ಸಿಎ ಪರೀಕ್ಷೆಗಳನ್ನು ಮುಂದೂಡಲು ಸುಪ್ರೀಂ ಕೋರ್ಟ್ ನಕಾರ

Update: 2024-04-29 15:27 GMT

 ಸುಪ್ರೀಂ ಕೋರ್ಟ್ (PTI)

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಮೇ ತಿಂಗಳಲ್ಲಿ ನಡೆಯಲು ನಿಗದಿಯಾಗಿರುವ ಚಾರ್ಟರ್ಡ್ ಅಕೌಂಟನ್ಸಿ (ಸಿಎ)ಯ ಕೆಲವು ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಭಾರತೀಯ ಚಾರ್ಟರ್ಡ್ ಅಕೌಂಟಂಟ್‌ಗಳ ಸಂಸ್ಥೆ (ಐಸಿಎಐ)ಯು ಪರೀಕ್ಷೆಗಳನ್ನು ಮತದಾನ ದಿನಾಂಕಗಳಂದು ಇಟ್ಟಿಲ್ಲ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ .ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು.

ಲೋಕಸಭಾ ಚುನಾವಣೆಗೆ ಮತದಾನವು ಮೇ 7 ಮತ್ತು 13ರಂದು ನಡೆಯಲಿದೆ ಹಾಗೂ ಮೇ 6 ಮತ್ತು 12ರಂದು ಯಾವುದೇ ಪರೀಕ್ಷೆ ನಡೆಯುತ್ತಿಲ್ಲ ಎಂದು ನ್ಯಾಯಾಲಯ ಹೇಳಿತು.

ಪರೀಕ್ಷೆಗಳ ದಿನಾಂಕಗಳನ್ನು ಬದಲಿಸಿದರೆ, ಈಗಾಗಲೇ ಮಾಡಲಾಗಿರುವ ವ್ಯಾಪಕ ಏರ್ಪಾಡುಗಳು ಅಸ್ತವ್ಯಸ್ತಗೊಳ್ಳಬಹುದಾಗಿದೆ ಹಾಗೂ ಅದು ಕೆಲವು ವಿದ್ಯಾರ್ಥಿಗಳಿಗೆ ಘೋರ ಅನ್ಯಾಯ ಮಾಡಬಹುದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಸಿಎ ಪರೀಕ್ಷೆಗಳು ಮೇ 2ರಿಂದ 17ರವರೆಗೆ ನಡೆಯಲಿದೆ. ಮೇ 7 ಮತ್ತು ಮೇ 13ರಂದು ಕೆಲವು ರಾಜ್ಯಗಳಲ್ಲಿ ಮತದಾನ ನಡೆಯುವುದರಿಂದ, ಮೇ 8 ಮತ್ತು 14ರಂದು ನಡೆಯಲಿರುವ ಪರೀಕ್ಷೆಯನ್ನು ಮುಂದೂಡಬೇಕು ಎಂಬುದಾಗಿ ಅರ್ಜಿಯಲ್ಲಿ ಕೋರಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News