ಕುಲ್ಲೇಟಿರ ಕಪ್ ಹಾಕಿ ಉತ್ಸವ: ‘ಚೇಂದಂಡ’ ತಂಡ ಚಾಂಪಿಯನ್

Update: 2018-05-20 12:07 GMT

ಮಡಿಕೇರಿ,ಮೇ.20: ಕೊಡವ ಕುಟುಂಬಗಳ ನಡುವೆ ಸಾಮರಸ್ಯ ಮತ್ತು ಸಹಬಾಳ್ವೆ ಮೂಡಿಸುವ 22 ನೇ ವರ್ಷದ ಕುಲ್ಲೇಟಿರ ಕಪ್ ಹಾಕಿ ಪಂದ್ಯಾವಳಿಯ ಪ್ರತಿಷ್ಠಿತ ಪ್ರಶಸ್ತಿಯನ್ನು ಸತತ ಎರಡನೇ ಬಾರಿಗೆ ‘ಚೇಂದಂಡ’ ತಂಡ ತನ್ನ ಮುಡಿಗೇರಿಸಿಕೊಂಡಿದ್ದು, ಅಂಜಪರವಂಡ ತಂಡ ರನ್ನರ್ಸ್ ಅಪ್ ಸ್ಥಾನಕ್ಕೆ ಭಾಜನವಾಯಿತು.

ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದದಲ್ಲಿ ನಡೆದ ಕುಲ್ಲೇಟಿರ ಕಪ್ ಹಾಕಿ ಉತ್ಸವದ ಅಂತಿಮ ಪಂದ್ಯದಲ್ಲಿ ಚೇಂದಂಡ ತಂಡ 2-0 ಗೋಲುಗಳ ಅಂತರದಿಂದ ಅಂಜಪರವಂಡ ತಂಡವನ್ನು ಮಣಿಸಿತು.

ಭಾರತದ ಹಾಕಿ ತಂಡದ ಮಾಜಿ ನಾಯಕ, ಮಾಜಿ ಒಲಂಪಿಯನ್ ಮನೆಯಪಂಡ ಸೋಮಯ್ಯ, ಕೊಡವ ಹಾಕಿ ಅಕಾಡೆಮಿ ಹಿರಿಯ ಉಪಾಧ್ಯಕ್ಷ ಕಲಿಯಂಡ ನಾಣಯ್ಯ, ಕುಲ್ಲೇಟಿರ ಕುಟುಂಬದ ಹಾಕಿ ನಮ್ಮೆಯ ಅಧ್ಯಕ್ಷರಾದ ಕುಲ್ಲೇಟಿರ ಶಂಭು ಮಂದಪ್ಪ ಸೇರಿದಂತೆ ಅತಿಥಿ ಗಣ್ಯರು ಸಾಂಪ್ರದಾಯಿಕವಾಗಿ ಬೆಳ್ಳಿ ಚೆಂಡನ್ನು ಬೆಳ್ಳಿಯ ಸ್ಟಿಕ್‍ನಿಂದ ಹೊಡೆಯುವ ಮೂಲಕ ರೋಚಕ ಪಂದ್ಯಕ್ಕೆ ಚಾಲನೆ ನೀಡಿದರು.

ಮಾಜಿ ಒಲಂಪಿಯನ್ ಡಾ. ಅಂಜಪರವಂಡ ಸುಬ್ಬಯ್ಯ ಅವರು ಗೋಲಿಯಾಗಿದ್ದ ಅಂಜಪರವಂಡ ತಂಡದ ಗೋಲಿನಾವರಣಕ್ಕೆ ಪಂದ್ಯದ ಆರಂಭದಲ್ಲಿಯೇ ಲಗ್ಗೆ ಇಟ್ಟ ಚೇಂದಂಡ ತಂಡ 10ನೇ ನಿಮಿಷ ಬೋಪಣ್ಣ ಅವರು ಸಿಡಿಸಿದ ಮಿಂಚಿನ ಗೋಲು ದಿಗ್ಭ್ರಮೆಯನ್ನು ಮೂಡಿಸಿತು.

ಒಲಂಪಿಯನ್ ನಿಖಿನ್ ತಿಮ್ಮಯ್ಯ ಅವರನ್ನು ಒಳಗೊಂಡ ಚೇಂದಂಡ ತಂಡ ಆಕರ್ಷಕ ಪಾಸ್ ಮತ್ತು ವೇಗದ ಆಟದ ಮೂಲಕ ಗಮನ ಸೆಳೆಯಿತು. ಅಂಜಪರವಂಡ ತಂಡ ಒಂದು ಪೆನಾಲ್ಟ್ ಕಾರ್ನರ್ ಅವಕಾಶವನ್ನು ಪಡೆದುಕೊಂಡಿತಾದರು ಅದನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗದೆ ಮೊದಲ ಕ್ವಾರ್ಟರ್ ನಲ್ಲಿ ಚೇಂದಂಡ 1-0 ಗೋಲಿನ ಮುನ್ನಡೆಯನ್ನು ಗಳಿಸಿತು.

