ಐಎಎಸ್ ತೇರ್ಗಡೆ ಹೊಂದಿ ಜನಸೇವೆ ಮಾಡುವ ಗುರಿ

Update: 2018-05-31 11:23 GMT
ತಂದೆ-ತಾಯಿಯೊಂದಿಗೆ ಮುಹಮ್ಮದ್ ಕೈಫ್ ಮುಲ್ಲಾ

ಮಂಗಳೂರು, ಮೇ 31: ಬೆಳಗಾವಿಯ ಸಂತ ಕ್ಸೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಮುಹಮ್ಮದ್ ಕೈಫ್ ಮುಲ್ಲಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಅಂಕದಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದರು. ಮರು ಮೌಲ್ಯ ಮಾಪನದಲ್ಲಿ ಮುಹಮ್ಮದ್ ಕೈಫ್‌ಗೆ 625 ಅಂಕ ಬಂದಿದ್ದು, ದ್ವಿತೀಯ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.

ಮುಹಮ್ಮದ್ ಕೈಫ್‌ರ ತಂದೆ ಹಾರೂನ್ ರಶೀದ್ ಮುಲ್ಲಾ ಮತ್ತು ತಾಯಿ ಫರ್ವೀನ್ ಮುಲ್ಲಾ ಇಬ್ಬರೂ ಕೂಡ ಶಿಕ್ಷಕರು. ಮುಹಮ್ಮದ್ ಕೈಫ್‌ನ ಅಜ್ಜ ಕೂಡಾ ಶಿಕ್ಷಣ ಪ್ರೇಮಿ. ಹಾಗಾಗಿ ಮನೆಯಲ್ಲಿ ಸಂಪೂರ್ಣ ಕಲಿಕೆಗೆ ಪ್ರೋತ್ಸಾಹವಿತ್ತು. ಇನ್ನು ಶಾಲೆಯಲ್ಲೂ ಕೂಡಾ ಶಿಕ್ಷಕರ ಸಹಕಾರವಿತ್ತು. ಹೀಗೆ ಎಲ್ಲರ ಸಹಕಾರ-ಪ್ರೋತ್ಸಾಹದೊಂದಿಗೆ ಆರಂಭದಿಂದಲೇ ಉತ್ತಮ ಗುರಿಯೊಂದಿಗೆ ಮುನ್ನುಗ್ಗಿದ ಮುಹಮ್ಮದ್ ಕೈಫ್ ಇದೀಗ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಆ ಖುಷಿಯಲ್ಲಿರುವ ಮುಹಮ್ಮದ್ ಕೈಫ್‌ರೊಂದಿಗೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗವನ್ನು ಇಲ್ಲಿ ದಾಖಲಿಸಲಾಗಿದೆ.

ವಾಭಾ: ಮರು ವೌಲ್ಯ ಮಾಪನ ಮಾಡಲು ಕಾರಣ ಏನು?

ಕೈಫ್‌: ನಾನು ಪ್ರತೀ ಪರೀಕ್ಷೆಯ ಬಳಿಕ ಪ್ರಶ್ನೆ ಪತ್ರಿಕೆಯನ್ನು ಮುಂದಿಟ್ಟುಕೊಂಡು ನಾನು ಬರೆದ ಉತ್ತರದ ಪರಾಮರ್ಶೆ ಮಾಡುತ್ತಿದ್ದೆ. ತಂದೆ-ತಾಯಿ ಮಾತ್ರವಲ್ಲ ಶಿಕ್ಷಕರೊಂದಿಗೂ ಚರ್ಚಿಸುತ್ತಿದ್ದೆ. ಆವಾಗ ನನಗೆ ಎಷ್ಟೆಷ್ಟು ಅಂಕಗಳು ಬರಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಹಾಗೇ ಎಲ್ಲದರಲ್ಲೂ ಪೂರ್ಣ ಅಂಕ ದೊರಕುವ ವಿಶ್ವಾಸವಿತ್ತು. ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಾಗ ವಿಜ್ಞಾನದಲ್ಲಿ 1 ಅಂಕ ಕಡಿಮೆ ಬಂದುದು ನನಗೆ ತೃಪ್ತಿ ನೀಡಲಿಲ್ಲ. 100 ಅಂಕ ಬರಲೇಬೇಕಿತ್ತು ಎಂದು ಮನಸ್ಸು ಹೇಳತೊಡಗಿತ್ತು. ಹಾಗೇ ಹೆತ್ತವರು, ಶಿಕ್ಷಕರ ಜೊತೆ ಚರ್ಚಿಸಿ ಮರು ಮೌಲ್ಯ ಮಾಪನಕ್ಕೆ ಅರ್ಜಿ ಹಾಕಿದೆ.

