ಮಾಜಿ ಶಾಸಕ ಡಾ.ವೈ.ಸಿ ವಿಶ್ವನಾಥ್ ನಿಧನ

Update: 2018-05-20 11:51 GMT

ಬೆಂಗಳೂರು, ಮೇ 20: ಅನಾರೋಗ್ಯದಿಂದ ಬಳಲುತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ಕ್ಷೇತ್ರದ ಮಾಜಿ ಶಾಸಕ ಡಾ.ವೈ.ಸಿ.ವಿಶ್ವನಾಥ್ (68) ಅವರು ಚಿಕಿತ್ಸೆ ಫಲಕಾರಿಯಾಗದೆ ರವಿವಾರ ನಿಧನರಾಗಿದ್ದಾರೆ.

ಮೃತ ವಿಶ್ವನಾಥ್ ಅವರ ಪತ್ನಿ ಸುವರ್ಣಮ್ಮ ಅವರು ಕಳೆದ ಆರು ತಿಂಗಳ ಹಿಂದೆ ನಿಧನರಾಗಿದ್ದರು. ಅವರು ಪ್ರದೀಪ್, ಪವನ್ ಹಾಗೂ ದಿವ್ಯಾ ಎಂಬ ಮೂವರು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಡೂರಿನ ಯಳ್ಳಬಳಸೆಯ ವೈ.ಎನ್.ಚಂದ್ರಶೇಖರಯ್ಯ ಎಂಬವರ ಪುತ್ರನಾದ ವಿಶ್ವನಾಥ್, ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದರು. ಸರಕಾರಿ ವೈದ್ಯರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ಕಡೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿ ಖ್ಯಾತಿ ಗಳಿಸಿದ್ದರು.

1999ರಲ್ಲಿ ಸ್ವಯಂ ನಿವೃತ್ತಿ ಪಡೆದು ಪ್ರಥಮ ಬಾರಿಗೆ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡರು. ನಂತರ 2008ರಲ್ಲಿ ಮತ್ತೆ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದರು. ಅನಂತರ 2010ರಲ್ಲಿ ಕಡೂರು ಶಾಸಕರಾಗಿದ್ದ ಕೆ.ಎಂ.ಕೃಷ್ಣಮೂರ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಾಗ ವಿಶ್ವನಾಥ್ ಸ್ಪರ್ಧಿಸಿ ಜಯಗಳಿಸಿದ್ದರು. 3 ವರ್ಷ ಕಾಲ ಕಡೂರಿನ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು.

ಮಾಜಿ ಶಾಸಕರಾದ ನಂತರ ತಮ್ಮದೇ ಸಹಭಾಗಿತ್ವದ ಮಾರುತಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವನಾಥ್, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಳ್ಳಿಪ್ರಕಾಶ್ ಪರವಾಗಿ ಸಕ್ರಿಯ ಪ್ರಚಾರ ನಡೆಸಿದ್ದರು. ಆದರೆ ವಿಧಾನಸಭಾ ಚುನಾವಣಾ ಫಲಿತಾಂಶದ ಮಾರನೆ ದಿನ ವಿಶ್ವನಾಥ್ ಅಸ್ವಸ್ಥರಾದರು. ಅವರಿಗೆ ಚಿಕಿತ್ಸೆ ನೀಡಿದ ಅವರ ಸಹೋದ್ಯೋಗಿ ಡಾ.ಉಮೇಶ್ ರಾವ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ವಿಶ್ವನಾಥ್ ರವಿವಾರ ಕೊನೆಯುಸಿರೆಳೆದಿದ್ದಾರೆಂದು ವೈದ್ಯಕೀಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News