ಮತಯಂತ್ರ: ನಾಯಕನೋ, ಖಳನಾಯಕನೋ?

Update: 2018-05-22 18:41 GMT

ಸಾಧಾರಣವಾಗಿ ಚುನಾವಣೆ ಮುಗಿದಾಕ್ಷಣ ಎಲ್ಲ ಪಕ್ಷಗಳೂ ಆತ್ಮವಿಮರ್ಶೆಗೆ ಇಳಿಯುತ್ತವೆ. ಸೋಲು ಗೆಲುವುಗಳಿಗೆ ಕಾರಣವಾದ ಬೇರೆ ಬೇರೇ ಆಯಾಮಗಳನ್ನು ಚರ್ಚಿಸುತ್ತವೆ. ಫಲಿತಾಂಶದ ಬೆನ್ನಿಗೇ ಸೋತ ಪಕ್ಷದ ಕೆಲವು ಪ್ರಮುಖರಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಆತ್ಮಾವಲೋಕನ ಮಾಡಬೇಕಾದ ಅಗತ್ಯವೇ ಇಲ್ಲವೇನೋ ಎಂಬಂತೆ ಎಲ್ಲರೂ ತಮ್ಮ ತಮ್ಮ ಸೋಲನ್ನು ‘ಇವಿಎಂ ಮತಯಂತ್ರ’ದ ಮೇಲೆ ಹಾಕಿ ಜಾರಿಕೊಳ್ಳಬಹುದು.. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಿಎಸ್ಪಿ ಹೀನಾಯ ಸೋಲನ್ನು ಅನುಭವಿಸಿದಾಗ ಅದು ಸೋಲಿನ ಹೊಣೆಯನ್ನು ಸಂಪೂರ್ಣ ಮತಯಂತ್ರದ ಮೇಲೆ ಹಾಕಿ ಬಿಟ್ಟಿತು. ಇದೇ ಸಂದರ್ಭದಲ್ಲಿ ಜಾತ್ಯತೀತ ಪಕ್ಷಗಳ ಒಳಜಗಳಗಳು, ಮತಗಳ ಧ್ರುವೀಕರಣ ಇವುಗಳ ಕುರಿತಂತೆ ಗಂಭೀರ ಚರ್ಚೆ ನಡೆಸಲು ಹಿಂದೇಟು ಹಾಕಿತು. ಇದೀಗ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಿಗೇ ಸೋತವರ ಕಣ್ಣು ಮತಯಂತ್ರದ ಮೇಲೆ ಹೊರಳಿದೆ. ಕನಿಷ್ಠ 120 ಸ್ಥಾನಗಳನ್ನು ಗಳಿಸುವ ಕಾಂಗ್ರೆಸ್‌ನ ಆತ್ಮವಿಶ್ವಾಸಕ್ಕೆ ಈ ಬಾರಿಯ ಚುನಾವಣೆ ಭಾರೀ ಆಘಾತವನ್ನು ನೀಡಿರುವುದು ಇದಕ್ಕೆ ಮುಖ್ಯ ಕಾರಣ.

