ಹನೂರು: ಶಾಸಕ ಆರ್.ನರೇಂದ್ರರಿಗೆ ಸಚಿವ ಸ್ಥಾನ ನೀಡಲು ಆಗ್ರಹ

Update: 2018-05-26 11:48 GMT

ಹನೂರು,ಮೇ.26: ದಿ.ರಾಜೂಗೌಡರ ಕುಟಂಬ ಆರು ದಶಕಗಳಿಂದ ರಾಜಕೀಯದ ಮುಖಾಂತರ ಸೇವೆ ಸಲ್ಲಿಸಿದ್ದು, ಈ ಬಾರಿಯೂ ಸಹ ಆರ್.ನರೇಂದ್ರ ರಾಜೂಗೌಡರವರು ಜಯ ಸಾಧಿಸಿದ್ದು, ಅವರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ರವರು ಪತ್ರಿಕಾಗೋಷ್ಟಿ ಮುಖಾಂತರ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯರವರನ್ನು ಒತ್ತಾಯಿಸಿದ್ದಾರೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹನೂರು ಕ್ಷೇತ್ರ ಭೌಗೋಳಿಕವಾಗಿ ವಿಶಾಲತೆಯನ್ನು ಹೊಂದಿದ್ದು, ಕಾಂಡಂಚಿನ ಗುಡ್ಡ ಗಾಡು ಪ್ರದೇಶವನ್ನು ಹೊಂದಿದ್ದು, ತೀರಾ ಹಿಂದುಳಿದಿದೆ. ಶಾಸಕ ಆರ್.ನರೇಂದ್ರ ರಾಜೂಗೌಡ ಕಳೆದ  ಎರಡು ಅವಧಿಯಲ್ಲೂ ಹಲವು ಜನಪರ ಕಾರ್ಯಕ್ರಮಗಳನ್ನು ಮಾಡಿದ್ದು, ಈ ಅವಧಿಯಲ್ಲಿ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನ ಮಾನ ನೀಡಿದಲ್ಲಿ ಹಿಂದುಳಿದಿರುವ ನಮ್ಮ ಕ್ಷೇತ್ರ ಅಭಿವೃದ್ದಿ ಹೊಂದಲು ಸಾಧ್ಯ ಎಂದು ತಿಳಿಸಿದರು 

ಜಿಲ್ಲಾ ಎಸ್‍ಟಿ ಮೋರ್ಚಾ ಅಧ್ಯಕ್ಷ ಕೃಷ್ಣ ಮಾತನಾಡಿ, ಮಾಜಿ ಸಚಿವ ದಿ.ಮಹದೇವ ಪ್ರಸಾದ್‍ರವರು ಜಿಲ್ಲಾ ಉಸ್ತುವಾರಿಯಾಗಿದ್ದಾಗ ಚಾಮರಾಜನಗರ  ಜಿಲ್ಲೆಯ ನಾಲ್ಕು ಕ್ಷೇತ್ರವನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೂಂಡು ಮುನ್ನಡೆಸುತ್ತಿದ್ದರು. ಅವರ ನಿಧನದ ನಂತರ ಆ ಸ್ಥಾನ ತುಂಬಲು ಆರ್.ನರೇಂದ್ರರವರೇ ಸೂಕ್ತ ಎಂಬುವುದು ಜಿಲ್ಲಾ ಕಾರ್ಯಕರ್ತರ ಅಭಿಪ್ರಾಯ. ಹಾಗಾಗಿ ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಚಾಮುಲ್ ಅದ್ಯಕ್ಷ ಗರುಮಲ್ಲಪ್ಪ, ಜಿಪಂ ಅದ್ಯಕ್ಷೆ ಶಿವಮ್ಮ, ಸದಸ್ಯೆಯರಾದ ಲೇಖಾ ರವಿಕುಮಾರ್, ಮರಗದಮಣಿ, ತಾಪಂ ಅದ್ಯಕ್ಷ ರಾಜು, ಪಪಂ ಅದ್ಯಕ್ಷೆ ಮಮತಾ, ಉಪಾಧ್ಯಕ್ಷೆ ಬಸವರಾಜು ಮುಖಂಡರಾದ ದೇವರಾಜು, ಮಂಗಲ ಪುಟ್ಟರಾಜು, ಹನೂರು ಬ್ಲಾಕ್ ಅಧ್ಯಕ್ಷ ಕೆಂಪಯ್ಯ, ಟಿಪಿಎಂಸಿ ನಿರ್ದೇಶಕ ಮಾದೇಶ್, ನಂಜುಂಡೇಗೌಡ  ಹಾಗೂ ವಿವಿಧ ಗ್ರಾಮಗಳ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News