ಧರ್ಮ, ಭಾಷೆಗಳ ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನದ ಶ್ರೇಷ್ಟತೆಯಿದೆ: ಪ್ರೊ.ರವಿವರ್ಮ ಕುಮಾರ್

Update: 2018-05-26 15:38 GMT

ಧಾರವಾಡ,ಮೇ.26: ಸಂವಿಧಾನದ ಶ್ರೇಷ್ಠತೆ ಇರುವುದು ಅದರ ಧರ್ಮ, ಭಾಷೆ, ಜಾತಿಗಳ ಒಕ್ಕೂಟ ವ್ಯವಸ್ಥೆಯಲ್ಲಿ. ಇದು ರಾಜ್ಯಗಳ ಒಕ್ಕೂಟ ಅಲ್ಲ ಎಂದು ಪ್ರೊ.ರವಿವರ್ಮ ಕುಮಾರ್ ಹೇಳಿದರು.

ಧಾರವಾಡದ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನದಲ್ಲಿ ‘ಬಹುತ್ವ ಭಾರತ- ಇಂದು ನಾಳೆ’ ಎಂಬ ವಿಷಯದ ಕುರಿತಾಗಿ ಅವರು ಮಾತನಾಡಿದರು.

ನಿಮಗೆಲ್ಲಾ ಗೊತ್ತಿರುವ ಹಾಗೆ ಸಂವಿಧಾನದ ಶ್ರೇಷ್ಠತೆ ಇರುವುದು ಅದರ ಧರ್ಮಗಳ ಒಕ್ಕೂಟದಲ್ಲಿ. ಭಾಷೆಗಳ ಒಕ್ಕೂಟದ ವ್ಯವಸ್ಥೆಯಲ್ಲಿ ಮತ್ತು ಜಾತಿಗಳ ಒಕ್ಕೂಟದ ವ್ಯವಸ್ಥೆಯಲ್ಲಿ. ಇದು ರಾಜ್ಯಗಳ ಒಕ್ಕೂಟ ಅಲ್ಲ. ಇದೇ ಸಂವಿಧಾನದ ಭದ್ರ ಬುನಾದಿ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು '1950 ಜನವರಿ 26ರಂದು ಭಾರತದಲ್ಲಿ ಒಬ್ಬ ಮನುಷ್ಯನಿಗೆ ಒಂದು ಮತ-ಒಬ್ಬ ಮನುಷ್ಯನಿಗೆ ಒಂದು ಮೌಲ್ಯ ಎಂಬ ಕ್ರಾಂತಿಕಾರಕ ಬದಲಾವಣೆ ಬಂದಿದೆ. ಇದೇ ಸಮಾನತೆ. ಇವತ್ತು ನಾವು ರಾಜಕೀಯವಾಗಿ ಸಮಾನತೆಯನ್ನು ಸಾಧಿಸಿದ್ದೇವೆ. ಈ ರಾಜಕೀಯ ಸಮಾನತೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸಮಾನತೆಯನ್ನು ತೊಲಗಿಸಿ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ನೀಡದೇ ಹೋದರೆ, ಬಹಳ ಕಷ್ಟ ಪಟ್ಟು ಕಟ್ಟಿದ ಈ ಸೌಧವನ್ನು ಜನರೇ ಧ್ವಂಸಗೊಳಿಸುತ್ತಾರೆ’ ಎಂದು ಹೇಳಿದ್ದರು. ಇಂತಹ ಸ್ಥಿತಿ ಈಗ ಮತ್ತೆ ಬಂದಿದೆ. ಈ ಮಾತನ್ನು ನಾವು ನೆನಪು ಮಾಡಿಕೊಳ್ಳಬೇಕು. ಈ ಸಂವಿಧಾನ ಒಂದು ಸಾಮಾಜಿಕ-ಆರ್ಥಿಕ ಗ್ರಂಥ ಎಂದು ಹೇಳಿದರು..

