ಜೆಡಿಎಸ್- ಕಾಂಗ್ರೆಸ್ ಮೈತ್ರಿ ಹೆಚ್ಚು ದಿನ ಉಳಿಯುವುದಿಲ್ಲ: ಈಶ್ವರಪ್ಪ

Update: 2018-05-21 17:48 GMT

ಮೈಸೂರು,ಮೇ.21: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹೆಚ್ಚು ದಿನ ಉಳಿಯುವುದಿಲ್ಲ. ಮೂರು ತಿಂಗಳಲ್ಲಿ ಸರಕಾರ ಉರುಳಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.

ದಕ್ಷಿಣ ಪದವೀದರ ಶಿಕ್ಷಕರ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಮುಳುಗುವ ಹಡಗು, ಜೆಡಿಎಸ್ ಪಕ್ಷ ಹಿಡಿದುಕೊಂಡು ಉಸಿರಾಡುತ್ತಿದೆ. ಎಂದಾದರೂ ಅದರ ಉಸಿರು ನಿಲ್ಲಲಿದೆ ಎಂದು ಹೇಳಿದರು.

ಈಗಾಗಲೇ ಕಾಂಗ್ರೆಸ್-ಜೆಡಿಎಸ್ ನಡುವೆ ಅಧಿಕಾರಕ್ಕಾಗಿ ಗುದ್ದಾಟ ಶುರುವಾಗಿದೆ. ಕಿತ್ತಾಟದಿಂದಲೇ ಅವರು ಮನೆಗೆ ಹೋಗುತ್ತಾರೆ. ಮೂರು ತಿಂಗಳು ಕಾಯಿರಿ. ಸರ್ಕಾರ ಉರುಳಲಿದೆ ಹೇಳಿದರು.

ರಾಜ್ಯದ ಜನರ ನಿರೀಕ್ಷೆ ಇದ್ದಿದ್ದು ಬೇರೆ. ರಾಜ್ಯದ ಜನ ಎಲ್ಲರೂ ಬಿಜೆಪಿ ಸರ್ಕಾರ ಬರಬೇಕು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ನಂಬರ್ ಗೇಮ್‍ನಲ್ಲಿ ಸರ್ಕಾರ ರಚಿಸಲು ನಮಗೆ ಹಿನ್ನಡೆಯಾಗಿದೆ ಎಂದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಲ್ಪಾವಧಿ ಸರ್ಕಾರವಾಗಿದೆ. ಅಧಿಕಾರಕ್ಕಾಗಿ ಒಂದಾಗಿರುವ ಪಕ್ಷಗಳನ್ನು ಜನ ಕ್ಷಮಿಸಲ್ಲ. ಬಹುಮತ ಸಾಬೀತಾದ ಬಳಿಕ ಈ ಸರ್ಕಾರ ಕಡೆಯ ದಿನಗಳನ್ನು ಎಣಿಸಲಿದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಲಿಲ್ಲ. ಮುಂದಿನ ದಿನಗಳಲ್ಲಾದರೂ ಸಿದ್ದರಾಮಯ್ಯ ಅವರ ಹುದ್ದೆಗೆ ಗೌರವ ಕೊಡಲಿ. ಇಬ್ಬರೂ ಕೆಟ್ಟ ಪದಗಳನ್ನು ಬಳಸಿ ಅಧಿಕಾರಕ್ಕಾಗಿ ಒಂದಾಗಿದ್ದಾರೆ. ಜನರು ನಿಮ್ಮ ಆಟ ನೋಡುತ್ತಿದ್ದಾರೆ. ಉತ್ತರ ಕೊಡಲು ಸಿದ್ಧರಾಗುತ್ತಿದ್ದಾರೆ ಎಂದು ಹರಿಹಾಯ್ದರು. 

ಸಿದ್ದರಾಮಯ್ಯ ಬಿಜೆಪಿ ಬೆಂಬಲ ಇಲ್ಲದಿದ್ದರೆ ಮೊದಲ ಬಾರಿಗೆ ಮಂತ್ರಿ ಆಗುತ್ತಿರಲಿಲ್ಲ. ಅವಕಾಶವಾದಿ ರಾಜಕಾರಣಿಗಳನ್ನು ಎಂದೂ ಕ್ಷಮಿಸುವುದಿಲ್ಲ. ಇಬ್ಬರೂ ಅವಕಾಶವಾದಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News