ಎಚ್‍ಡಿಕೆ ಪ್ರಮಾಣ ಕಾರ್ಯಕ್ರಮದಲ್ಲಿ ಮಮತಾ ಸಿಟ್ಟಾಗಿದ್ದು ಏಕೆ ?

Update: 2018-05-24 05:30 GMT

ಬೆಂಗಳೂರು,ಮೇ 24 : ಬುಧವಾರ ವಿಧಾನಸೌಧದ ಎದುರು ನಡೆದ ಎಚ್ ಡಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅದೊಂದು ಖುಷಿ ನೀಡುವ ಸಮಾರಂಭವಾಗಬೇಕಿದ್ದರೂ ಸಮಾರಂಭದ ಸ್ಥಳಕ್ಕೆ ಬಂದಿದ್ದ ಅವರು ಭಾರೀ ಸಿಟ್ಟುಗೊಡಂತೆ ಎಲ್ಲರಿಗೂ ಕಂಡಿತ್ತು.

ವರದಿಗಳ ಪ್ರಕಾರ ಮಮತಾಗೆ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯ ಪ್ರತ್ಯಕ್ಷ ಅನುಭವವಾಗಿತ್ತು. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೊರಟಿದ್ದ ಅವರಿದ್ದ ವಾಹನ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಮಮತಾ ಹಪಹಪಿಸುವಂತಾಗಿತ್ತು. ಕೊನೆಗೆ ಕೆಲವು ಮೀಟರ್ ದೂರದ ತನಕ ನಡೆದುಕೊಂಡೇ ಅವರು ಬರುವಂತಾಗಿತ್ತು. ಇದೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಿಟ್ಟಾಗಲು ಕಾರಣವಾಗಿತ್ತು.

ಸಮಾರಂಭದ ಸ್ಥಳ ಪ್ರವೇಶಿಸುತ್ತಿದ್ದಂತೆಯೇ ಮಮತಾ ತನಗಾದ ಕಹಿ ಅನುಭವದ ಬಗ್ಗೆ ಜೆಡಿಎಸ್ ಅಧ್ಯಕ್ಷ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ಎನ್‍ಸಿಪಿ ನಾಯಕ ಶರದ್ ಪವಾರ್ ಬಳಿ ಹೇಳಿಕೊಂಡರು. ಡಿಜಿಪಿ ನೀಲಮಣಿ ರಾಜು ಬಳಿಯೂ ಅವರು ದೂರಿಕೊಂಡರೆನ್ನಲಾಗಿದೆ. ಕೊನೆಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಆಕೆಯನ್ನು ಸಮಾಧಾನ ಪಡಿಸಿದ ನಂತರ ಮಮತಾ ವೇದಿಕೆಯಲ್ಲಿದ್ದ ಇತರ ನಾಯಕರೊಡನೆ ಉಭಯ ಕುಶಲೋಪರಿ ವಿಚಾರಿಸಿ ನಗುತ್ತಾ ಮಾತನಾಡುತ್ತಿರುವುದು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News