ಚುನಾವಣಾ ಸೋಲಿನಿಂದ ಮೇಲೆದ್ದು ಮತ್ತೊಮ್ಮೆ ಹೋರಾಡಿ ಗೆದ್ದ ಕಾಂಗ್ರೆಸ್

Update: 2018-05-20 07:39 GMT

ಹೊಸದಿಲ್ಲಿ, ಮೇ 20: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 100ಕ್ಕಿಂತ ಕಡಿಮೆ ಸ್ಥಾನಗಳು ಬಂದರೆ ಜೆಡಿಎಸ್‍ಗೆ ಬೇಷರತ್ ಬೆಂಬಲ ನೀಡುವಲ್ಲಿಂದ ಹಿಡಿದು, ಶಾಸಕರ ಹೋಟೆಲ್‍ಗಳನ್ನು ಬದಲಿಸುವವರೆಗೆ, ಆಮಿಷವೊಡ್ಡುವ ದೂರವಾಣಿ ಕರೆಗಳನ್ನು ದಾಖಲಿಸಿಕೊಳ್ಳುವ ಮೊಬೈಲ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡುವಲ್ಲಿಂದ ಹಿಡಿದು, ಪಕ್ಷದ ಕಾನೂನು ತಜ್ಞ ಅಭಿಷೇಕ್ ಸಿಂಘ್ವಿಯವರನ್ನು ಚಂಡೀಗಢದಿಂದ ಕರೆತರಲು ವಿಶೇಷ ವಿಮಾನ ಕಳುಹಿಸುವವರೆಗೆ, ಸೋಲಿನಿಂದ ಮೇಲೆದ್ದು, ಸಂಘಟಿಸಿದ ಪ್ರತಿ ಹೋರಾಟ  ಕಾಂಗ್ರೆಸ್ ಗೆ ಕೊನೆಗೂ ಫಲ ನೀಡಿದೆ.

ಪಕ್ಷ ಈ ಬಗ್ಗೆ ಮೊದಲೇ ಚಿಂತನೆ ನಡೆಸಿ, ಸಾಕಷ್ಟು ಕಾರ್ಯಯೋಜನೆಗಳನ್ನು ರೂಪಿಸಿತ್ತು ಎಂದು ಪಕ್ಷದ ಮೂಲಗಳು ಹೇಳಿವೆ. ಪಕ್ಷಾಧ್ಯಕ್ಷ ರಾಹುಲ್ ಗಾಂಧಿಯವರು ಪಕ್ಷದ ನಾಯಕರಾದ ಅಹ್ಮದ್ ಪಟೇಲ್, ಗುಲಾಂ ನಬಿ ಆಝಾದ್, ಅಶೋಕ್ ಗೆಹ್ಲೋಟ್ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಮೇ 14ರಂದು ಮುಂಜಾನೆ ಭೇಟಿ ಮಾಡಿ, ಕಾರ್ಯತಂತ್ರ ಹೆಣೆದಿದ್ದರು. ಅರ್ಧಕ್ಕಿಂತ ಕಡಿಮೆ ಸ್ಥಾನಗಳು ಬಂದಲ್ಲಿ ಜೆಡಿಎಸ್‍ಗೆ ಬೇಷರತ್ ಬೆಂಬಲ ಘೋಷಿಸುವ ಕಾರ್ಯತಂತ್ರ ಕೂಡಾ ಅಲ್ಲೇ ಸಿದ್ಧವಾಗಿತ್ತು ಎನ್ನಲಾಗಿದೆ.

