ಸಾಹಿತ್ಯ, ಸಂಸ್ಕೃತಿಯ ಒಡನಾಟ ಅಗತ್ಯ: ದಿನೇಶ್ ಅಮೀನ್ ಮಟ್ಟು

Update: 2018-05-28 09:02 GMT

ಧಾರವಾಡ, ಮೇ 27: ಯಾರು ಸಾಹಿತ್ಯ, ಸಂಸ್ಕೃತಿಯೊಂದಿಗೆ ಒಡನಾಟ ಹೊಂದಿರುವುದಿಲ್ಲವೋ ಅವರು ಪರಿಪೂರ್ಣ ಮನುಷ್ಯರಾಗುವುದಿಲ್ಲ. ಯಾರು ಸಾಹಿತ್ಯ, ಸಂಸ್ಕೃತಿಯ ಒಡನಾಟದಲ್ಲಿರುತ್ತಾರೋ, ಅವರು ಸಂಪೂರ್ಣ ಕೆಟ್ಟವರಾಗಲೂ ಸಾಧ್ಯವಿಲ್ಲ. ವಾಜಪೇಯಿ ಸಾಹಿತ್ಯದ ಒಡನಾಟದಲ್ಲಿದ್ದುದರಿಂದ ಅವರು ಮೋದಿಯಷ್ಟು ಕೆಟ್ಟವರಾಗಿರಲೂ ಸಾಧ್ಯವಾಗಲಿಲ್ಲ ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

ಲಡಾಯಿ ಪ್ರಕಾಶನ ಗದಗ, ಚಿತ್ತಾರ ಬಳಗ ಧಾರವಾಡ, ಕವಿ ಪ್ರಕಾಶನ ಇವುಗಳ ಸಂಯುಕ್ತಾಶ್ರಯದಲ್ಲಿ ಧಾರವಾಡದ ಪಾಪು ಸಭಾಭವನದಲ್ಲಿ ನಡೆದ 5ನೇ ಮೇ ಸಾಹಿತ್ಯ ಮೇಳದಲ್ಲಿ ರವಿವಾರ ನಡೆದ ಸಮಕಾಲೀನ ಚಳವಳಿಗಳು- ವಿದ್ಯಾರ್ಥಿ ನೋಟ ವಿಷಯದ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

1977ರಲ್ಲಿ ಅಹಮದಾಬಾದ್ ನ ಒಂದು ವಿದ್ಯಾರ್ಥಿ ನಿಲಯದಲ್ಲಿ ಹುಟ್ಟಿದ ಚಳವಳಿ ಬೃಹತ್ತಾಗಿ ಬೆಳೆದು ಇಂದಿರಾಗಾಂಧಿ ಪತನಕ್ಕೆ ಕಾರಣವಾಗಿತ್ತು. ಅದು ವಿದ್ಯಾರ್ಥಿ ಚಳುವಳಿಯ ಶಕ್ತಿ. 1983ರಲ್ಲಿ ರಾಜಕೀಯ ಬದಲಾವಣೆಗೆ ಕಾರಣವಾಯಿತು. ಅದು ಕೇವಲ ಒಂದು ಚಳವಳಿಯಿಂದ ಶುರುವಾಗಿಲ್ಲ. ರೈತ ಚಳವಳಿ, ಭಾಷಾ ಚಳವಳಿ, ದಲಿತ ಚಳವಳಿ, ರಾಜಕೀಯ, ಚುನಾವಣೆಯ ಬಹಿಷ್ಕಾರದಿಂದ ಹುಟ್ಟಿಕೊಂಡ ಚಳವಳಿ. ಇದನ್ನೆಲ್ಲಾ ನಮ್ಮ ವಿದ್ಯಾರ್ಥಿಗಳು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅಂದು ಮಂಡಲ್ ವರದಿಯನ್ನು ವಿರೋಧಿಸಿದ್ದು ಬಹುತೇಕ ದಲಿತರು. ಅದರಿಂದ ಅವರಿಗೆ ಲಾಭವೂ ಇರಲಿಲ್ಲ, ನಷ್ಟವೂ ಇರಲಿಲ್ಲ ಎಂದು ಅಮೀನ್ ಮಟ್ಟು ತಿಳಿಸಿದರು.

ಸಾಹಿತ್ಯದಲ್ಲಿ ತೊಡಗಿಸಿಕೊಂಡವರು ಮಾನವೀಯ ಮೌಲ್ಯಗಳನ್ನು ಹೊಂದಿರುತ್ತಾರೆ. ಭಕ್ತ ಗಣ ಜೊತೆ ಮಾತಾಡೋದು ಕಷ್ಟ. ಏಕೆಂದರೆ ಅವರು ಸಾಹಿತ್ಯವನ್ನು, ಇತಿಹಾಸವನ್ನು ಓದಿದವರಲ್ಲ. ಇವರಿಗೆ ಸರಕಾರದ ಬಗ್ಗೆ ಮಾತಾನಾಡುವುದು ಇಷ್ಟವಿಲ್ಲ. ಆದರೆ ಸರ್ವಾಧಿಕಾರದ ಮೇಲೆ ನಂಬಿಕೆಯಿದೆ. ಪೆಟ್ರೋಲ್ ಬೆಲೆ ಹೆಚ್ಚಾದರೂ ಅದನ್ನು ಬೆಂಬಲಿಸುವ ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿರುವ ಸಮಸ್ಯೆ ಏನೆಂದರೆ ಅವರು ಇತಿಹಾಸವನ್ನು ಓದುವುದಿಲ್ಲ. ರೋಹಿತ್ ವೇಮುಲಾ ಅವರದ್ದು ಆತ್ಮಹತ್ಯೆ ಅಲ್ಲ, ಆತ್ಮಾಹುತಿ ಎನ್ನಬೇಕು. ಏಕೆಂದರೆ ಆದಾದ ನಂತರ ವಿದ್ಯಾರ್ಥಿ ಚಳುವಳಿ ಬೆಳೆಯಿತು. ವಿದ್ಯಾರ್ಥಿ ಚಳವಳಿ ಒಂದು ಪ್ರಕ್ರಿಯೆ ಆಗಬೇಕು. ಸಂಘಟನೆಯ ಆಯ್ಕೆಯಲ್ಲಿ ವಿದ್ಯಾರ್ಥಿಗಳು ಎಡವುತ್ತಿದ್ದಾರೆ. ಅದಾಗಬಾರದು. ಆಯ್ಕೆಯಲ್ಲಿ ಎಚ್ಚರ ವಹಿಸಬೇಕಾಗಿದೆ ಎಂದು ಅಮೀನ್  ಮಟ್ಟು ತಿಳಿಸಿದರು.

ಸಮಾರಂಭದಲ್ಲಿ ಜೆಎನ್ ಯು ವಿದ್ಯಾರ್ಥಿ ಅನಿರ್ಬನ್ ಭಟ್ಟಾಚಾರ್ಯ, ವಿದ್ಯಾರ್ಥಿ ಮುಖಂಡ ಸರೋವರ ಬೆಂಕಿಕೆರೆ ಮಾತನಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News