ದ್ವೇಷವನ್ನು ಹೊತ್ತು ತಿರುಗುವವರಿಗೆ ದ್ವೇಷವು ಜೈಲಿದ್ದಂತೆ ಎಂದು ತಂದೆ ಕಲಿಸಿದ್ದರು: ರಾಹುಲ್

Update: 2018-05-21 10:54 GMT

ಹೊಸದಿಲ್ಲಿ, ಮೇ 21: "ದ್ವೇಷವನ್ನು ತಮ್ಮೊಂದಿಗೆ ಹೊತ್ತು ತಿರುಗುವವರಿಗೆ ಅದೊಂದು ಜೈಲಿದ್ದಂತೆ ಎಂದು ನನ್ನ ತಂದೆ ನನಗೆ ಕಲಿಸಿದ್ದರು'' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ತಮ್ಮ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 27ನೇ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಹುಲ್, ತಮ್ಮ ಟ್ವೀಟ್ ಒಂದರಲ್ಲಿ "ಇಂದು ನನ್ನ ತಂದೆಯ ಪುಣ್ಯತಿಥಿ. ನಮಗೆ ಎಲ್ಲರನ್ನೂ ಪ್ರೀತಿ ಮತ್ತು ಗೌರವದಿಂದ ಕಾಣಲು ಕಲಿಸಿದ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇದು ತಂದೆಯೊಬ್ಬ ತನ್ನ ಪುತ್ರನಿಗೆ ನೀಡಬಹುದಾದ ಅತ್ಯಂತ ಅಮೂಲ್ಯ ಉಡುಗೊರೆ. ನಿಮ್ಮನ್ನು ಪ್ರೀತಿಸುವ ನಾವೆಲ್ಲರೂ ನಿಮ್ಮನ್ನು ಸದಾ ನಮ್ಮ ಹೃದಯದಲ್ಲಿರಿಸುತ್ತೇವೆ'' ಎಂದು ರಾಹುಲ್ ಹೇಳಿದ್ದಾರೆ.

ಇಂದು ಬೆಳಗ್ಗೆ ಸೋನಿಯಾ ಗಾಂಧಿ ತಮ್ಮ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ವಾದ್ರಾ ಜತೆ ರಾಜೀವ್ ಅವರ ಸಮಾಧಿಯಿರುವ ವೀರ್ ಭೂಮಿಗೆ ತೆರಳಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹಿತ ಹಿರಿಯ ಕಾಂಗ್ರೆಸ್ ನಾಯಕರಾದ ಸುಶೀಲ್ ಕುಮಾರ್ ಶಿಂಧೆ, ಮಲ್ಲಿಕಾರ್ಜುನ ಖರ್ಗೆ ಕೂಡ ಅಲ್ಲಿ ಹಾಜರಿದ್ದು ಪಕ್ಷದ ನಾಯಕನಿಗೆ ನಮನ ಸಲ್ಲಿಸಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ರಾಜೀವ್ ಅವರ ಪುಣ್ಯತಿಥಿಯಂದು ಟ್ವೀಟ್ ಮುಖಾಂತರ ಸ್ಮರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News