ಧಾರವಾಡ: ‘ಆನಂದದಾಯಕ ಬದುಕು ಮನಸ್ಸಿನ ಅದ್ಭುತ ಶಕ್ತಿ’ ಗ್ರಂಥ ಬಿಡುಗಡೆ

Update: 2018-05-21 16:16 GMT

ಧಾರವಾಡ, ಮೇ 21: ಮನಸ್ಸು ಅದ್ಭುತ ಶಕ್ತಿ ಹೊಂದಿದೆ. ಸರಿಯಾದ ಸಮಯಕ್ಕೆ ಸರಿಯಾಗಿ ಬಳಸಿಕೊಳ್ಳಬೇಕು. ಮಕ್ಕಳಲ್ಲಿ ಪುಸ್ತಕ ಓದುವ ಗ್ರಹಿಸುವ ಶಕ್ತಿ ಇದೆ. ಅದನ್ನು ಪಾಲಕರು ಚಾಲನೆಯಲ್ಲಿಡಬೇಕು ಎಂದು ಮನೋವೈದ್ಯ ಡಾ.ಆನಂದ ಪಾಂಡುರಂಗಿ ತಿಳಿಸಿದ್ದಾರೆ.

ನಗರದ ರಂಗಾಯಣ ಸಭಾಭವನದಲ್ಲಿ ‘ಆನಂದದಾಯಕ ಬದುಕು ಮನಸ್ಸಿನ ಅದ್ಭುತ ಶಕ್ತಿ’ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಗ್ರಂಥವನ್ನು ಬರೆದಿರುವ ಡಾ.ಸಿ.ಚ.ಪುರಾಣಿಕಮಠ ದೈಹಿಕ ನ್ಯೂನತೆ ಹೊಂದಿದ್ದರು. ಆದರೂ, ಪ್ರತಿಯೊಂದು ಮನೆಯಲ್ಲಿರಬೇಕಾದ ಮತ್ತು ಓದಿ ಗ್ರಹಿಸಬೇಕಾದ ಗ್ರಂಥವನ್ನು ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದಿನ ಆಧುನಿಕ ವೈಜ್ಞಾನಿಕ ಒತ್ತಡದ ದಿನಗಳಲ್ಲಿ ಪರಿಸರ ಸಂರಕ್ಷಣೆ ಕಡೆಗೆ ಗಮನ ಹರಿಸುತ್ತಿಲ್ಲ. ಎಲ್ಲದಕ್ಕೂ ಪರಿಸರ ಧರ್ಮಶಾಸ್ತ್ರವಾಗಿದೆ. ಪರಿಸರ ಕಾಪಾಡಬೇಕಾಗಿದೆ ಎಂದು ಆನಂದ ಪಾಂಡುರಂಗಿ ತಿಳಿಸಿದರು.

ಮಕ್ಕಳೆ ಸಹಾಯ ನಮ್ಮದು ಪ್ರಯತ್ನ ನಿಮ್ಮದು, ಹರಿದ ಬಟ್ಟೆ ಇದ್ದರೂ ಚಿಂತೆಯಿಲ್ಲ. ಪುಸ್ತಕ ಓದುವ ಶಕ್ತಿ ಬೆಳೆಸಿಕೊಳ್ಳಿ. ಆಧುನಿಕ ದಿನಗಳಲ್ಲಿ ಮಕ್ಕಳು ಮೊಬೈಲ್, ಇಂಟರ್‌ನೆಟ್, ವಾಟ್ಸಪ್ ಇತ್ಯಾದಿಗಳ ಆಕರ್ಷಣೆಗೆ ಒಳಗಾಗಿ ಖಿನ್ನತೆಗೆ ಒಳಗಾಗಬಾರದು ಎಂದು ಅವರು ಹೇಳಿದರು.