ಸಿದ್ದರಾಮಯ್ಯ ನೇತೃತ್ವದ ಸರಕಾರದ ವಿರುದ್ಧ ಯಾವುದೇ ಅಲೆಗಳು ಇಲ್ಲ ಎನ್ನುವ ವಾದವನ್ನು ಫಲಿತಾಂಶ ಸಂಪೂರ್ಣ ಹುಸಿಗೊಳಿಸಿದೆ. ಇಂತಹದೊಂದು ಫಲಿತಾಂಶ ಹೊರಹೊಮ್ಮುವುದಕ್ಕೆ ನಿಜವಾದ ಕಾರಣ ಏನು ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ, ಕಾಂಗ್ರೆಸ್ ನಾಯಕರು 30ರಿಂದ 40 ಕ್ಷೇತ್ರಗಳಲ್ಲಿ ಇವಿಎಂ ತಿರುಚಲಾಗಿದೆ ಎಂದು ಆರೋಪ ಮಾಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಹೊರಬಂದಿರುವ ಅನಿರೀಕ್ಷಿತ ಫಲಿತಾಂಶ ಮತ್ತು ಮತಗಳ ಅಂತರಗಳನ್ನು ಗಮನಿಸುವಾಗ ‘ಯಾಕಿರಬಾರದು?’ ಎಂಬ ಪ್ರಶ್ನೆ ಹುಟ್ಟುವುದೂ ಸಹಜವಾಗಿದೆ. ಆದರೆ ಎಲ್ಲರೂ ಮತಯಂತ್ರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆಯೇ ಹೊರತು, ಅದರ ವಿರುದ್ಧ ಗಂಭೀರವಾದ ದೂರು ದಾಖಲಿಸುವುದು, ಆಂದೋಲನವನ್ನು ರೂಪಿಸುವುದರಲ್ಲಿ ವಿಫಲವಾಗಿದ್ದಾರೆ. ಮತಯಂತ್ರ ದುರುಪಯೋಗವಾಗಿದೆ ಎಂಬ ಆರೋಪ ದೊಡ್ಡ ಧ್ವನಿಯಲ್ಲಿ ವ್ಯಕ್ತವಾದುದು ಉತ್ತರ ಪ್ರದೇಶ ಫಲಿತಾಂಶದ ಬಳಿಕ. ನಿಜಕ್ಕೂ ದುರುಪಯೋಗವಾಗಿದೆಯಾದರೆ, ಕನಿಷ್ಠ ಫಲಿತಾಂಶದ ಬಳಿಕವಾದರೂ ಅದರ ವಿರುದ್ಧ ಆಂದೋಲನವನ್ನು ಹುಟ್ಟುಹಾಕಬೇಕಾಗಿತ್ತು. ಯಾಕೆ ಎಲ್ಲ ಪಕ್ಷಗಳು ಈ ವಿಷಯದಲ್ಲಿ ವಿಫಲವಾಗಿವೆ? ಫಲಿತಾಂಶ ತನ್ನ ಪರವಾಗಿದ್ದರೆ ವೌನ, ವಿರುದ್ಧವಾಗಿದ್ದರೆ ಮತಯಂತ್ರ ದುರುಪಯೋಗ ಎಂಬ ವಾದ ಎಷ್ಟು ಸರಿ?

ಮತಯಂತ್ರ ದುರುಪಯೋಗವಾಗುತ್ತಿದೆ ಎಂಬ ಆರೋಪ ಇಂದು ನಿನ್ನೆಯದೇನೂ ಅಲ್ಲ. ಯುಪಿಎ ಸರಕಾರ ಆರಿಸಿ ಬಂದಾಗ ಎಲ್. ಕೆ. ಅಡ್ವಾಣಿಯವರು, ಮತಯಂತ್ರ ವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಅಂದರೆ ಮತಯಂತ್ರದ ವಿರುದ್ಧ ಮೊದಲ ಬಾರಿ ಧ್ವನಿಯೆತ್ತಿರುವುದು ಬಿಜೆಪಿಯೇ ಆಗಿದೆ. ಮತಯಂತ್ರವನ್ನು ದುರುಪಯೋಗ ಪಡಿಸಬಹುದು ಎನ್ನುವುದನ್ನು ಹಲವರು ಈಗಾಗಲೇ ಸಾಬೀತು ಪಡಿಸಿದ್ದಾರೆ. ಕೆಲವು ಮತಯಂತ್ರಗಳು, ಯಾವ ಬಟನ್ ಅದುಮಿದರೂ ಬಿಜೆಪಿಗೆ ಮತಗಳನ್ನು ರವಾನಿಸುತ್ತಿರುವುದು ಹಲವು ಬಾರಿ ಬಯಲಾಗಿದೆ. ‘ನರೇಂದ್ರ ಮೋದಿ ಸರಕಾರ ಪ್ರಚಂಡ ಬಹುಮತದಿಂದ ಆಯ್ಕೆಯಾಗುವುದರ ಹಿಂದೆ ಮತಯಂತ್ರ ದುರುಪಯೋಗ ನಡೆದಿದೆ’ ಎಂಬ ಆರೋಪಗಳು ಇನ್ನೂ ತಣಿದಿಲ್ಲ. ಆದರೆ ‘ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಹಿಂದೆ ಸರಿಯುವುದು ಎಷ್ಟು ಸರಿ?’ ಎಂದು ಬಿಜೆಪಿ ಪ್ರಶ್ನಿಸುತ್ತಿದೆ. ಆದರೆ ಬಿಜೆಪಿಯ ಈ ಪ್ರಶ್ನೆಗೆ ಯಾವ ಬಲವೂ ಇಲ್ಲ. ಯಾಕೆಂದರೆ ವಿಶ್ವದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಮುಂದಿರುವ ರಾಷ್ಟ್ರಗಳು ಚುನಾವಣೆಯಲ್ಲಿ ಮತಯಂತ್ರಗಳನ್ನು ಬಳಕೆ ಮಾಡುತ್ತಿಲ್ಲ. ಅದರ ಅರ್ಥ, ಆ ದೇಶ ತಂತ್ರಜ್ಞಾನವನ್ನು ಇಷ್ಟ ಪಡುವುದಿಲ್ಲ ಎಂದೆ? ಕೆಲವು ಶ್ರೀಮಂತ ರಾಷ್ಟ್ರಗಳು ಮತಯಂತ್ರಗಳಿಗಾಗಿ ಕೋಟ್ಯಂತರ ರೂಪಾಯಿಯನ್ನು ಸುರಿದವು. ಆದರೆ ಯಾವಾಗ ಇವಿಎಂನ್ನು ದುರುಪಯೋಗ ಪಡಿಸಬಹುದು ಎನ್ನುವುದು ಗೊತ್ತಾಯಿತೋ ತಕ್ಷಣ ಎಲ್ಲ ಮತಯಂತ್ರಗಳನ್ನು ಕಸದ ಬುಟ್ಟಿಗೆ ಹಾಕಿ, ಮತ್ತೆ ಮತ ಪತ್ರಗಳಿಗೆ ಮರಳಿತು. ಅಂದರೆ ತಂತ್ರಜ್ಞಾನದಲ್ಲಿ ಮುಂದುವರಿದಿರುವ ದೇಶಗಳು ಈಗಾಗಲೇ ‘ಇವಿಎಂ’ನ್ನು ಹ್ಯಾಕ್ ಮಾಡಬಹುದು ಎಂದು ಒಪ್ಪಿಕೊಂಡಿವೆ.