ಮರು ಮೌಲ್ಯ ಮಾಪನದ ಮೇಲೆ ವಿಶ್ವಾಸವಿತ್ತಾ ?

ಹೌದು... ವಿಜ್ಞಾನ ಪ್ರಶ್ನೆ ಪತ್ರಿಕೆಯ 41ನೆ ಪ್ರಶ್ನೆಗೆ 2 ಅಂಕದ ಬದಲು 1 ಅಂಕ ಮಾತ್ರ ಬಂದಿತ್ತು. ಮರು ಮೌಲ್ಯ ಮಾಪನದ ಬಳಿಕ ನನ್ನ ಪೂರ್ಣ ಅಂಕ ನನಗೆ ಲಭಿಸಿತ್ತು. ಅದರೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದ ನಾನು ಪ್ರಥಮ ಸ್ಥಾನಿಯಾದೆ.

ಖುಷಿಯಾಗುವುದಂತೂ ಸಹಜ. ಅದನ್ನು ‘ವಾರ್ತಾಭಾರತಿ’ಯ ಓದುಗರೊಂದಿಗೆ ಹೇಗೆ ಹಂಚಿಕೊಳ್ಳುವಿರಿ ?

ಯುವ ಪೀಳಿಗೆಯು ಕ್ಷಣಿಕ ಸುಖಕ್ಕಾಗಿ ಟಿವಿ, ಮೊಬೈಲ್, ಇಂಟರ್ನೆಟ್‌ನ ಹಿಂದೆ ಬೀಳುವುದು ಅತಿಯಾಗುತ್ತಿದೆ. ನಮ್ಮ ಬದುಕು ಕೇವಲ ಅದಕ್ಕೆ ಮಾತ್ರ ಸೀಮಿತವಾಗಬಾರದು. ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿ ಜೀವನದಲ್ಲಿ ತಿಳಿದುಕೊಳ್ಳಬೇಕಿದೆ. ಅದರಂತೆ ನಾನು ಟಿವಿ, ಮೊಬೈಲ್, ಇಂಟರ್ನೆಟ್‌ನಿಂದ ಸಾಧ್ಯವಾದಷ್ಟು ದೂರ ಸರಿದೆ. ಕಲಿಕೆಯ ಸಂದರ್ಭ ಕ್ಷಣಿಕ ಖುಷಿ ಕೊಡುವ ಇಂಥದ್ದೆನ್ನೆಲ್ಲಾ ಆದಷ್ಟು ದೂರ ಮಾಡಿದರೆ ನಮ್ಮ ಭವಿಷ್ಯವನ್ನು ನಾವೇ ರೂಪಿಸಬಹುದು. ಹಾಗಾಗಿ ವಿದ್ಯಾರ್ಥಿಗಳು ಕಲಿಕೆಗೆ ಆದ್ಯತೆ ನೀಡಬೇಕೇ ವಿನಃ ಇತರ ಕಡೆಗೆ ಹೆಚ್ಚು ಗಮನ ಹರಿಸಬಾರದು. ಸದ್ಯಕ್ಕೆ ನಾವು ಇವುಗಳನ್ನೆಲ್ಲಾ ತ್ಯಾಗ ಮಾಡಿದರೆ ಮುಂದಿನ ದಿನಗಳಲ್ಲಿ ನಾವು ಅದನ್ನೆಲ್ಲಾ ಎರಡು ಪಟ್ಟು ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಮುಂದೆ ಸಾಗಿದರೆ ಗೆಲುವು ಇದ್ದೇ ಇದೆ.

ದಿನದಲ್ಲಿ ಎಷ್ಟೆಷ್ಟು ಗಂಟೆ ಓದಿದ್ದೀರಿ ?

ನಾನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಓದುವತ್ತ ಗಮನ ಹರಿಸಿದೆ. ಪ್ರತೀ ದಿನದ ಪಾಠವನ್ನು ಅಂದಂದೇ ಮನನ ಮಾಡಿಕೊಂಡೆ. ಆರಂಭದ ಮೂರ್ನಾಲ್ಕು ತಿಂಗಳು ಕನಿಷ್ಠ 7-8 ಗಂಟೆ ಓದಿದೆ. ಬಳಿಕದ ದಿನಗಳಲ್ಲಿ ಪ್ರತೀ ದಿನ 11 ಗಂಟೆ ಓದಿದೆ. ಹೆಚ್ಚಾಗಿ ಬೆಳಗ್ಗೆ 5 ಗಂಟೆಗೆ ಎದ್ದು ಓದುತ್ತಿದ್ದೆ.

