ವಿಜಯಪುರದಲ್ಲಿ ಪತ್ತೆಯಾಗಿರುವುದು ವಿವಿಪ್ಯಾಟ್ ಅಲ್ಲ, ಅದರ ಖಾಲಿ ಪೆಟ್ಟಿಗೆ!

Update: 2018-05-21 04:15 GMT
ಸಾಂದರ್ಭಿಕ ಚಿತ್ರ 

ಬೆಂಗಳೂರು, ಮೇ 21: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಮನಗೂಳಿ ಗ್ರಾಮದಲ್ಲಿ ದೊರೆತಿರುವುದು ವಿವಿಪ್ಯಾಟ್ ಅಲ್ಲ, ಬದಲಿಗೆ ವಿವಿಪ್ಯಾಟ್‌ನ ಖಾಲಿ ಪೆಟ್ಟಿಗೆಗಳು ಮಾತ್ರ ಎಂದು ವಿಜಯಪುರ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಮನಗೂಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಮೀಪ ವಿವಿಪ್ಯಾಟ್ ಪತ್ತೆಯಾಗಿರುವುದಾಗಿ ಖಾಸಗಿ ಸುದ್ದಿ ವಾಹಿನಿಯೊಂದು ರವಿವಾರ ಸಂಜೆ ಸುದ್ದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ, ರಸ್ತೆ ಕಾಮಗಾರಿಗಾಗಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಶೆಡ್ ಒಂದರಲ್ಲಿ ಎಂಟು ವಿವಿಪ್ಯಾಟ್‌ನ ಖಾಲಿ ಪೆಟ್ಟಿಗೆಗಳು ಪತ್ತೆಯಾಗಿವೆ. ಅಲ್ಲದೆ ಸ್ಥಳದಲ್ಲಿ ಯಾವುದೇ ವಿವಿಪ್ಯಾಟ್ ಯಂತ್ರಗಳು ಇರಲಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 ಲಭ್ಯವಾಗಿರುವ ವಿವಿಪ್ಯಾಟ್‌ನ ಖಾಲಿ ಪೆಟ್ಟಿಗೆಗಳ ಮೇಲೆ ಯಾವುದೇ ಯೂನಿಕ್ ಐಡಿ ನಂಬರ್ ಇಲ್ಲ. ಅಲ್ಲದೆ ಈ ಖಾಲಿ ಪೆಟ್ಟಿಗೆಗಳು ವಿಜಯಪುರ ಜಿಲ್ಲೆಗೆ ಸಂಬಂಧಿಸಿದ್ದಲ್ಲ. ಜಿಲ್ಲೆಗೆ ಹಂಚಿಕೆಯಾಗಿದ್ದ 2,744 ವಿವಿಪ್ಯಾಟ್‌ಗಳು ಸುರಕ್ಷಿತವಾಗಿದ್ದು, ಸ್ಟ್ರಾಂಗ್ ರೂಂನಲ್ಲಿ ಭದ್ರಪಡಿಸಿಟ್ಟುಕೊಳ್ಳಲಾಗಿದೆ. ದೊರೆತಿರುವ ವಿವಿಪ್ಯಾಟ್‌ನ ಖಾಲಿ ಪೆಟ್ಟಿಗೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವಂತೆ ಬಸವನ ಬಾಗೇವಾಡಿಯ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News