ಬಹುತ್ವವನ್ನು ಪುನರ್ ರಚಿಸಬೇಕಿದೆ: ಪ್ರೊ.ಎಚ್.ಎಸ್.ಶಿವಪ್ರಕಾಶ್

Update: 2018-05-27 08:08 GMT

ಧಾರವಾಡ, ಮೇ 27: ಬಹುತ್ವ ಮತ್ತು ಏಕತ್ವವನ್ನು ನಾವು ಇಂದು ಪುನರ್ ರಚಿಸಬೇಕಿದೆ ಎಂದು ಹಿರಿಯ ಕವಿ, ಸಾಹಿತಿ ಪ್ರೊ.ಎಚ್.ಎಸ್.ಶಿವಪ್ರಕಾಶ್  ಅಭಿಪ್ರಾಯಪಟ್ಟಿದ್ದಾರೆ.

ಲಡಾಯಿ ಪ್ರಕಾಶನ ಗದಗ, ಚಿತ್ತಾರ ಬಳಗ ಧಾರವಾಡ, ಕವಿ ಪ್ರಕಾಶನ ಇವುಗಳ ಸಂಯುಕ್ತಾಶ್ರಯದಲ್ಲಿ ಧಾರವಾಡದ ಪಾಪು ಸಭಾಭವನದಲ್ಲಿ ನಡೆಯುತ್ತಿರುವ '5ನೇ ಮೇ ಸಾಹಿತ್ಯ ಮೇಳ'ದಲ್ಲಿ ರವಿವಾರ 'ಬಹುಧರ್ಮ ಭಾರತ' ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

ನಾವು ಸಮಾನತೆ ಮತ್ತು ಸಹಬಾಳ್ವೆಯನ್ನು ಮರೆತಿದ್ದೇವೆ. ಪ್ರಭುತ್ವ ನಿರಸನ ಸಮಾಜ ಮಾರ್ಕ್ಸ್ ಹೇಳಿದ್ದು. ಆದರೆ ಈಗ ಕಾರ್ಪೊರೇಟ್ ಶಕ್ತಿಗಳು ನಮ್ಮನ್ನು ಆಳುತ್ತಿವೆ. ನಾವೀಗ ಬಹುತ್ವ ಮತ್ತು ಏಕತ್ವವನ್ನು ಪುನರ್ ರಚಿಸಬೇಕಿದೆ ಎಂದು ಎಂದು ಅವರು ಹೇಳಿದರು.

ಧರ್ಮದ ಚರ್ಚೆ ಎರಡು ಸಾವಿರ ವರ್ಷಗಳಿಂದ ನಡೆದಿದೆ. ಹಿಂದೂ ಧರ್ಮ ಅನ್ನೋದು ಈ ಮೊದಲು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರಲಿಲ್ಲ. ಬ್ರಿಟಿಷರು ಇಲ್ಲಿಗೆ ಬಂದಾಗ ಅವರಿಗೆ ಕ್ರಿಶ್ಚಿಯನ್ ಧರ್ಮ ಇದ್ದಂತೆ ನಮಗೂ ಧರ್ಮ ಇರಲಿ ಎಂದು ಹಿಂದೂ ಧರ್ಮವನ್ನು ಚಾಲ್ತಿಗೆ ತರಲಾಯಿತು. ಈ ಮೊದಲು ಹಿಂದೂ ಅನ್ನೋದು ಧಾರ್ಮಿಕ ಹಿನ್ನೆಲೆಯಲ್ಲಿ ಬಳಸಲಾಗುತ್ತಿರಲಿಲ್ಲ. ಪ್ರದೇಶಕ್ಕೆ ಸಂಬಂಧಪಟ್ಟಂತೆ ಬಳಕೆಯಾಗುತ್ತಿತ್ತು ಎಂದು ಪ್ರೊ.ಎಚ್.ಎಸ್.ಶಿವಪ್ರಕಾಶ್ ತಿಳಿಸಿದರು.

ಎಷ್ಟು ಪಂಥಗಳಿವೆಯೋ ಅಷ್ಟು ಮತಗಳಿವೆ. ನಾನು ಬ್ರಹ್ಮಸೂತ್ರವನ್ನು ಓದಿಲ್ಲ. ನಾನು ಹೆಚ್ಚಾಗಿ ವೈದಿಕೇತರ ಪರಂಪರೆಗಳನ್ನು. ಶರಣ, ನಾಥ ಶಾಖ್ಯ, ಸೂಫಿ, ಪಂಥಗಳನ್ನು ಅಧ್ಯಯನ ಮಾಡಿದ್ದೇನೆ. ಇವುಗಳ್ಯಾವವು ಏಕತ್ವವನ್ನು ಹೇರುವುದಿಲ್ಲ. ಮಧ್ಯಯುಗದಲ್ಲಿ ನಡೆದ, ಭಕ್ತಿ, ಶಾಖ್ಯ, ದಾಸ, ನಾಥ, ಶರಣ ಇವೆಲ್ಲವೂ ಕೂಡ ಅನೇಕತೆಯಲ್ಲಿ ಏಕತೆಯನ್ನು ಹುಡುಕುವ ಪಂಥಗಳಾಗಿವೆ. ಜೈನರಲ್ಲಿ ಅನೇಕಾಂತವಾದ ಅನ್ನೋ ಶಬ್ದ ಬಳಕೆಯಲ್ಲಿದೆ. ಅವರವರ ಅನುಭವಗಳಿಗೆ ತಕ್ಕಂತೆ ಅವರ ಧರ್ಮ ರೂಪಗೊಳ್ಳುತ್ತದೆ ಎಂದು ಪ್ರೊ.ಎಚ್.ಎಸ್.ಶಿವಪ್ರಕಾಶ್  ಹೇಳಿದರು.

