ಪ್ರಧಾನಿ, ಸಚಿವರು ಕಾರ್ಪೊರೇಟ್ ಕಂಪೆನಿಗಳ ಸಿಇಒಗಳು: ಡಾ.ಸಿದ್ದನಗೌಡ ಪಾಟೀಲ್ ಆರೋಪ

Update: 2018-05-27 06:28 GMT

ಧಾರವಾಡ, ಮೇ 27: ನಮ್ಮ ದೇಶದ ಪ್ರಧಾನಿ, ಸಚಿವರು ಕಾರ್ಪೊರೇಟ್ ಕಂಪೆನಿಗಳ ಸಿಇಒಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಡಾ.ಸಿದ್ದನಗೌಡ ಪಾಟೀಲ್ ಆಪಾದಿಸಿದ್ದಾರೆ.

ಲಡಾಯಿ ಪ್ರಕಾಶನ ಗದಗ, ಚಿತ್ತಾರ ಬಳಗ ಧಾರವಾಡ, ಕವಿ ಪ್ರಕಾಶನ ಇವುಗಳ ಸಂಯುಕ್ತಾಶ್ರಯದಲ್ಲಿ ಧಾರವಾಡದ ಪಾಪು ಸಭಾಭವನದಲ್ಲಿ ನಡೆಯುತ್ತಿರುವ ಎರಡು ದಿನಗಳ 5ನೇ ಮೇ ಸಾಹಿತ್ಯ ಮೇಳದಲ್ಲಿ ‘ಪ್ರಭುತ್ವ ರೈತ ಚಳವಳಿಗಳು’ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.
   ಮೊದಲೆಲ್ಲ ಕೃಷಿ ಅನ್ನೋದು ಆಹಾರ ಧಾನ್ಯಕ್ಕಾಗಿ, ವ್ಯಾಪಾರಕ್ಕಾಗಿ ಕೃಷಿ ಅಲ್ಲ ಎಂಬ ಮನೋಭಾವ ಜನರಲ್ಲಿತ್ತು. ಆಹಾರಕ್ಕಾಗಿ ಭೂಮಿ, ಜಾನುವಾರುಗಳಿಗಾಗಿ ಭೂಮಿ, ನಾಡಿನ ಉಪಯೋಗಕ್ಕಾಗಿ ಭೂಮಿ ಎಂದು ವಿಂಗಡಿಸಿರುವ ಗಾಂಧೀಜಿಯವರು ಕಟ್ಟ ಕಡೆಯದಾಗಿ ಅನಿವಾರ್ಯವಾದರೆ ವಾಣಿಜ್ಯ ಉದ್ದೇಶಗಳಿಗಾಗಿ ಭೂಮಿ ಬಳಸಿಕೊಳ್ಳಬಹುದು ಎನ್ನುತ್ತಾರೆ. ಆದರೆ ನಾವಿಂದು ಅದನ್ನು ಮರೆತುಬಿಟ್ಟಿದ್ದೇವೆ ಎಂದು ಅವರು ಡಾ.ಸಿದ್ದನಗೌಡ ನುಡಿದರು.
ಕಮ್ಯುನಿಸ್ಟರು ಆಡಳಿತಕ್ಕೆ ಬಂದಾಗ ಮಾಡುತ್ತಿದ್ದ ಮೊದಲ ಕೆಲಸವೆಂದರೆ ಯುದ್ಧಗಳನ್ನು ನಿಯಂತ್ರಿಸುವುದು ಮತ್ತು 2ನೆಯದ್ದು ಭೂಮಿಯನ್ನು ರಾಷ್ಟ್ರೀಕರಣಗೊಳಿಸುವುದು. ಭೂಮಿ ಎಲ್ಲ ಜನರಿಗೆ ಸಿಗಬೇಕು. ದೇಶದಲ್ಲಿರುವ ಎಲ್ಲರಿಗೂ ಭೂಮಿ ಸಿಗಬೇಕು ಎಂಬುದು ಅವರ ಉದ್ದೇಶವಾಗಿತ್ತು ಎಂದು ಅವರು ಹೇಳಿದರು.
  
