ಗೌರಿ ಹತ್ಯೆ ಪ್ರಕರಣ: ಸೂತ್ರಧಾರರ ಬಂಧನವಾಗಲಿ

Update: 2018-05-31 18:55 GMT

 ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಇಬ್ಬರು ಸಂಘಪರಿವಾರದ ಕಾರ್ಯಕರ್ತರೆನ್ನಲಾದ ಯುವಕರ ಮೇಲೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಕಲಬುರ್ಗಿ ಹತ್ಯೆಯಂತೆಯೇ ಗೌರಿ ಹತ್ಯೆ ಪ್ರಕರಣವೂ ಸಂಪೂರ್ಣ ಮುಚ್ಚಿ ಹೋಗುತ್ತದೆಯೋ ಎಂದು ಜನರು ಆತಂಕಪಡುತ್ತಿರುವಾಗ ತನಿಖೆ ಈ ಹಂತಕ್ಕಾದರೂ ತಲುಪಿರುವುದು ಸಮಾಧಾನ ತರುವ ವಿಷಯವಾಗಿದೆ. ಮುಖ್ಯವಾಗಿ, ಗೌರಿ ಹತ್ಯೆ ನಡೆದಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವಾಗ. ಜೊತೆಗೆ, ಈ ಕೊಲೆ ನಡೆದಿರುವುದು ತೀರಾ ತಡರಾತ್ರಿಯೇನೂ ಅಲ್ಲ. ಎಂಟು ಗಂಟೆ ಸುಮಾರಿಗೆ ಬೆಂಗಳೂರು ಶಹರದಲ್ಲಿ ನಡೆದ ಹತ್ಯೆ ಇದು. ಈ ಹಿನ್ನೆಲೆಯಲ್ಲಿ ಅಪರಾಧಿಗಳ ಶೀಘ್ರ ಬಂಧನದ ಕುರಿತಂತೆ ನಿರೀಕ್ಷೆಗಳಿದ್ದವು. ಆದರೆ ನಿರೀಕ್ಷೆಗಳು ಭಾಗಶಃ ಹುಸಿಯಾಗಿವೆ.

ಮುಖ್ಯವಾಗಿ ಗೌರಿ ಲಂಕೇಶ್‌ರ ಕುಟುಂಬವೇ ತನಿಖೆಗೆ ಸರಿಯಾಗಿ ಸಹಕರಿಸಿಲ್ಲ ಎನ್ನುವ ಆರೋಪಗಳಿವೆ. ಅದರಲ್ಲೂ, ಬಿಜೆಪಿ ಸೇರಿರುವ ಲಂಕೇಶ್ ಪುತ್ರ ಇಂದ್ರಜಿತ್‌ರ ನಡವಳಿಕೆ, ಹೇಳಿಕೆಗಳೂ ತನಿಖೆಯ ದಾರಿ ತಪ್ಪಿಸುವಲ್ಲಿ ತನ್ನದೇ ಕೊಡುಗೆಗಳನ್ನು ನೀಡಿವೆ. ಜೊತೆಗೆ ಮಾಧ್ಯಮಗಳೂ ಗೌರಿ ಲಂಕೇಶ್ ಹತ್ಯೆಯ ತನಿಖೆಯ ಹಳಿತಪ್ಪಿಸಲು ಸಾಕಷ್ಟು ಹೆಣಗಿವೆ. ಇವೆಲ್ಲದರ ನಡುವೆಯೂ ಇಬ್ಬರು ಆರೋಪಿಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿರುವುದು ಸದ್ಯದ ಮಟ್ಟಿಗೆ ದೊಡ್ಡ ಸಾಧನೆಯೇ ಆಗಿದೆ. ಆದರೆ ಬಂಧಿಸಲ್ಪಟ್ಟವರು ಕೊಲೆಯಲ್ಲಿ ನೇರ ಪಾತ್ರವಹಿಸಿದವರಲ್ಲ. ಅವರು ಕೊಲೆಗೆ ಸಹಕರಿಸಿದವರು ಎನ್ನುತ್ತಿದೆ ಚಾರ್ಜ್‌ಶೀಟ್. ಇದು ಅತ್ಯಂತ ನಿರಾಶಾದಾಯಕ ಸಂಗತಿ. ಇಷ್ಟು ಸಮಯದಲ್ಲಿ ಕೊಲೆಯಲ್ಲಿ ನೇರ ಪಾತ್ರವಹಿಸಿದವರನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದರೆ, ಅದು ಕೊಲೆಗಾರರಿಗೆ ತಪ್ಪಿಸಿಕೊಳ್ಳಲು ಇನ್ನಷ್ಟು ಅವಕಾಶಗಳನ್ನು ನೀಡಿದಂತೆ. ತನಿಖೆ ಆಮೆಗತಿಯಲ್ಲಿ ನಡೆದರೆ ಅದರ ಸರ್ವಲಾಭಗಳನ್ನು ಕೊಲೆಗಾರರು ತಮ್ಮದಾಗಿಸಿಕೊಳ್ಳುತ್ತಾರೆ. ಸಾಕ್ಷಗಳನ್ನು ನಾಶ ಮಾಡುತ್ತಾ ಹೋಗುತ್ತಾರೆ.

ವರ್ಷಗಳ ಬಳಿಕ ಬಂಧನಕ್ಕೊಳಗಾದರೂ, ಅಷ್ಟೇ ಸುಲಭದಲ್ಲಿ ನಿರಪರಾಧಿಗಳಾಗಿ ಹೊರಬರುತ್ತಾರೆ. ಈ ಹಿನ್ನೆಲೆಯಲ್ಲಿ ನವೀನ್ ಮತ್ತು ಪ್ರವೀಣ್ ