ಮಡಿಕೇರಿ: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ; ಮುಂಗಾರು ಬೆಳೆಯ ಸಿದ್ಧತೆಯಲ್ಲಿ ರೈತರು

Update: 2018-05-24 12:00 GMT

ಮಡಿಕೇರಿ,ಮೇ.24: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮವಾದ ಮಳೆ ಬಿದ್ದಿರುವುದರಿಂದ ಈ ಭಾಗದ ರೈತರು ಮುಂಗಾರು ಬೆಳೆ ಬೆಳೆಯಲು ಸಿದ್ಧತೆಯಲ್ಲಿ ತೊಡಿಗಿದ್ದಾರೆ.

ಕುಶಾಲನಗರ ಹೋಬಳಿ ಅರೆ ಮಲೆನಾಡು ಪ್ರದೇಶವಾಗಿದ್ದು, ಈಗಾಗಲೇ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಭೂಮಿಯನ್ನು ಹದಗೊಳಿಸಿ ಜೋಳ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಹೋಬಳಿ ವ್ಯಾಪ್ತಿಯ ಕೂಡಿಗೆ, ಕೂಡುಮಂಗಳೂರು, ಸೀಗೆಹೊಸೂರು, ಚಿಕ್ಕತ್ತೂರು-ದೊಡ್ಡತ್ತೂರು, ಹೆಬ್ಬಾಲೆ, ತೊರೆನೂರು, ಅಳುವಾರ ಆರನೇ ಹೊಸಕೋಟೆ, ಸಿದ್ಧಲಿಂಗಪುರ ವ್ಯಾಪ್ತಿಗಳಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಜೋಳ ಬಿತ್ತನೆ ಮಾಡುತ್ತಿದ್ದಾರೆ. ಪುರುಷರು ಉಳುಮೆ ಕಾರ್ಯದಲ್ಲಿ ಮಗ್ನರಾಗಿದ್ದರೆ, ರಾಸಾಯನಿಕ ಗೊಬ್ಬರನ್ನು ಸಾಲಿನಲ್ಲಿ ಹಾಕಿ ನಂತರ ಬಿತ್ತನೆ ಬೀಜವನ್ನು ಹಾಕುವುದರಲ್ಲಿ ಮಹಿಳಾ ರೈತರು ಕಾರ್ಯೋನ್ಮುಖರಾಗಿದ್ದಾರೆ.

ಈ ಸಾಲಿನಲ್ಲಿ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಮಳೆ ಬಿದ್ದ ಪರಿಣಾಮ ರೈತರು ಟ್ರ್ಯಾಕ್ಟರ್ ಮೂಲಕ ಭೂಮಿಯನ್ನು ಉಳುಮೆ ಮಾಡಿ ಒಂದು ತಿಂಗಳ ಕಾಲ ಬಿಟ್ಟು ಇದೀಗ ಜೋಳ ಬಿತ್ತನೆ ಮಾಡಲು ಹದಗೊಳಿಸಿದ್ದಾರೆ. ಈಗಾಗಲೇ ಸಹಕಾರ ಸಂಘಗಳಲ್ಲಿ ಸಾಕಷ್ಟು ದಾಸ್ತಾನಿರುವ ಜೋಳದ ತಳಿಗಳಾದ ಗಂಗಾ, ಕಾವೇರಿ ಸೇರಿದಂತೆ ವಿವಿಧ ಹೈಬ್ರಿಡ್ ತಳಿಗಳ ಬೀಜಗಳನ್ನು ಖರೀದಿಸಿ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಲಾರಂಭಿಸಿದ್ದಾರೆ. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲವಾಗುವಂತೆ ತಾಲೂಕಿನ ವಿವಿಧ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೃಷಿ ಇಲಾಖೆಯಿಂದ ಪರೀಕ್ಷಿಸಲ್ಪಟ್ಟ ಉತ್ತಮ ಬಿತ್ತನೆ ಬೀಜದ ತಳಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೃಷಿ ಸಹಾಯಕ ನಿರ್ದೇಶಕ ಹೆಚ್.ಎಸ್ ರಾಜಶೇಖರ್ ಅವರು, ರೈತರು ತಮ್ಮ ಜಮೀನಿನ ಮಣ್ಣನ್ನು ಕೂಡಿಗೆಯಲ್ಲಿರುವ ಜಿಲ್ಲೆಯ ಏಕೈಕ ಆಧುನಿಕ ಯಾಂತ್ರೀಕೃತ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಿ ಆರಂಭದಲ್ಲಿ ಮಣ್ಣಿಗೆ ಸಾವಯವ ಮತ್ತು ಎರೆಹುಳು ಗೊಬ್ಬರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಂತರ ಮಣ್ಣಿನ ಪೋಷಕಾಂಶದ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿಯಾಗಿ ರಾಸಾಯನಿಕ ಗೊಬ್ಬರವನ್ನು ಬಳಸಿ ಉತ್ತಮವಾದ ಬೆಳೆ ಬೆಳೆಯಬೇಕು ಎಂದು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News