ಅಧಿಕಾರ ಸಿಗದ ಹತಾಶೆಯಿಂದ ಮೋದಿ ಸೇಡಿನ ರಾಜಕೀಯಕ್ಕಿಳಿದಿದ್ದಾರೆ: ಕೆಪಿಸಿಸಿ ಕಾರ್ಯದರ್ಶಿ ಎಂ.ಎಲ್.ಮೂರ್ತಿ

Update: 2018-05-31 12:01 GMT

ಚಿಕ್ಕಮಗಳೂರು, ಮೇ 31: ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಾಗದ ಕಾರಣಕ್ಕೆ ಪ್ರಧಾನಿ ಮೋದಿ ಅವರು ಅವರು ಹತಾಶರಾಗಿದ್ದಾರೆ. ಈ ಕಾರಣಕ್ಕೆ ಅವರು ತಮ್ಮ ಅಧೀನದ ಸರಕಾರಿ ಇಲಾಖೆಗಳನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಮುಖಂಡರನ್ನು ಮುಗಿಸುವ ವಿಫಲ ಪ್ರಯತ್ನ ಸಂಚು ಮಾಡುತ್ತಿದ್ದಾರೆ ಎಂದು ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ.ಎಲ್. ಮೂರ್ತಿ ಆರೋಪಿಸಿದ್ದಾರೆ.

ಗುರುವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರಾದ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಸೇರಿ ಅವರ 11 ಸಂಬಂಧಿಕರ ಮನೆಗಳ ಮೇಲೆ ಪ್ರಧಾನಿ ಮೋದಿ ಸಿಬಿಐ ಮೂಲಕ ಸರ್ಚ್ ವಾರೆಂಟ್ ಜಾರಿ ಮಾಡಿಸಿದ್ದಾರೆ. ಈ ಮೂಲಕ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಡೆಸಿದ ಅಧಿಕಾರದ ಲಾಲಸೆಗೆ ಹಿನ್ನಡೆ ಮಾಡಿದ ಡಿಕೆಶಿ ಕುಟುಂಬದವರನ್ನು ಹತ್ತಿಕ್ಕುವ, ರಾಜಕೀಯವಾಗಿ ಮುಗಿಸುವ ಮೂರನೇ ದರ್ಜೆಯ ಕೀಳು ರಾಜಕಾರಣ ಮಾಡಡುತ್ತಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಓರ್ವ ಅಯೋಗ್ಯ ರಾಜಕಾರಣಿ ಎಂಬುದನ್ನು ಸಾಬೀತು ಮಾಡಿದ್ದಾರೆಂದು ಟೀಕಿಸಿದರು.

ಕೇಂದ್ರ ಸರಕಾರ ತನ್ನ ಅಧೀನದ ಸರಕಾರಿ ಇಲಾಖೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಶೃಂಗೇರಿ ತಾಲೂಕಿನ ಕೆಲ ಕಾಂಗ್ರೆಸ್ ಕಾರ್ಯಕರ್ತರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದರು. ಪ್ರಧಾನಿ ಸೋಲಿನ ಹತಾಶೆಯಿಂದಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಸಂಘ ಪರಿವಾರದವರ ಮಾತು ಕೇಳಿಕೊಂಡು ಸರಕಾರಿ ಇಲಾಖೆ ಮುಂದಿಟ್ಟುಕೊಂಡು ಈ ರೀತಿಯ ದಾಳಿ ನಡೆಸುತ್ತಿರುವುದು ದೇಶಕ್ಕೆ ಅಪಾಯಕಾರಿ. ಇದನ್ನು ಪ್ರದೇಶ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರು ಬಿಜೆಪಿಯ ಈ ಕೀಳು ರಾಜಕಾರಣದಿಂದ ಹತಾಶರಾಗಬೇಕಿಲ್ಲ. ಅವರ ಬೆಂಬಲಕ್ಕೆ ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರಿದ್ದಾರೆ. ಇಂತಹ ವಿಫಲ ಸಂಚಿನಿಂದಾಗಿ ಕಾಂಗ್ರೆಸ್ಸಿಗರ ಜನಪರ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಹಾಗೂ ಬಿಜೆಪಿ ಮುಖಂಡರ ಈ ಸಂವಿಧಾನ ವಿರೋಧಿ ಕೃತ್ಯಗಳನ್ನು ಪುನರಾವರ್ತಿಸಿದರೇ ಕಾಂಗ್ರೆಸ್ ಪಕ್ಷ ನಾಡಿನುದ್ದಕ್ಕೂ ಉಗ್ರ ಸ್ವರೂಪದ ಹೋರಾಟಕ್ಕಿಳಿಯವುದು ಅನಿವಾರ್ಯವಾಗಲಿದೆ ಎಂದ ಅವರು, 2019ರಲ್ಲಿ ಪ್ರಧಾನಿ ಮೋದಿ ಅಧಿಕಾರ ಕಳೆದುಕೊಂಡು ಮೂಲೆಗುಂಪಾಗಲಿದ್ದಾರೆ ಎಂದು ದೂರಿದರು.

ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ವರ್ಚಸ್ಸಿನಿಂದ 78 ಸ್ಥಾನ ಪಡೆದುಕೊಂಡಿದ್ದೇವೆ. ಬಿಜೆಪಿಯವರು ಮತ ಯಂತ್ರ ಇವಿಎಂನ ವರ್ಚಸ್ಸಿನಿಂದ 104 ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಆರೋಪಿಸಿದ ಅವರು, ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದೆ ಎಂಬ ಅನುಮಾನ ಸಾರ್ವತ್ರಿಕವಾಗಿ ಕೇಳಿಬರುತ್ತಿದೆ. ಇವಿಎಂ ಯಂತ್ರದಲ್ಲಿ ಕಾಂಗ್ರೆಸ್‍ಗೆ ಬೀಳುವ ಐದು ಮತಗಳಲ್ಲಿ ಎರಡು ಮತ ಬಿಜೆಪಿಗೆ ಬೀಳುವಂತೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಬಗ್ಗೆ ನ್ಯಾಯಾಂಗ ಮೂಲಕ ತನಿಖೆ ನಡೆಸಿದಲ್ಲಿ ಸತ್ಯಾಂಶ ಹೊರಬೀಳಲಿದೆ. ಕೇಂದ್ರ ಸರಕಾರಕ್ಕೆ ಸಂವಿಧಾನದ ಬಗ್ಗೆ ಗೌರವವಿರುವುದು ನಿಜವಾದರೆ ಈ ಬಗ್ಗೆ ತನಿಖೆ ನಡೆಸಿ ವಾಸ್ತವಂಶವನ್ನು ಜನರ ಮುಂದಿಡಲಿ ಎಂದು ಮೂರ್ತಿ ಸವಾಲು ಹಾಕಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಯಾರಿಗೆ ಮತ ಹಾಕಿರುತ್ತಾರೆ, ಅವರಿಗೆ ಆ ಮತ ಸಲ್ಲಬೇಕು. ಮುಂದುವರಿದ ಅಮೇರಿಕ, ಬ್ರಿಟನ್, ಪ್ರಾನ್ಸ್ ನಂತಹ ದೇಶಗಳಲ್ಲೂ ಇಂದಿಗೂ ಬ್ಯಾಲೆಟ್ ಪೇಪರ್ ನಲ್ಲಿ ಮತಚಲಾಯಿಸುವ ಪದ್ಧತಿ ಜಾರಿಯಲ್ಲಿದೆ. ಇವಿಎಂ ಯಂತ್ರದ ಮೇಲೆ ಜನತೆಗೆ ಅನುಮಾನವಿರುವುದರಿಂದ ಈ ಅನುಮಾನವನ್ನು ಆಡಳಿತ ಯಂತ್ರ ಪರಿಹರಿಸುವ ಕೆಲಸ ಮಾಡಬೇಕು. ಮುಂದಿನ ಚುನಾವಣೆಗಳಲ್ಲಿ ಬ್ಯಾಲೆಟ್‍ಗಳ ಪೇಪರ್ ಬಳಕೆ ಬಗ್ಗೆ ಚುನಾವಣಾ ಆಯೋಗ, ಸರಕಾರ ಚಿಂತನೆ ನಡೆಸಬೇಕು ಎಂದರು.