ಈ ಸಂದೇಶವನ್ನೂ ಜೆಡಿಎಸ್‍ಗೆ ರವಾನಿಸಲಾಗಿತ್ತು. ಎಲ್ಲ ಐದು ಮಂದಿ ಎಐಸಿಸಿ ಕಾರ್ಯದರ್ಶಿಗಳಾದ ಮಾಣಿಕಾ ಠ್ಯಾಗೋರ್, ಪಿ.ಸಿ.ವಿಷ್ಣುನಾಥ್, ಮಧು ಯಕ್ಷಿ ಗೌಡ್, ಸೇಕ್ ಸೈಲಜ್‍ನಾಥ್ ಮತ್ತು ಯಶೋಮತಿ ಠ್ಯಾಗೋರ್ ಅವರನ್ನು ನಿಯೋಜಿತ ಎಣಿಕೆ ಕೇಂದ್ರಗಳಲ್ಲಿ ಹಾಜರಿರುವಂತೆ ಸೂಚಿಸಲಾಗಿತ್ತು. ಆಝಾದ್, ಗೆಹ್ಲೋಟ್ ಮತ್ತು ವೇಣುಗೋಪಾಲ್ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದರು. ಬಿಜೆಪಿಗೆ ಸ್ಥಾನಗಳ ಕೊರತೆಯಾಗುತ್ತದೆ ಎನ್ನುವುದು ಖಚಿತವಾದ ತಕ್ಷಣ, ಎಲ್ಲ ಶಾಸಕರನ್ನು ಸಂಪರ್ಕಿಸಿ ಬೆಂಗಳೂರಿಗೆ ಕರೆತರುವಂತೆ ಸೂಚಿಸಲಾಗಿತ್ತು. ಫಲಿತಾಂಶದ ಮರುದಿನ ಮುಂಜಾನೆಯೇ ದಿಲ್ಲಿ ಹಾಗೂ ಬೆಂಗಳೂರಿನಲ್ಲಿ ಪ್ರಹಸನ ಆರಂಭವಾಗಿತ್ತು.

ಕಾಂಗ್ರೆಸ್- ಜೆಡಿಎಸ್ ಕೂಟ 15ರಂದೇ ಸರ್ಕಾರ ರಚನೆಗೆ ಆಹ್ವಾನಿಸುವಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರಿತ್ತು.  ಯಡಿಯೂರಪ್ಪ ತಮ್ಮ ಹಕ್ಕು ಪ್ರತಿಪಾದಿಸುವ ಅಧಿಕೃತ ಪತ್ರವನ್ನು ರಾಜ್ಯಪಾಲರಿಗೆ ನೀಡುತ್ತಾರೆ ಎನ್ನುವುದು ಖಚಿತವಾದ ತಕ್ಷಣ, ದಿಲ್ಲಿಯಲ್ಲಿ ಸಭೆ ಸೇರಿ ಕಾನೂನಾತ್ಮಕ ಹೋರಾಟಕ್ಕೆ ಧುಮುಕಿದರು. ಅಭಿಷೇಕ್ ಸಿಂಘ್ವಿ ಇದಕ್ಕಾಗಿ ಚಂಡೀಗಢದಿಂದ ಧಾವಿಸಿದರು. ಅಹ್ಮದ್ ಪಟೇಲ್ ಹಾಗೂ ರಣದೀಪ್ ಸುರ್ಜೇವಾಲ ತಕ್ಷಣ ಅವರನ್ನು ಕರೆಸಿಕೊಂಡರು. ದೂರವಾಣಿ ಚರ್ಚೆಯಲ್ಲೇ ಕರಡು ಸಿದ್ಧಪಡಿಸಲಾಯಿತು. ಕಾಂಗ್ರೆಸ್‍ನ ರಾಜ್ಯ ಮುಖಂಡ ಎಂ,ಬಿ.ಪಾಟೀಲ್ ಅವರಿಗೂ ಕರೆ ಮಾಡಿ ಚರ್ಚಿಸಲಾಯಿತು.

ವಿಮಾನ ತಪ್ಪಿದ್ದರಿಂದ ಸಾಂಘ್ವಿ ರೈಲಿನಲ್ಲಿ ಬಂದರೆ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ವಿಶೇಷ ವಿಮಾನದಲ್ಲಿ ಕರೆತರಲಾಯಿತು. ಹೀಗೆ ಎಲ್ಲ ಕಾಂಗ್ರೆಸ್ ಮುಖಂಡರು ಸಂಘಟಿತ ಹೋರಾಟ ನಡೆಸಿ ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News