ಕಯ್ಯೂರು ರೈತ ಚಳವಳಿ, ಕಾಗೋಡು ಸತ್ಯಾಗ್ರಹ, 1960ರಲ್ಲಿ ಸಂದರ್ಭದಲ್ಲಿ ಜಾರಿಗೆ ಬಂದ ಭೂ ಸುಧಾರಣೆ ಕಾನೂನು, ತೆಲಂಗಾಣ ರೈತ ಚಳವಳಿಗಳು ಇತ್ಯಾದಿಗಳು ಭೂಮಿಯ ಬಹುತ್ವಕ್ಕಾಗಿ ನಡೆದ ಚಳವಳಿಗಳಾಗಿವೆ.ಮೊದಲೆಲ್ಲ ಚಳವಳಿಗಳು ಭೂಮಿಯ ಹಕ್ಕಿಗಾಗಿ ನಡೆದರೆ, ನಂತರದಲ್ಲಿ ರೈತ ಸಂಘದ ನಜುಂಡಸ್ವಾಮಿ ನೇತೃತ್ವದಲ್ಲಿ ರೈತ ಸಂಸ್ಕೃತಿ ಹಾಗೂ ಇತರ ಹಕ್ಕುಗಳಿಗಾಗಿ ಚಳವಳಿಗಳು ನಡೆದವು ಎಂದರು. ಕಾರ್ಪೊರೇಟ್ ಕಂಪೆನಿಗಳು ತಮ್ಮ ಮಾರ್ಟ್‌ಗಳಲ್ಲಿ ಕೊತ್ತಂಬರಿ ಸೊಪ್ಪನ್ನೂ ಮಾರಾಟ ಮಾಡುತ್ತಿವೆ. ಈ ಕಂಪೆನಿಗಳ ಜೊತೆ ಸಣ್ಣ ರೈತರು ಸ್ಪರ್ಧೆ ಮಾಡಬೇಕಾಗಿದೆ. ಕೃಷಿ ಮಾರುಕಟ್ಟೆ ವ್ಯವಸ್ಥೆ ನಮ್ಮ ರೈತರನ್ನು ಬೀದಿ ತಳ್ಳಿದೆ ಎಂದವರು ವಿಷಾದ ವ್ಯಕ್ತಪಡಿಸಿದರು.
ಕಾರ್ಪೊರೇಟ್ ಕಂಪೆನಿಗಳು ಸಾಕಷ್ಟು ಮೊತ್ತದ ಆಮಿಷವೊಡ್ಡಿ ಭೂಮಿಯನ್ನು ಖರೀದಿಸುತ್ತವೆ ಅಥವಾ ಹತ್ತು ಹದಿನೈದು ವರ್ಷಗಳವರೆಗೆ ಗುತ್ತಿಗೆ ಪಡೆಯುತ್ತವೆ. ಅತಿಯಾಗಿ ಕೀಟನಾಶಕಗಳನ್ನು ಬಳಸಿ ಆ ಭೂಮಿಯನ್ನು ಹಾಳು ಮಾಡುತ್ತಿವೆ. ಮುಂದೆ ಆ ಜಮೀನು ಬಿಟ್ಟುಕೊಟ್ಟರೂ ಅದರಲ್ಲಿ ಆಹಾರ ಧಾನ್ಯಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ ಎಂದು ಡಾ.ಸಿದ್ದನಗೌಡ ಪಾಟೀಲ್ ತಿಳಿಸಿದರು.
ಕೋಕೋ ಕೋಲಾ, ಪೆಪ್ಸಿ ಕುಡಿಯಿರಿ ಎನ್ನುವ ಸಿನೆಮಾ ಮತ್ತು ಕ್ರೀಡಾಲೋಕಗಳ ತಾರೆಯರು ನಮ್ಮ ಸಾಂಸ್ಕೃತಿಕ ಜಗತ್ತಿನ ರಾಯಭಾರಿಗಳಾಗಿದ್ದಾರೆ. ನಮ್ಮ ರೈತ ಬೆಳೆದ ಆಹಾರವನ್ನು ಇವರ್ಯಾರು ಪ್ರಚಾರ ಮಾಡುವುದಿಲ್ಲ. ಒಟ್ಟಿನಲ್ಲಿ ಎಲ್ಲ ರೈತ ಸಂಘಟನೆಗಳು ಒಟ್ಟಾಗಿ ಹೋರಾಟ ಮಾಡದಿದ್ದರೆ ಇಡಿ ಭೂಮಿ ಕಾರ್ಪೊರೇಟ್ ಕಂಪೆನಿಗಳ ಪಾಲಾಗಲಿದೆ. ರೈತರು ಇಂದು ಅಪಾಯದ ಸ್ಥಿತಿಯಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
 ಹೋರಾಟಗಾರ ಬಿ.ಎಸ್.ಸೊಪ್ಪಿನ ಮಾತನಾಡಿದರು. ಚೆನ್ನಪ್ಪಅಂಗಡಿ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News