ಎಸ್‍ಐಟಿ ಅಧಿಕಾರಿಗಳು ಚಿಂತಕ ಭಗವಾನ್ ಕೊಲೆಗೆ ಸಂಚು ರೂಪಿಸಿದವರನ್ನು ಬಂಧಿಸಿರುವುದು ಒಳ್ಳೆಯ ಬೆಳವಣಿಗೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಬಗ್ಗೆಯೂ ಎಸ್‍ಐಟಿ ಅಧಿಕಾರಿಗಳ ತಂಡ ಮಹತ್ವದ ಸುಳಿವು ಸಂಗ್ರಹಿಸಿದೆ. ಭವಿಷ್ಯದಲ್ಲಿ ಅವರ ಬಂಧನವಾಗಲಿದೆ ಎಂದು ಮೂರ್ತಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ಮುಖಂಡ ಹಿರೇಮಗಳೂರು ರಾಮಚಂದ್ರ,  ಜಿ.ವಿ. ಪವನ್, ಕೆ. ಮಹಮದ್ ಇದ್ದರು. 

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಒಂದು ಸ್ಥಾನ ಪಡೆದುಕೊಳ್ಳಲು ಮಾತ್ರ ಸಫಲವಾಗಿದೆ. ಸೋಲಿಗೆ ಕಾರಣ ಏನು ಎಂದು ಆತ್ಮವಲೋಕನ ಮಾಡಿಕೊಂಡು ಎಲ್ಲಿ ತಪ್ಪಾಗಿದೆ ಎಂಬುದನ್ನು ಅರಿತು ಮೇಜರ್ ಸರ್ಜರಿ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತದೆ. ಜಿಲ್ಲೆಯಲ್ಲಿ 1 ಸ್ಥಾನ ಗಳಿಸಿರುವ ಕಾಂಗ್ರೆಸ್ ಪಕ್ಷದ ಟಿ.ಡಿ.ರಾಜೇಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದ್ದೇವೆ. ಇದರಿಂದ ಪಕ್ಷದ ಸಂಘಟನೆ ಸಾಧ್ಯವಾಗಲಿದೆ. ಟಿಡಿಆರ್ ಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಮೂರ್ತಿ ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆಯವರು ಜಿಲ್ಲೆಯ ಪಾಲಿಗೆ ವಿಝಿಟಿಂಗ್ ಪ್ರೋಪೆಸರ್ ತರ ಆಗಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ಪಕ್ಷದ ಸಭೆಗಳಲ್ಲಿ ಮಾತ್ರ ಅವರು ಭಾಗವಹಿಸುತ್ತಿದ್ದಾರೆಯೇ ಹೊರತು ಸಾರ್ವಜನಿಕರ ಸಭೆ ನಡೆಸಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅವರು ಮಾತನಾಡಿಲ್ಲ. ಅವರು ಜಿಲ್ಲೆಗೆ ಯಾವ ಕೊಡುಗೆಯನ್ನೂ ನೀಡಿಲ್ಲ. ಶೋಭಾ ಕರಂದ್ಲಾಜೆ ಯಡಿಯೂರಪ್ಪ ಅವರ ಬಾಲದಂತಾಗಿದ್ದಾರೆ

-ಎಂ.ಎಲ್. ಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News