ರೋಹಿಂಗ್ಯ ಬಂಡುಕೋರರಿಂದ ಮ್ಯಾನ್ಮಾರ್ ನಲ್ಲಿ 53 ಹಿಂದೂಗಳ ಹತ್ಯೆ: ಆ್ಯಮ್ನೆಸ್ಟಿ ವರದಿ

Update: 2018-05-23 07:46 GMT

ಮ್ಯಾನ್ಮಾರ್, ಮೇ 23: ಮ್ಯಾನ್ಮಾರ್ ನ ರೋಹಿಂಗ್ಯ ಬಂಡುಕೋರರು ಉತ್ತರ ಮೌಂಗ್ಡೌ ಎಂಬಲ್ಲಿನ ಖಾ ಮೌಂಗ್ ಸೀಕ್ ಗ್ರಾಮದಲ್ಲಿ 53 ಮಂದಿ ಹಿಂದೂಗಳನ್ನು "ಗಲ್ಲಿಗೇರಿಸುವ ರೀತಿಯಲ್ಲಿ'' ಹತ್ಯೆಗೈದಿದ್ದಾರೆ. ಹತ್ಯೆಗೊಳಗಾದವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದರೆಂದು ಹೊಸ ತನಿಖೆಯೊಂದು ಬಹಿರಂಗ ಪಡಿಸಿದೆ ಎಂದು ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ಮಂಗಳವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಿದೆ.

ರೋಹಿಂಗ್ಯ ಬಂಡುಕೋರರು ಪೊಲೀಸ್ ಔಟ್ ಪೋಸ್ಟ್ ಗಳನ್ನೂ ಗುರಿಯಾಗಿಸಿದ ದಿನದಂದೇ, ಅಂದರೆ ಆಗಸ್ಟ್ 25, 2017ರಲ್ಲಿ ಈ  ಹತ್ಯೆಗಳು ನಡೆದಿವೆ ಎಂದು ವರದಿ ಹೇಳಿದೆ. ಮ್ಯಾನ್ಮಾರ್ ಮಿಲಿಟರಿ ಪ್ರತಿಕ್ರಮ ಕೈಗೊಂಡ ಪರಿಣಾಮ ದೇಶದ  ಸುಮಾರು 7 ಲಕ್ಷ ರೋಹಿಂಗ್ಯ ಮುಸ್ಲಿಮರು ಪಲಾಯನಗೈದಿದ್ದರು.

ಹಿಂದೂಗಳ ಹತ್ಯೆ ನಡೆದ ಸಂದರ್ಭ ಅರಕನ್ ರೋಹಿಂಗ್ಯ ಸಾಲ್ವೇಶನ್ ಆರ್ಮಿಗೆ ಸೇರಿದ ಉಗ್ರರು ತಾವು ಅದಕ್ಕೆ ಜವಾಬ್ದಾರರಲ್ಲವೆಂದು ಹೇಳಿಕೊಂಡಿದ್ದರು. ಆದರೆ ಆಮ್ನೆಸ್ಟಿ ಇಂಟರ್ ನ್ಯಾಷನಲ್ ನಡೆಸಿದ ತನಿಖೆಯು ಈ ಹತ್ಯೆಗಳಿಗೆ ರೋಹಿಂಗ್ಯ ಬಂಡುಕೋರರೇ ಕಾರಣವೆಂದು ಕಂಡುಕೊಂಡಿದೆ.

ಸುಮಾರು ಎಂಟು ಮಂದಿ ಸಂತ್ರಸ್ತರನ್ನು ಆಮ್ನೆಸ್ಟಿ ಸಂದರ್ಶಿಸಿದ್ದು, ಡಝನ್ ಗಟ್ಟಲೆ ಜನರನ್ನು ಸುತ್ತುವರಿದು, ಕಣ್ಣಿಗೆ ಬಟ್ಟೆ ಕಟ್ಟಿ ಪಟ್ಟಣದಿಂದ ಹೊರಕ್ಕೆ ಕಳುಹಿಸಿದ್ದಾಗಿ ಅವರು ಹೇಳಿದ್ದಾರೆ. "ಅವರು ಪುರುಷರನ್ನು ಹತ್ಯೆಗೈದರು. ಅವರನ್ನು ನೋಡದಂತೆ ನಮಗೆ ಹೇಳಿದರು. ಅವರ ಕೈಗಳಲ್ಲಿ ಚೂರಿ, ಹಾರೆ ಮತ್ತು ಕಬ್ಬಿಣದ ಸರಳುಗಳಿದ್ದವು'' ಎಂದು 18 ವರ್ಷದ ರಾಜ ಕುಮಾರಿ ಹೇಳಿದ್ದು ವರದಿಯಲ್ಲಿ ಉಲ್ಲೇಖವಾಗಿದೆ.

53 ಹಿಂದೂಗಳ ಹತ್ಯೆ ನಡೆದ ದಿನವೇ ಹತ್ತಿರದ ಇನ್ನೊಂದು ಗ್ರಾಮವಾದ ಯೆ ಬೌಕ್ ಕ್ಯಾರ್ ಎಂಬಲ್ಲಿನ 46 ಮಂದಿ ಹಿಂದೂ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಕಾಣೆಯಾಗಿದ್ದರು. ಇವರನ್ನು ಅರಕನ್ ರೋಹಿಂಗ್ಯ ಸಾಲ್ವೇಶನ್ ಆರ್ಮಿಗೆ ಸೇರಿದ ಉಗ್ರರು ಕೊಂದಿದ್ದಾರೆಂದು  ಸ್ಥಳೀಯ ಹಿಂದುಗಳು ನಂಬಿದ್ದಾರೆಂದು ವರದಿ ಹೇಳಿದೆ.

ರಾಖೈನ್ ಪ್ರಾಂತ್ಯದಲ್ಲಿ ಹೆಚ್ಚಾಗಿ ಬೌದ್ಧ ಧರ್ಮದವರು ಹಾಗೂ ಮುಸ್ಲಿಮರಿದ್ದಾರೆಂದು ಹೇಳಲಾಗಿದೆಯಾದರೂ ಅಲ್ಲಿ  ಕೆಲ ಹಿಂದು ಅಲ್ಪಸಂಖ್ಯಾತರೂ ವಾಸವಾಗಿದ್ದಾರೆ. ಅವರು ಕಡಿಮೆ ವೇತನಕ್ಕೆ ದುಡಿಯುವವರಾಗಿರುವುದರಿಂದ ಬ್ರಿಟಿಷ್ ವಸಾಹತುಶಾಹಿಗಳು ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News