ಬಾಯಿ ಪಾಠವಾ ?

ಇಲ್ಲ... ಇಲ್ಲ. ಹಾಗೇನಿಲ್ಲ. ಪ್ರತಿಯೊಂದನ್ನೂ ಮನಸ್ಸಿಟ್ಟೇ ಓದುತ್ತಿದ್ದೆ. ಯಾವ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂದು ತಿಳಿದುಕೊಳ್ಳುತ್ತಿದ್ದೆ.

ಊಟ, ನಿದ್ದೆ....!?

ನಾನು ಒಂದ್ಹೊತ್ತು ಊಟವನ್ನೂ ಬಿಟ್ಟಿಲ್ಲ. ಆಹಾರವನ್ನು ನಿಯಮಿತವಾಗಿ ಸೇವಿಸುತ್ತಿದ್ದೆ. ನಿದ್ದೆಯನ್ನು ಸ್ವಲ್ಪ ಕಡಿಮೆ ಮಾಡಿದ್ದೇನೆ ಎಂದರೆ ತಪ್ಪಾಗಲಾರದು. ಅಲ್ಲದೆ ನನ್ನ ಆರೋಗ್ಯ ಏರು ಪೇರಾಗದಂತೆ ನೋಡಿಕೊಂಡೆ. ಇನ್ನು ಕಳೆದೊಂದು ವರ್ಷದಲ್ಲಿ ಮದುವೆ, ಮುಂಜಿ ಇತ್ಯಾದಿ ಯಾವ ಕಾರ್ಯಕ್ರಮಕ್ಕೂ ಹೋಗಿಲ್ಲ. ವಿನಾ ಕಾರಣ ಸಮಯ ಹಾಳು ಮಾಡಿಲ್ಲ. ಗುರಿ ಮುಟ್ಟಲೇಬೇಕು ಎಂಬ ನಿರ್ಧಾರದೊಂದಿಗೆ ಪರಿಶ್ರಮ ಪಟ್ಟೆ.

ಕೋಚಿಂಗ್‌ಗೆ ಹೋಗಿದ್ದೀರಾ ?

ಸಮಾಜ ಮತ್ತು ಇಂಗ್ಲಿಷ್‌ಗೆ ತಾಯಿ ನೆರವು ನೀಡಿದರು. ಕನ್ನಡ, ಹಿಂದಿಗೆ ತಂದೆ ಸಹಕರಿಸಿದರು. ಗಣಿತ ಮತ್ತು ವಿಜ್ಞಾನಕ್ಕಾಗಿ ಕೋಚಿಂಗ್‌ನ ಮೊರೆ ಹೋದೆ. ತಂದೆ ತಾಯಿ ಇಬ್ಬರು ಶಿಕ್ಷಕರಾದುದು ನನ್ನ ಪುಣ್ಯ. ಇನ್ನು ಅಜ್ಜ ಸಹಿತ ಎಲ್ಲರೂ ಒಳ್ಳೆಯ ಮಾರ್ಗದರ್ಶನ ನೀಡಿದರು.

ಮುಂದೇನು ಆಗಬೇಕು ಎಂದು ನಿರ್ಧರಿಸಿದ್ದೀರಿ ?

ನಿನ್ನೆ (ಬುಧವಾರ)ಯಿಂದ ಬೆಳಗಾವಿಯ ಆರ್‌ಎಲ್‌ಎಸ್ ಕಾಲೇಜಿಗೆ ಸೇರ್ಪಡೆಗೊಂಡೆ. ಸದ್ಯ ಸೈನ್ಸ್ ತೆಗೆದುಕೊಂಡಿದ್ದು, ಮುಂದೆ ಎಂಬಿಬಿಎಸ್ ಮಾಡಿದ ಬಳಿಕ ಐಎಎಸ್ ಪಾಸ್ ಮಾಡಬೇಕು ಅಂತಿದ್ದೇನೆ.

ಐಎಎಸ್ ಕನಸು ಯಾಕೆ ?