ಬೇರೆ ಎಲ್ಲಾ ದೇಶದ ಸಂವಿಧಾನ ಸ್ವಾತಂತ್ರ, ಸಮಾನತೆ ಭ್ರಾತೃತ್ವವನ್ನು ಹೇಳುತ್ತದೆ. ಆದರೆ ಭಾರತದ ಸಂವಿಧಾನ ಎಲ್ಲದಕ್ಕೂ ಮುನ್ನ ನ್ಯಾಯದ ಬಗ್ಗೆ ಮಾತನಾಡುತ್ತದೆ. ಈ ದೇಶದ ಎಲ್ಲಾ ಸ್ಥರಗಳಲ್ಲಿಯೂ ಜಾತಿಯ ಅಸಮಾನತೆ ತಾಂಡವವಾಡುತ್ತಿದೆ. ಈ ದೇಶದಲ್ಲಿ 'ಒಂದು ಮನುಷ್ಯ ಒಂದು ಮೌಲ್ಯ' ಎಂದು ಬಂತು. ಆದರೆ ಅದರಿಂದ ಸಮಾನತೆ ಎಂಬ ಬಹಳ ಉದಾತ್ತವಾದ ಬದಲಾವಣೆಯತ್ತ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ಸಾಮಾಜಿಕ ಅಸಮಾನತೆಯನ್ನು ಹರಡದಂತೆ ತಡೆಯಲು ಸಾಮಾಜಿಕ ನ್ಯಾಯವನ್ನು ಪ್ರತಿಸ್ಠಾಪಿಸಲು ಮೀಸಲಾತಿಯನ್ನು ತರಬೇಕಾಯಿತು ಎಂದು ಹೇಳಿದರು.

ಬಹುತ್ವವನ್ನು ಉಳಿಸಿಕೊಳ್ಳಲು ಇರುವ ಸೂತ್ರವೆಂದರೆ ಬೇರೆ ಬೇರೆ ದೇಶಗಳಲ್ಲಿ ಅಸಮಾನತೆಯನ್ನು ತಗ್ಗಿಸಲು ಬಳಸಿರುವ ಮೀಸಲಾತಿಯನ್ನು ಇಲ್ಲಿ ಉಳಿಸಿಕೊಳ್ಳುವುದು. ಪೂರೋಹಿತ ಶಾಹಿಗಳಿಗೆ ಹಲವಾರು ಹುದ್ದೆಗಳಲ್ಲಿ ಶೇ. ನೂರರಷ್ಟು ಮೀಸಲಾತಿ ಇದೆ. ಆದರೆ ಅದನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ. ಮೀಸಲಾತಿಯೆಂದರೆ ಒಬ್ಬರ ಹೊಟ್ಟೆ ಮೇಲೆ ಹೊಡೆದು ಇನ್ನೊಬ್ಬರ ಹೊಟ್ಟೆ ತುಂಬಿಸರು ಇರುವುದು ಅಲ್ಲ. ಬದಲಿಗೆ ಅದು ಒಂದು ಜಾತಿಗೆ ಸಲ್ಲಬೇಕಾದ ನ್ಯಾಯಯುತವಾದ ಸವಲತ್ತನ್ನು ರಕ್ಷಣೆ ಮಾಡಲು ಇರುವ ಪರಿಕರ. ಸಂವಿಧಾನದ ನಾಲ್ಕನೆ ಭಾಗವಾಗಿರುವ ‘ರಾಜ್ಯ ನಿರ್ದೇಶನ ತತ್ವಗಳ'ನ್ನು ನಾವು ಉಳಿಸಿಕೊಳ್ಳಬೇಕು. ಹಸಿವಿನ ನಿವಾರಣೆಯಾಗಬೇಕು. ಅಗತ್ಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಇಟ್ಟುಕೊಳ್ಳುವಂತಿಲ್ಲ.

ಬಾಲಕಾರ್ಮಿಕ ಪದ್ಧತಿ ರದ್ದಾಗಬೇಕು. ಇಂತಹ ಹತ್ತು ಹಲವು ಕ್ರಾಂತಿಕಾರಕ ಅಂಶಗಳನ್ನು ಇದು ಹೇಳುತ್ತದೆ. ಹಾಗಾಗಿ ಸಿದ್ದು ಸರ್ಕಾರ ಇರಲಿ, ಮೋದಿ ಅಥವಾ ಯಡಿಯೂರಪ್ಪ ಸರ್ಕಾರ ಯಾವುದೇ ಇರಲಿ. ರಾಜ್ಯ ನಿರ್ದೇಶನ ತತ್ವವನ್ನು ಜಾರಿಮಾಡಬೇಕು. ಆದರೆ ಇಂದು ಅಂಬಾನಿ ಆದಾನಿ ಅವರ ಆಸ್ತಿ ಪಾಸ್ತಿ ಎಷ್ಟಿದೆ ಎಂದು ಇಡೀ ದೇಶಕ್ಕೆ ಗೊತ್ತಿರುವ ಅಂಕಿಅಂಶವಾಗಿದೆ. ಹೀಗೆ ಯಾಕಾಯಿತು? ಯಾಕೆಂದರೆ ಅಧಿಕಾರಕ್ಕೆ ಬರುವ ಯಾವ ರಾಜಕಾರಣಿಯೂ ಸಂವಿಧಾನವನ್ನು ಅನುಷ್ಠಾನಕ್ಕೆ ಕೆಲಸ ಮಾಡುತ್ತಿಲ್ಲ ಎಂದು ವಿಷಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News