ಭಾರತೀಯ ಸೇನೆ ತೊರೆಯಲು ನಿರ್ಧರಿಸಿದ ನಾಲ್ಕು ತಿಂಗಳು ಪಾಕ್ ಬಂಧನದಲ್ಲಿದ್ದ ಸೈನಿಕ

Update: 2018-05-21 03:58 GMT

ಪುಣೆ, ಮೇ 21: ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಗಡಿಯೊಳಕ್ಕೆ ನುಸುಳಿ ಬಂಧನಕ್ಕೊಳಗಾಗಿ 18 ತಿಂಗಳು ಕಳೆದ ಬಳಿಕ ಬಿಡುಗಡೆಗೊಂಡಿದ್ದ ಭಾರತೀಯ ಸೈನಿಕ ಚಂದು ಚವಾಣ್ ಭಾರತೀಯ ಸೇನೆಯನ್ನು ತೊರೆಯುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.

ಖಡ್ಕಿ ಮಿಲಿಟರಿ ಆಸ್ಪತ್ರೆಯ ಮನೋರೋಗ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚವಾಣ್, ಅವಧಿಪೂರ್ವವಾಗಿಯೇ ತಮ್ಮನ್ನು ಸೇವೆಯಿಂದ ಬಿಡುಗಡೆ ಮಾಡಿಕೊಡಬೇಕು ಎಂದು ಕೋರಿ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಭಾರತೀಯ ಪಡೆಯು ವಾಸ್ತವ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನ ಉಗ್ರರ ತರಬೇತಿ ತಾಣಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ ದಿನ ಅಂದರೆ 2016ರ ಸೆಪ್ಟೆಂಬರ್ 29ರಂದು ಚವಾಣ್ (24) ಪಾಕಿಸ್ತಾನಕ್ಕೆ ಲಗ್ಗೆ ಇಟ್ಟಿದ್ದರು. ಇದಕ್ಕೆ ಹನ್ನೊಂದು ದಿನ ಮೊದಲು ಉರಿಯಲ್ಲಿ ಸೇನಾ ಶಿಬಿರದ ಮೇಲೆ ಪಾಕಿಸ್ತಾನಿ ಶಂಕಿತ ಉಗ್ರರು ದಾಳಿ ನಡೆಸಿ 19 ಸೈನಿಕರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿತ್ತು. ಈ ಸಂದರ್ಭ ಬಂಧನಕ್ಕೊಳಗಾಗಿದ್ದ ಚವಾಣ್ ನಾಲ್ಕು ತಿಂಗಳ ಬಳಿಕ ಭಾರತಕ್ಕೆ ಬಂದಿದ್ದರು.

ಭಾರತಕ್ಕೆ ಮರಳಿದ ಬಳಿಕ, ಸೇನಾ ಶಿಬಿರದಿಂದ ಮೇಲಧಿಕಾರಿಗಳಿಗೆ ಮಾಹಿತಿ ನೀಡದೇ ಶಸ್ತ್ರಾಸ್ತ್ರಗಳೊಂದಿಗೆ ತೆರಳಿದ ಕಾರಣಕ್ಕಾಗಿ ನ್ಯಾಯಾಲಯದ ವಿಚಾರಣೆಯನ್ನು ಎದುರಿಸಿ ಶಿಕ್ಷೆಗೂ ಚವಾಣ್ ಗುರಿಯಾಗಿದ್ದರು. ಬಳಿಕ ಅವರನ್ನು ಅಹ್ಮದ್‌ ನಗರದಲ್ಲಿರುವ ಶಸ್ತ್ರಾಗಾರಕ್ಕೆ ಕಳುಹಿಸಲಾಗಿತ್ತು.

ಸುಮಾರು ಮೂರು ವಾರಗಳ ಹಿಂದೆ, ಚವಾಣ್ ಅವರನ್ನು ಈ ಘಟಕದ ಮಿಲಿಟರಿ ಅಸ್ಪತ್ರೆಗೆ ಕಳುಹಿಸಲಾಗಿದ್ದು, ಅವರ ವರ್ತನೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ನಿಗಾ ಇಡುವುದು ಅಗತ್ಯ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿತ್ತು. ಇದೀಗ ಆಸ್ಪತ್ರೆಯಿಂದಲೇ ತಮ್ಮನ್ನು ಸೇವೆಯಿಂದ ಮುಕ್ತಗೊಳಿಸುವಂತೆ ಕೋರಿ ಅವರು ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News