ದೈಹಿಕ ನ್ಯೂನತೆಗಳಿದ್ದರೂ ಮಾನಸಿಕ ಸದೃಢರಾಗಿದ್ದ ಡಾ.ಸಿ.ಚ.ಪುರಾಣಿಕಮಠ, ವಿಜ್ಞಾನಿ ಸ್ಟೀಫನ್ ಹಾಕಿಂಗ್ ಮುಂತಾದವರು ತಮಗೆ ಜೀವಂತ ಸಾಕ್ಷಿಯಾಗಿದ್ದಾರೆ. ಅವರನ್ನೊಮ್ಮೆ ನೋಡಿ ನಿಮ್ಮ ಜೀವನ ಶೈಲಿ ಬದಲಾವಣೆ ಕಂಡುಕೊಳ್ಳಬೇಕು. ಮಕ್ಕಳಿಗೆ ಪಾಲಕರ ಒತ್ತಡ ಸಲ್ಲದು. ಮಕ್ಕಳಲ್ಲಿ ಎಲ್ಲವನ್ನೂ ಸಾಧಿಸುವ ಅಪಾರ ಶಕ್ತಿ ಅಡಗಿದೆ. ಮಕ್ಕಳಿಗೆ ಪ್ರೇರಣೆ ಕೊಡಬೇಕು, ಹತ್ತಿಕ್ಕಬಾರದು ಎಂದು ಅವರು ತಿಳಿಸಿದರು.

35 ವರ್ಷಗಳ ಅನುಭವದಿಂದ ಒಂದು ಚಿಕ್ಕ ಆನಂದದಾಯಕ ಬದುಕು ಮನಸ್ಸಿನ ಅದ್ಭುತ ಶಕ್ತಿ ಎಂಬ ಗ್ರಂಥ ರಚಿಸಿದ ಗ್ರಂಥವು ಜೀವನದ ಮೌಲ್ಯಗಳನ್ನೊಳಗೊಂಡ ಗ್ರಂಥವಾಗಿದೆ. ಅದನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆನಂದ ಪಾಂಡುರಂಗಿ ಹೇಳಿದರು.

ನಾನು ದೈಹಿಕ ನ್ಯೂನತೆ ಬದುಕಿನಲ್ಲಿದ್ದೇನೆ. ಅದರಿಂದ ಹೊರಬರಲು ಇಂತಹ ಗ್ರಂಥ ಹೊರ ತಂದಿದ್ದೇನೆ. ಶಬ್ದಕ್ಕಿಂತ ಶಬ್ದದ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಬೇಕು. ಬದಲಾವಣೆ ನಿಸರ್ಗದ ನಿಯಮ, ಸಂತೋಷ ಮತ್ತು ನೆಮ್ಮದಿ ಕೀಲಿ ಕೈಗಳಿದ್ದಂತೆ. ಧರ್ಮವೆಂದರೆ ಪರಿಸರವಾಗಿದೆ. ಆಧುನಿಕ ನಾಗರಿಕತೆಗೆ ತಳಪಾಯವಲ್ಲ. ಪರಿಸರ ಧರ್ಮಾಚರಣೆ ಮರೆತರೆ ಪ್ರಕೃತಿ ನಾಶವಾಗುತ್ತದೆ ಎಂದು ಗ್ರಂಥದ ರಚನೆಕಾರ ಆಯುರ್ವೇದ ತಜ್ಞ ಡಾ.ಸಿ.ಚ.ಪುರಾಣಿಕಮಠ ಹೇಳಿದರು.

ಶಾಲಾ ಮನೋಭಾವ ಕುಸಿಯಬಾರದು. ಸರಳ ಜೀವನ ಶೈಲಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸೌಲಭ್ಯಗಳಿಂದ ದರಿದ್ರತನ ಪ್ರಾರಂಭವಾಗಿದೆ. ಸ್ವಪ್ರಯತ್ನಗಳು ನಡೆಯಬೇಕಾಗಿದೆಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಜಿ.ಟಿ.ಪವಾರ, ವೈದ್ಯೆ ಡಾ. ಸುಮಂಗಲಾ ಎಸ್ ಪುರಾಣಿಕಮಠ, ಉಪನ್ಯಾಸಕ ಆರ್.ಕೆ.ಗುರುವನ, ಕಲಕೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News