ನೋಡಿ, ಹಳ್ಳಿಯ ಜನಜೀವನ ಇನ್ನೂ ಸುಧಾರಿಸಿಲ್ಲ. ಅವರ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಶಿಕ್ಷಣ ಸರಿಯಾಗಿ ಸಿಗುತ್ತಿಲ್ಲ. ಐಎಎಸ್ ಪಾಸ್ ಮಾಡಿದರೆ ಜನಸೇವೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ಐಎಎಸ್ ಪಾಸ್ ಮಾಡಲು ನಿರ್ಧರಿಸಿದ್ದೇನೆ.

ನಗರದಲ್ಲಿ ವಾಸಿಸುವ ನಿಮಗೆ ಹಳ್ಳಿ ಜೀವನ ಹೇಗೆ ಪರಿಚಯ ಆಗುತ್ತೆ ?

ನಾವು ಮೊದಲು ಗದಗ ಜಿಲ್ಲೆಯ ಶಿರಟ್ಟಿ ಎಂಬ ಹಳ್ಳಿಯಲ್ಲಿ ವಾಸವಾಗಿದ್ದೆವು. ಅಲ್ಲಿ ನಾಲ್ಕನೆ ತರಗತಿಯವರೆಗೆ ಕಲಿತೆ. ಹಾಗಾಗಿ ಹಳ್ಳಿ ಜೀವನವನ್ನು ನಾನು ಹತ್ತಿರದಿಂದಲೇ ತಿಳಿದುಕೊಂಡಿದ್ದೆ.

ನಿಮ್ಮ ಇತರ ಹವ್ಯಾಸ ?

ಸಾಹಿತ್ಯದಲ್ಲಿ ಆಸಕ್ತಿ ಇದೆ. ಅರಬಿಕ್, ಇಂಗ್ಲಿಷ್ ಸಾಹಿತ್ಯ ಓದುತ್ತೇನೆ. ಅದಲ್ಲದೆ ಕ್ರೀಡೆ, ಈಜು ನನ್ನ ಆಸಕ್ತಿಯ ಕ್ಷೇತ್ರವಾಗಿದೆ.

ವಿದ್ಯಾರ್ಥಿ ಜೀವನದ ಇತರ ಸಾಧನೆ ಏನು ?

ನನಗೆ ಅಷ್ಟೇನು ನೆನಪಾಗುತ್ತಿಲ್ಲ ಸಾರ್... ಸಣ್ಣವನಿರುವಾಗ ಮಕ್ಕಳ ದಿನಾಚರಣೆಯ ಸಂದರ್ಭ ಶಾಲೆಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ದೇಶದ 28 ರಾಜ್ಯಗಳ ರಾಜಧಾನಿಯ ಹೆಸರನ್ನು ಕೇವಲ 1 ನಿಮಿಷದಲ್ಲಿ ಹೇಳಿದ್ದೆನಂತೆ. ಅದಕ್ಕೆ ನನಗೆ ಬಹುಮಾನವೂ ಬಂದಿತ್ತಂತೆ. ಅದರ ಫೋಟೋ ಪೇಪರಲ್ಲೂ ಬಂದಿತ್ತಂತೆ. 8 ಮತ್ತು 9ನೆ ತರಗತಿಯಲ್ಲಿ ನಾನು ಎನ್‌ಸಿಸಿಯಲ್ಲಿ ತೊಡಗಿಸಿಕೊಂಡ ಕಾರಣ ನಿರೀಕ್ಷಿದಷ್ಟು ಅಂಕಗಳು ಬಂದಿರಲಿಲ್ಲ. ಎಸೆಸೆಲ್ಸಿಯಲ್ಲಿ ಹಾಗಾಗಬಾರದು ಎಂದು ಮೊದಲೇ ನಿರ್ಧರಿಸಿದ್ದೆ.

ಓದು... ಓದು.. ಅಂತ ಹೆತ್ತವರು, ಶಿಕ್ಷಕರು ಒತ್ತಡ ಹಾಕಿದ್ದಾರಾ?

ಇಲ್ಲ, ಯಾರೂ ಹಾಗೆ ಒತ್ತಡ ಹಾಕಿರಲಿಲ್ಲ. ಆದರೆ, ಓದಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಪ್ರೋತ್ಸಾಹಿಸುತ್ತಿದ್ದರು.

Writer - ಸಂದರ್ಶನ: ಹಂಝ ಮಲಾರ್

contributor

Editor - ಸಂದರ್ಶನ: ಹಂಝ ಮಲಾರ್

contributor

Similar News