ಪ್ರತ್ಯೇಕ ಪ್ರಕರಣ: ಚಿಕ್ಕಮಗಳೂರಿನಲ್ಲಿ ವಿದ್ಯುತ್ ಆಘಾತಕ್ಕೆ ಇಬ್ಬರು ರೈತರು ಬಲಿ

Update: 2018-05-29 09:49 GMT

ಚಿಕ್ಕಮಗಳೂರು, ಮೇ 29: ಜಿಲ್ಲೆಯಲ್ಲಿ ವಿದ್ಯುತ್ ಅವಘಡಕ್ಕೆ ಒಳಗಾಗಿ ಇಬ್ಬರು ರೈತರು ಮೃತಪಟ್ಟ ಘಟನೆ ವರದಿಯಾಗಿದೆ.

ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ಆಕಸ್ಮಿಕವಾಗಿ ಬೇಲಿ ತಂತಿಗೆ ಹರಿದ ವಿದ್ಯುತ್ ಸ್ಪರ್ಶಕ್ಕೊಳಗಾಗಿ ರೈತ ಹಾಗೂ ಹಸುವೊಂದು ಮೃತಪಟ್ಟಿದೆ.

ಮೃತರನ್ನು ಕಡೂರು ತಾಲೂಕಿನ ಎಸ್.ಬಿದರೆ ನಿವಾಸಿ ರಮೇಶ್(48) ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ ಸುರಿದ ಭಾರೀ ಮಳೆ ಕಾರಣ ತಂತಿ ಬೇಲಿಗೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದೆ. ಈ ತಂತಿಯ ಸ್ಪರ್ಶಕ್ಕೊಳಗಾಗಿ ನರಳುತ್ತಿದ್ದ ಹಸುವನ್ನು ರಕ್ಷಿಸುವ ಯತ್ನದಲ್ಲಿ ರಮೇಶ್ ಕೂಡಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ದುರಂತಕ್ಕೆ ಮೆಸ್ಕಾಂ ನಿರ್ಲಕ್ಷ ಕಾರಣ ಎಂದು ಆರೋಪಿಸಿದ ಸ್ಥಳೀಯರು ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಡಾನೆ ಗ್ರಾಮ ಪಂಪ್‌ಸೆಟ್‌ನಲ್ಲಿ ವಿದ್ಯುತ್ ಅವಘಡಕ್ಕೆ ರೈತ ಬಲಿ
ಪಂಪ್‌ಸೆಟ್ ಸ್ವಿಚ್ ಹಾಕುವ ವೇಳೆ ವಿದ್ಯುತ್ ಆಘಾತಕ್ಕೊಳಗಾಗಿ ರೈತನೋರ್ವ ಮೃತಪಟ್ಟ ಘಟನೆ ಶೃಂಗೇರಿ ತಾಲೂಕಿನ ದೊಡಾನೆ ಗ್ರಾಮದಲ್ಲಿ ನಡೆದಿದೆ.

ದೊಡಾನೆ ನಿವಾಸಿ ಡಿ.ಎಸ್.ಶಿವಶಂಕರ್(59) ಮೃತಪಟ್ಟವರಾಗಿದ್ದಾರೆ. ಅವರು ಪಂಪ್‌ಸೆಟ್‌ ಚಾಲನೆ ಮಾಡಲು ಹೋದಾಗ ಈ ದುರಂತ ಸಂಭವಿಸಿದೆ.

ಈ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News