ನಿಫ್ಹಾ ವೈರಸ್: ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾಡಳಿತ ಸೂಚನೆ

Update: 2018-05-23 17:14 GMT

ಶಿವಮೊಗ್ಗ, ಮೇ 23: ಬಾವಲಿಗಳ ಮೂಲಕ ಹರಡುವ ನಿಫ್ಹಾ ವೈರಸ್ ರೋಗ ಜಿಲ್ಲೆಗೆ ಕಾಲಿರಿಸದಂತೆ ಎಲ್ಲಾ ತುರ್ತು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರು ವಿವಿಧ ಇಲಾಖೆಗಳಿಗೆ ಸೂಚನೆ ನೀಡಿದರು.

ನಿಪಾ ವೈರಸ್ ತಡೆಗೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಲಾದ ವಿವಿಧ ಇಲಾಖಾ ಅಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ನೆರೆಯ ಕೇರಳ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಈ ರೋಗದ ಶಂಕಿತ ಲಕ್ಷಣಗಳು ಮಂಗಳೂರಿನಲ್ಲಿ ಸಹ ಪತ್ತೆಯಾಗಿವೆ. ಶಿವಮೊಗ್ಗ ಜಿಲ್ಲೆ ನೆರೆಯ ಉಡುಪಿ ಹಾಗೂ ಮಂಗಳೂರಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಪ್ರತಿ ನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ. ಈ ರೋಗದ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. ಆದರೆ ರೋಗ ಹರಡದಂತೆ ಎಲ್ಲಾ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಆರೋಗ್ಯ ಇಲಾಖೆ, ಪಶುಸಂಗೋಪನಾ ಇಲಾಖೆ, ಸ್ಥಳೀಯ ಆಡಳಿತ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಆಶಾ ಕಾರ್ಯಕರ್ತೆಯರು, ಸ್ವಸಹಾಯ ಗುಂಪಿನ ಸದಸ್ಯರು ಗ್ರಾಮೀಣ ಮಟ್ಟದಲ್ಲಿ ಈ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.

ಪ್ರಥಮ ಹಂತದಲ್ಲಿ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ವ್ಯಾಪಕವಾಗಿ ಕೈಗೊಳ್ಳಬೇಕು. ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಸಭೆಯನ್ನು ಕರೆದು ಮಾಹಿತಿ ನೀಡಬೇಕು. ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶುಂಠಿ ಬೆಳೆಯಲು ಜನರು ಬರುವ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಬೇಕು. ಇದೇ ರೀತಿ ಬಾವಲಿಗಳು ಹೆಚ್ಚಾಗಿ ಕಂಡು ಬರುವ ಪ್ರದೇಶಗಳಲ್ಲಿ ವಿಶೇಷ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಬೀಡಾಡಿ ಹಂದಿಗಳನ್ನು ತೆರವುಗೊಳಿಸಿ: ಪ್ರಥಮ ಬಾರಿಗೆ 1999ರಲ್ಲಿ ಮಲೇಷಿಯಾ ಮತ್ತು ಸಿಂಗಾಪುರ ದೇಶಗಳಲ್ಲಿ ಹಂದಿಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ಹಂದಿಗಳ ಮೂಲಕ ಈ ವೈರಾಣು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಬೀಡಾಡಿ ಹಂದಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಸಬೇಕು. ಈ ಕುರಿತು ಸೂಕ್ತ ಕ್ರಮವನ್ನು ನಗರ ಸ್ಥಳೀಯ ಸಂಸ್ಥೆಗಳು ಕೂಡಲೇ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ಮಾಹಿತಿ ನೀಡಿ: ನಿಪ್ಹಾ ವೈರಸ್ ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣ ಮಾಹಿತಿ ನೀಡುವಂತೆ ಎಲ್ಲಾ ಆಸ್ಪತ್ರೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಈಗಾಗಲೇ ಪ್ರತ್ಯೇಕ ವೈರಲ್ ವಾರ್ಡ್ ಆರಂಭಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.

ರೋಗದ ಲಕ್ಷಣಗಳು: ನಿಫ್ಹಾ ವೈರಸ್ ಬಾಧಿತರಿಗೆ ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ ಪ್ರಥಮ ಹಂತದಲ್ಲಿ ಕಾಣಿಸಿಕೊಳ್ಳುವುದು. ಬಳಿಕ ಪ್ರಜ್ಞಾಹೀನತೆಗೆ ಒಳಗಾಗುವರು. ಅತಿಯಾದ ಜ್ವರ ಮೆದುಳಿಗೆ ವ್ಯಾಪಿಸುವುದು, ಮಾತುಗಳಲ್ಲಿ ತೊದಲುವಿಕೆ ಹಾಗೂ ಅಪಸ್ವರದ ಲಕ್ಷಣಗಳು ಕಾಣಿಸಿಕೊಳ್ಳುವುದು. ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದಲ್ಲಿ ಸಾವು ಸಂಭವಿಸಬಹುದು. ಸೋಂಕಿತ ದಿನದಿಂದ 4ರಿಂದ 18ದಿನಗಳಲ್ಲಿ ನಿಫ್ಹಾ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಮುತ್ತುರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ವೆಂಕಟೇಶ ಬಿ.ಸಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News