ಲಿಂಗಾಯತ ಆತ್ಮಸೂಚಕ, ವೀರಶೈವ ಆಚರಣೆಯ ಸೂಚಕ. ಶರಣ ಸಮುದಾಯ ಸೂಚಕ. ಶರಣ ಎಂಬ ವಚನಗಳಲ್ಲಿ ನಾಲ್ಕು ಸಾವಿರ ಸಲ ಬಳಕೆಯಾಗಿದೆ. ಹಿಂದೂ ಎಂಬ ಪದ ಒಮ್ಮೆಯೂ ಬಳಕೆಯಾಗಿಲ್ಲ. ಹಾಗಾಗಿ ಅಲ್ಲಿ ಹಿಂದೂ ಧರ್ಮದ ಪುನರುತ್ಥಾನದ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಹೇಳಿದರು.

40 ವರ್ಷಗಳ ಅವಧಿಯಲ್ಲಿ ವಚನಗಳು ರಚನೆಯಾದವು. ಹಲವು ಬಗೆಯ ವಚನಕಾರರು, ಹಲವು ಸಮುದಾಯಗಳ, ಅನೇಕ ವೃತ್ತಿಯ ಜನ ಆಗ ಬರೆದರು. ಈ ಬಗೆಯ ಅಕ್ಷರ ಲೋಕಕ್ಕೆ ಅನೇಕ ಸಮುದಾಯಗಳು ತೆರೆದುಕೊಂಡದ್ದು ಜಗತ್ತಿನ ಯಾವ ದೇಶದ, ಯಾವ  ಬಗೆಯ ಸಾಹಿತ್ಯದಲ್ಲೂ ನಡೆದಿಲ್ಲ. ಅದು ಕರ್ನಾಟಕದ ನೆಲದಲ್ಲಿ ನಡೆಯಿತು. ವಚನ ಸಂಗ್ರಹದಲ್ಲಿ ಅಸಮಾನತೆಗಳು ಕೆಲಸ ಮಾಡಿವೆ. ಅಲ್ಲಮ ಕೇಂದ್ರಿತ ಮತ್ತು ಬಸವ ಕೇಂದ್ರಿತ ಸಂಪಾದನೆಗಳು ನಡೆದವು. ಅಲ್ಲಿನ ಮಹಿಳಾ ಬರಹಗಾರ್ತಿಯರನ್ನು ಕಡೆಗಣಿಸಲಾಯಿತು ಎಂದರು.

ಇತ್ತೀಚಿನ ಚುನಾವಣೆಯಲ್ಲಿ ಕೆಲಸ ಮಾಡಿದ್ದು ಹಿಂದುತ್ವವಲ್ಲ ಅಥವಾ ಸೆಕ್ಯುಲರವಾದವೂ ಅಲ್ಲ. ಜಾತಿ-ಉಪಜಾತಿಗಳು ಕೆಲಸ ಮಾಡಿವೆ. ಜಾತಿಗಿಂತ ಉಪಜಾತಿಗಳಾಗಿ ಗುರುತಿಸಿಕೊಳ್ಳುವ ಯತ್ನ ನಡೆದಿದೆ ಎಂದು ಪ್ರೊ.ಎಚ್.ಎಸ್.ಶಿವಪ್ರಕಾಶ್ ನುಡಿದರು.

 ಗೋಷ್ಠಿಯ ಕೊನೆಯಲ್ಲಿ ಸಭಿಕರಿಂದ ವಿಚಾರ ಮಂಥನ ಸಂವಾದ ಚರ್ಚೆ ನಡೆಯಿತು. ಸಾಹಿತ್ಯ ಲೋಕದ ದಿಗ್ಗಜರಾದ ಸಾಹಿತಿ ಚಂಪಾ, ಎಸ್.ಜಿ. ಸಿದ್ದರಾಮಯ್ಯ, ರಂಝಾನ್ ದರ್ಗಾ, ಕಾಳೆಗೌಡ ನಾಗವಾರ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.


- ಚಿತ್ರಗಳು: ಐವನ್ ಡಿಸಿಲ್ವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News