ಹೀಗಿರುವಾಗ, ಭಾರತ ‘ಮತದಾನ’ದಲ್ಲಿ ಮಾತ್ರ ತಂತ್ರಜ್ಞಾನದ ಕುರಿತಂತೆ ಅತ್ಯಾಸಕ್ತಿ ತೋರಿಸುವುದು ಅನುಮಾನವನ್ನು ಹುಟ್ಟಿಸುತ್ತದೆ. ಯಾವುದೇ ಕ್ಷೇತ್ರದ ಗುಣಮಟ್ಟವನ್ನು ಅತ್ಯುತ್ತಮ ಗೊಳಿಸುವ ಉದ್ದೇಶದಿಂದ ನಾವು ತಂತ್ರಜ್ಞಾನವನ್ನು ಬಳಸುತ್ತೇವೆ. ಬರೇ ತಂತ್ರಜ್ಞಾನಕ್ಕಾಗಿ ಯಾರೂ ತಂತ್ರಜ್ಞಾನದ ಮೊರೆಹೋಗುವುದಿಲ್ಲ. ಅದರಿಂದ ನಮಗಾಗುವ ಲಾಭ, ನಷ್ಟಗಳೇನು ಎನ್ನುವುದರ ಅರಿವು ನಮಗೆ ಸ್ಪಷ್ಟವಾಗಿರಬೇಕು. ಮತಯಂತ್ರದಿಂದಾಗಿ ಮತದಾನ ನಡೆಸುವ ಸಮಯ, ಎಣಿಕೆಯ ಸಮಯ ಇತ್ಯಾದಿಗಳು ಉಳಿತಾಯವಾಗುತ್ತದೆ ಮಾತ್ರವಲ್ಲ, ಮತದಾನ ಸುಲಲಿತವಾಗಿ ನಡೆಯುತ್ತದೆ. ಆದರೆ ಮತದಾನದ ಉದ್ದೇಶವನ್ನೇ ವಿಫಲಗೊಳಿಸಿ, ಸಮಯವನ್ನು, ಹಣವನ್ನು ಉಳಿತಾಯ ಮಾಡುವುದರಿಂದ ನಾವು ಸಾಧಿಸುವುದಾದರೂ ಏನು? ಮತದಾರರು ತಮ್ಮ ತಮ್ಮ ಅಭ್ಯರ್ಥಿಗೆ ಚಲಾಯಿಸಿದ ಮತಗಳನ್ನು, ಯಾರೋ ದೂರದಲ್ಲಿ ಕುಳಿತು ತನಗೆ ಬೇಕಾದಂತೆ ತಿರುಚಬಲ್ಲರಾದರೆ ಪ್ರಜಾಸತ್ತೆಯ ಉದ್ದೇಶವೇ ಬುಡಮೇಲಾದಂತೆ. ಹೀಗಿರುವಾಗ, ಮತಚಲಾವಣೆ ಮಾಡುವ ಅಗತ್ಯವಾದರೂ ಏನು? ಇದು ಪ್ರಜಾಸತ್ತೆಯ ಅಣಕವಲ್ಲವೇ? ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗ, ‘ಮತಯಂತ್ರಗಳ ದುರುಪಯೋಗ ನಡೆಯುತ್ತಿಲ್ಲ’ ಎಂದು ಸಮರ್ಥಿಸಿಕೊಳ್ಳುತ್ತಿದೆ.

