ್ಲಿ ತುರ್ತಾಗಿ ಇಳಿಯಬೇಕಾಯಿತು. ಮುಂಬೈನಿಂದ ದಿಲ್ಲಿಗೆ ತೆರಳುತ್ತಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಈ ಪ್ರಹಸನ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News