ದ್ವಿತೀಯ ಕ್ವಾರ್ಟರ್ ನಲ್ಲಿ ಇತ್ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಮೂರನೇ ಕ್ವಾರ್ಟರ್ ನ 44 ನೇ ನಿಮಿಷ ಒಲಂಪಿಯನ್ ಚೇಂದಂಡ ನಿಖಿನ್ ತಿಮ್ಯಯ್ಯ ಅವರು ಅಂಜಪರವಂಡ ತಂಡದ ಗೋಲಿ ಮಾಜಿ ಒಲಂಪಿಯನ್ ಸುಬ್ಬಯ್ಯ ಅವರ ಕಣ್ತಪ್ಪಿಸಿ ಸಿಡಿಸಿದ ಗೋಲು ಚೇಂದಂಡ ತಂಡಕ್ಕೆ 2-0 ಗೋಲಿನ ಸ್ಪಷ್ಟ ಮುನ್ನಡೆಯನ್ನು ದೊರಕಿಸಿಕೊಟ್ಟಿತು. ನಾಲ್ಕನೇ ಕ್ವಾರ್ಟರ್ ನಲ್ಲಿ ಅಂಜಪರವಂಡ ತಂಡ ಎರಡು ಪೆನಾಲ್ಟಿ ಕಾರ್ನರ್ ಗಳನ್ನು ಪಡೆದುಕೊಂಡಿತಾದರೂ ಅದನ್ನು ಗೋಲಾಗಿಸುವಲ್ಲಿ ವಿಫಲವಾಗುವುದರೊಂದಿಗೆ ಪರಾಭವಗೊಂಡಿತು.

ಬಹುಮಾನ ವಿತರಣೆ: ಪ್ರೇಕ್ಷಕರ ಹರ್ಷೋದ್ಘಾರಗಳ ನಡುವೆ ಅತಿಥಿ ಗಣ್ಯರು ಪಂದ್ಯಾವಳಿ ವಿಜೇತ ಚೇಂದಂಡ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ, ಕೊಡವ ವಿವಾಹದಲ್ಲಿ ವಧುವಿಗೆ ನೀಡುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಬಹುಮಾನವಾಗಿ ನೀಡಿದರೆ, ರನ್ನರ್ಸ್ ಅಪ್ ಅಂಜಪರವಂಡ ತಂಡಕ್ಕೆ ವರನಿಗೆ ವಿವಾಹದ ಸಂದರ್ಭ ನೀಡುವ ವಡಿಕತ್ತಿ, ಪೀಚೆಕತ್ತಿ ಸೇರಿದಂತೆ ವಿವಿಧ ಆಭರಣಗಳನ್ನು ಬಹುಮಾನವಾಗಿ ನೀಡಿದ್ದು ವಿಶೇಷ. 

ಚೇಂದಂಡ ಮೋಕ್ಷಿತ್ ಪಂದ್ಯಾವಳಿ ಪುರುಷೋತ್ತಮ
ಕುಲ್ಲೇಟಿರ ಕಪ್ ಹಾಕಿ ಪಂದ್ಯಾವಳಿಯ ಪ್ರತಿಷ್ಠಿತ ಪಂದ್ಯಾವಳಿ ಪುರುಷೋತ್ತಮ ಪ್ರಶಸ್ತಿಗೆ ಪಂದ್ಯಾವಳಿ ವಿಜೇತ ತಂಡದ ಚೇಂದಂಡ ಮೋಕ್ಷಿತ್ ಭಾಜನರಾಗಿದ್ದು, ಇವರಿಗೆ ಕೊಡವ ಸಂಪ್ರದಾಯದಂತೆ ಕುಪ್ಯಚಾಲೆ, ಪೇಟ, ಪೀಚೆಕತ್ತಿಯನ್ನು ಬಹುಮಾನವಾಗಿ ನೀಡಿ ಗೌರವಿಸಲಾಯಿತು.
ಅಂತಿಮ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಚೇಂದಂಡ ಬೋಪಣ್ಣ, ಅತ್ಯುತ್ತಮ ಮುನ್ನಡೆ ಆಟಗಾರರಾಗಿ ಅಂಜಪರವಂಡ ಜತಿನ್, ಅತ್ಯುತ್ತಮ ರಕ್ಷಣಾ ಆಟಗಾರರಾಗಿ ಪರದಂಡ ಪ್ರಸಾದ್, ಅತ್ಯುತ್ತಮ ಹಾಫ್ ಬ್ಯಾಕ್ ಆಗಿ ಚೆಪ್ಪುಡಿರ ಚೇತನ್, ಫೇರ್ ಪ್ಲೇ ತಂಡವಾಗಿ ಚೇಂದಿರ ತಂಡ, ಅಪ್ ಕಮ್ಮಿಂಗ್ ತಂಡವಾಗಿ ಅಪ್ಪಚ್ಚೀರ ತಂಡಕ್ಕೆ ವಿಶೇಷ ಬಹುಮಾನಗಳನ್ನು ವಿತರಿಸಲಾಯಿತು.

ಅತ್ಯುತ್ತಮ ಹಿರಿಯ ಆಟಗಾರರಾಗಿ ಕಂಬೀರಂಡ ನಿಲನ್, ಅಪ್ ಕಮ್ಮಿಂಗ್ ಆಟಗಾರರಾಗಿ ಕಾಂಡಂಡ ಕುಶಾಲಪ್ಪ, ಅತ್ಯುತ್ತಮ ಗೋಲ್ ಕೀಪರ್ ಆಗಿ ಬೊಳ್ಯಪಂಡ ದಿಲನ್, ಸ್ಪಿರಿಟೆಡ್ ತಂಡವಾಗಿ ಜಬ್ಬಂಡ ತಂಡಕ್ಕೆ, ಅತ್ಯುತ್ತಮ ರಿವರ್ಸ್ ಫ್ಲಿಕ್ ಗೋಲು ಗಳಿಸಿದ ಚೇಂದಂಡ ತಿಮ್ಮಯ್ಯ, ಚೆಪ್ಪುಡಿರ ಸೋಮಣ್ಣ, ಅಂಜಪರವಂಡ ದೀಪಕ್ ಸುಬ್ಬಯ್ಯ ಅವರಿಗೆ ವಿಶೇಷ ಬಹುಮಾನವನ್ನು ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News