ಲಿಂಗದಹಳ್ಳಿ: ಉಚಿತ ಮೇವಿನ ಬೀಜ ವಿತರಣೆ

Update: 2018-05-31 12:03 GMT

ಲಿಂಗದಹಳ್ಳಿ, ಮೇ 31: ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಜೊತೆಗೆ ರೈತರು ಹೈನುಗಾರಿಕೆಯತ್ತಲು ಗಮನ ಹರಿಸಿದರೆ ಜಮೀನುಗಳಿಗೆ ಬೇಕಾಗುವ ಗೊಬ್ಬರ ಹಾಗೂ ಹಾಲು ಮೊಸರು ಮುಂತಾದವುಗಳಿಂದಲೂ ಆರ್ಥಿಕ ಸಹಾಯ ಪಡೆದುಕೊಳ್ಳಬಹುದಾಗಿದ್ದು, ಸಾಕು ಪ್ರಾಣಿಗಳು ಹೆಚ್ಚಾಗಿ ಸಾಕುವ ಮೂಲಕ ಸಾವಯವ ಬೆಳೆಗಳನ್ನು ಬೆಳೆಯಬಹುದಾಗಿದೆ ಎಂದು ಲಿಂಗದಹಳ್ಳಿ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ.ಉಮೇಶ್ ಹೇಳಿದರು. 

ಪಶುಪಾಲನ ಹಾಗೂ ಪಶು ವೈದ್ಯ ಸೇವಾ ಇಲಾಖೆ ತರೀಕೆರೆ ಮತ್ತು ಪಶು ಚಿಕಿತ್ಸಾಲಯ ಲಿಂಗದಹಳ್ಳಿಯವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರದಿಂದ ಉಚಿತವಾಗಿ ಸರಬರಾಜು ಮಾಡಲಾಗಿದ್ದ ಉಚಿತ ಮೇವಿನ ಬೀಜದ ಚೀಲಗಳನ್ನು ರೈತರಿಗೆ ವಿತರಿಸಿ ಮಾತನಾಡಿದ ಡಾ.ಉಮೇಶ್, ಲಿಂಗದಹಳ್ಳಿ ಪಶು ಚಿಕಿತ್ಸಾಲಯದ ವ್ಯಾಪ್ತಿಗೆ ಲಿಂಗದಹಳ್ಳಿ, ಉಡೇವಾ, ಗುಳ್ಳದ ಮನೆ, ಸುಣ್ಣದಹಳ್ಳಿ ಗ್ರಾಮ ಪಂಚಾಯತ್ ಗಳ ಎಲ್ಲಾ ಗ್ರಾಮಗಳು ಸೇರಿದ್ದು, ಪರಿಶಿಷ್ಟ ಜಾತಿ ಪಂಗಡದ ರೈತರುಗಳಿಗೆ 30 ಚೀಲ ಹಾಗೂ ಇತರ ಜನಾಂಗದವರಿಗೆ 190 ಚೀಲ ಹೀಗೆ ಸುಮಾರು 220 ಉಚಿತ ಮೇವಿನ ಬೀಜದ ಚೀಲಗಳನ್ನು ವಿತರಿಸಲಾಗಿದೆ ಎಂದರು. 

ಹೋಬಳಿಯಾದ್ಯಂತ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಉಚಿತವಾಗಿ ನೀಡುವ ಒಂದು ಚೀಲದಲ್ಲಿ 5 ಕೆ.ಜಿ. ಮೇವಿನ ಬೀಜ ಇದ್ದು, ಇವುಗಳ ಅಗತ್ಯವಿರುವ ಪಶುಪಾಲಕ ರೈತರು ತಮ್ಮ ಜಮೀನುಗಳ ಫಹಣಿ, ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಗಳನ್ನು ನೀಡಿ ಲಿಂಗದಹಳ್ಳಿ ಪಶು ಚಿಕಿತ್ಸಾಲಯದಲ್ಲಿ ಉಚಿತ ಮೇವಿನ ಬೀಜ ಪಡೆದುಕೊಳ್ಳಬೇಕು. ಈ ಮೇವಿನ ಬೀಜಕ್ಕೆ ಬೀಜೋಪಚಾರ ಮಾಡಿರುವ ಕಾರಣ ಇದನ್ನು ಮಾನವರು ತಿನ್ನುವುದಕ್ಕಾಗಲೀ, ಕೋಳಿ ಇನ್ನಿತರೆ ಪ್ರಾಣಿ ಪಕ್ಷಿಗಳಿಗಾಗಲೀ ನೀಡದೇ ಮೇವಿನ ಬೆಳೆ ಬೆಳೆಯಲಷ್ಟೆ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News