ಶಿರಾ: ಭೀಕರ ರಸ್ತೆ ಅಪಘಾತ; 8 ಮಂದಿ ಮೃತ್ಯು, 16 ಮಂದಿಗೆ ಗಾಯ

Update: 2018-05-21 05:20 GMT

ತುಮಕೂರು, ಮೇ 21: ದೇವಳ ಸಂದರ್ಶಿಸಿ ಹಿಂದಿರುಗುತ್ತಿದ್ದ ಖಾಸಗಿ ಬಸ್ಸೊಂದು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಬಸ್ ಪ್ರಯಾಣಿಕರು ಮೃತಪಟ್ಟು, 16 ಮಂದಿ ಗಾಯಗೊಂಡ ಘಟನೆ ಶಿರಾ ನಗರದ ಸಮೀಪ ಕಳೆದ ರಾತ್ರಿ ನಡೆದಿದೆ. ಮೃತರನ್ನು ಶಿರಾ ತಾಲೂಕಿನ ಪಟ್ಟನಾಯಕನ ಹಳ್ಳಿಯ ಸವಿತಾ ಸೋಮಶೇಖರ್(21), ಅನುಷಾ(7), ರತ್ನಮ್ಮ ಕುಮಾರ್(39), ಸುಮಲತಾ ಲಿಂಗರಾಜು(21), ಗಿರಿಜಮ್ಮ ದೇವರಾಜು(55), ಶಿರಾ ಜ್ಯೋತಿ ನಗರದ ಶಂಕರ್ ಈಶ್ವರಪ್ಪ(38) ಹಾಗೂ ಅಶ್ವತ್ಥ್ ನಾರಾಯಣ (40)ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಭೂತಣ್ಣ, ರಂಗಪ್ಪ, ಶಾಂತಮ್ಮ, ಭಾರತಿ, ಯಶೋಧರ, ಅನ್ನಪೂರ್ಣೇಶ್ವರಿ, ಜ್ಯೋತಿ, ವೀರಭದ್ರಯ್ಯ, ನಂಜಮ್ಮ, ಪದ್ಮಮ್ಮ, ಕೆಂಚಮ್ಮ, ಅಜೇಯ, ತಿಪ್ಪೇಸ್ವಾಮಿ, ನಾಗಮಣಿ, ರಂಗನಾಥ ಹಾಗೂ ಸೋಮಶೇಖರ್ ಎಂಬವರು ಗಾಯಗೊಂಡಿದ್ದು, ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಪ್ರಯಾಣಿಕರೆಲ್ಲರೂ ಮೇ 19ರಂದು ಟ್ರಾವೆಲ್ಸ್‌ವೊಂದಕ್ಕೆ ಸೇರಿದ ಖಾಸಗಿ ಬಸ್ಸಿನಲ್ಲಿ ಸಿಗಂಧೂರಿನ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರು. ದೇವಳ ಸಂದರ್ಶಿಸಿ ರವಿವಾರ ರಾತ್ರಿ ಊರಿಗೆ ಹಿಂದಿರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಇವರಿದ್ದ ಬಸ್ ಶಿರಾ ನಗರ ತಲುಪಲು 3 ಕಿ.ಮೀ. ದೂರ ಇದ್ದಾಗ ಅಪಘಾತ ನಡೆದಿದೆೆ. ಇಲ್ಲಿನ ಹೆದ್ದಾರಿ ಬದಿಯ ಜೈಹಿಂದ್ ಹೋಟೆಲ್ ಬಳಿ ಎಡಭಾಗದಲ್ಲಿ ನಿಲ್ಲಿಸಿದ್ದ ಲಾರಿಯೊಂದಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಐವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳದೆರೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News