ಒಂದೆರಡು ಪ್ರಕರಣಗಳನ್ನು ಮುಂದಿಟ್ಟುಕೊಂಡು ಇಡೀ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳುವಂತಿಲ್ಲ ಎಂದೂ ವಾದಿಸುತ್ತಿದೆ. ಆದರೆ, ಮತಯಂತ್ರದ ಕುರಿತಂತೆ ಈ ದೇಶದ ಬಹುಸಂಖ್ಯಾತ ಪಕ್ಷಗಳು ತನ್ನ ಅನುಮಾನ ವ್ಯಕ್ತಪಡಿಸುತ್ತಿರುವಾಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆ. ಇಂದು ಬಿಜೆಪಿಯನ್ನು ಹೊರತು ಪಡಿಸಿ ಎಲ್ಲ ಪಕ್ಷಗಳೂ ಮತಯಂತ್ರಗಳ ಕುರಿತಂತೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿವೆ. ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಶಿವಸೇನೆ ಕೂಡ, ಮತಯಂತ್ರಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆೆ. ಕರ್ನಾಟಕದಲ್ಲಿ ಮತಯಂತ್ರಗಳ ಮೂಲಕ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಶಿವಸೇನೆ ಹೇಳಿಕೆಯನ್ನೂ ನೀಡಿದೆ.

ಇವೆಲ್ಲವನ್ನು ಪರಿಗಣಿಸಿ, ಮುಂದಿನ ಲೋಕಸಭಾ ಚುನಾವಣೆ ನಡೆಯುವುದರೊಳಗಾಗಿ ಮತಯಂತ್ರಗಳ ಕುರಿತಂತೆ ಆಯೋಗ ಸ್ಪಷ್ಟ ನಿರ್ಧಾರಕ್ಕೆ ಬರಬೇಕಾಗಿದೆ. ಇದೇ ಸಂದರ್ಭದಲ್ಲಿ ಮತಯಂತ್ರಗಳ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುವ ಪಕ್ಷಗಳು ಒಂದನ್ನು ತಿಳಿದುಕೊಳ್ಳಬೇಕಾಗಿದೆ. ಫಲಿತಾಂಶ ಹೊರಬಿದ್ದ ಬಳಿಕ ಅದರ ವಿರುದ್ಧ ಆರೋಪಗಳನ್ನು ಮಾಡುವುದು ತಪ್ಪಾಗುತ್ತದೆ. ನಾಳೆ ಬಿಜೆಪಿಯೂ ಇಂತಹದೇ ಆರೋಪವನ್ನು ಮಾಡಬಹುದಾಗಿದೆ. ಆದುದರಿಂದ, ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಎಲ್ಲ ಪಕ್ಷಗಳು ಒಂದಾಗಿ ಮತಯಂತ್ರಗಳ ಕುರಿತಂತೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕಾಗಿದೆ. ಇದರ ವಿರುದ್ಧ ಬೃಹತ್ ಆಂದೋಲನವನ್ನು ಹುಟ್ಟು ಹಾಕಿ, ಚುನಾವಣಾ ಆಯೋಗ ಕಾರ್ಯಪ್ರವೃತ್ತವಾಗಲೇ ಬೇಕಾದಂತಹ ಸನ್ನಿವೇಶ ನಿರ್ಮಾಣ ಮಾಡಬೇಕು. ತಾನು ಪ್ರಜಾಸತ್ತಾತ್ಮಕವಾಗಿ ಗೆಲ್ಲುತ್ತಿರುವುದು ನಿಜವೇ ಆಗಿದ್ದರೆ, ಮತಯಂತ್ರಗಳ ಬದಲಿಗೆ ಮತಪತ್ರಗಳ ಮೂಲಕ ಚುನಾವಣೆ ನಡೆಸುವುದಕ್ಕೆ ಬಿಜೆಪಿಗೆ ಇರುವ ಅಡ್ಡಿಯಾದರೂ ಏನು? ಪ್ರಧಾನಿ ನರೇಂದ್ರ ಮೋದಿ ಈ ಪ್ರಶ್ನೆಗೆ ಉತ್ತರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News