ಭಾರತ-ರಶ್ಯ ನಡುವೆ ‘ವಿಶೇಷ ಅಧಿಕಾರಗಳ ಆಯಕಟ್ಟಿನ ಭಾಗೀದಾರಿಕೆ’: ರಶ್ಯದಲ್ಲಿ ಪ್ರಧಾನಿ ಮೋದಿ

Update: 2018-05-21 17:53 GMT

ಸೋಚಿ (ರಶ್ಯ), ಮೇ 21: ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಶ್ಯದ ನಗರ ಸೋಚಿಯಲ್ಲಿ ಆ ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಭೇಟಿಯಾದರು. ರಶ್ಯ ಅಧ್ಯಕ್ಷರ ಜೊತೆ ಅನೌಪಚಾರಿಕ ಶೃಂಗಸಭೆ ನಡೆಸುವುದಕ್ಕಾಗಿ ಅವರು ಇಲ್ಲಿದ್ದಾರೆ.

 ಭಾರತ ಮತ್ತು ರಶ್ಯಗಳ ನಡುವಿನ ಆಯಕಟ್ಟಿನ ಭಾಗೀದಾರಿಕೆಯು ಈಗ ‘ವಿಶೇಷ ಅಧಿಕಾರಗಳ ಆಯಕಟ್ಟಿನ ಭಾಗೀದಾರಿಕೆ’ಯ ಮಟ್ಟಕ್ಕೆ ಏರಿದೆ ಎಂದು ಮೋದಿ ಈ ಸಂದರ್ಭದಲ್ಲಿ ನುಡಿದರು.

ಭಾರತ ಮತ್ತು ರಶ್ಯಗಳು ಸುದೀರ್ಘ ಕಾಲದಿಂದ ಸ್ನೇಹಿತರಾಗಿವೆ ಎಂದು ಹೇಳಿದ ಮೋದಿ, ಕಪ್ಪು ಸಮುದ್ರ ತೀರದಲ್ಲಿರುವ ಸೋಚಿ ನಗರದಲ್ಲಿ ನಡೆಯುತ್ತಿರುವ ಪ್ರಥಮ ಅನೌಪಚಾರಿಕ ಸಭೆಗೆ ಆಹ್ವಾನಿಸಿರುವುದಕ್ಕಾಗಿ ಅಧ್ಯಕ್ಷ ಪುಟಿನ್‌ಗೆ ಧನ್ಯವಾದ ಸಲ್ಲಿಸಿದರು.

2001ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೊತೆ ರಶ್ಯಕ್ಕೆ ತಾನು ನೀಡಿರುವ ಪ್ರಥಮ ಭೇಟಿಯನ್ನು ಮೋದಿ ಸ್ಮರಿಸಿದರು. ಗುಜರಾತ್‌ನ ಮುಖ್ಯಮಂತ್ರಿಯಾದ ಬಳಿಕ ತಾನು ಭೇಟಿಯಾದ ಪ್ರಥಮ ಜಾಗತಿಕ ನಾಯಕ ಪುಟಿನ್ ಎಂದರು.

 ಅಂದಿನ ಪ್ರಧಾನಿ ವಾಜಪೇಯಿ ಮತ್ತು ರಶ್ಯ ಅಧ್ಯಕ್ಷ ಪುಟಿನ್ ಬಿತ್ತಿದ ‘ಆಯಕಟ್ಟಿನ ಭಾಗೀದಾರಿಕೆ’ಯ ಬೀಜಗಳು ಈಗ ಉಭಯ ದೇಶಗಳ ನಡುವಿನ ‘ವಿಶೇಷ ಅಧಿಕಾರಗಳ ಆಯಕಟ್ಟಿನ ಭಾಗೀದಾರಿಕೆ’ಯಾಗಿ ಬೆಳೆದಿದೆ ಎಂದು ಮೋದಿ ಅಭಿಪ್ರಾಯಪಟ್ಟರು. ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತ ಖಾಯಂ ಸದಸ್ಯತ್ವ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿರುವುದಕ್ಕಾಗಿ ರಶ್ಯಕ್ಕೆ ಮೋದಿ ಕೃತಜ್ಞತೆ ಸಲ್ಲಿಸಿದರು.

ಶಾಂಘೈ ಸಹಕಾರ ಸಂಘಟನೆಯು 8 ದೇಶಗಳ ಸಂಘಟನೆಯಾಗಿದ್ದು, ಸದಸ್ಯ ದೇಶಗಳ ನಡುವೆ ಸೇನಾ ಮತ್ತು ಆರ್ಥಿಕ ಸಹಕಾರಕ್ಕೆ ಬೆಂಬಲ ನೀಡುತ್ತದೆ. ಈ ಸಂಘಟನೆಗೆ ಭಾರತ ಮತ್ತು ಪಾಕಿಸ್ತಾನವನ್ನು ಕಳೆದ ವರ್ಷ ಸೇರಿಸಿಕೊಳ್ಳಲಾಗಿರುವುದನ್ನು ಸ್ಮರಿಸಬಹುದಾಗಿದೆ.

‘‘ಅಂತರ್‌ರಾಷ್ಟ್ರೀಯ ನಾರ್ತ್-ಸೌತ್ ಟ್ರಾನ್ಸ್‌ಪೋರ್ಟ್ ಕಾರಿಡಾರ್ (ಐಎನ್‌ಎಸ್‌ಟಿಸಿ) ಮತ್ತು ಬ್ರಿಕ್ಸ್ (ಬಿಆರ್‌ಐಸಿಎಸ್)ನಲ್ಲಿ ನಾವು ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ’’ ಎಂದು ಮೋದಿ ಹೇಳಿದರು.

ಸೋಚಿಯಲ್ಲಿ ಮೋದಿಯನ್ನು ಸ್ವಾಗತಿಸಿದ ಪುಟಿನ್, ಅವರ ಭೇಟಿಯು ದ್ವಿಪಕ್ಷೀಯ ಬಾಂಧವ್ಯಕ್ಕೆ ಹೊಸದಾಗಿ ಉತ್ತೇಜನ ನೀಡುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News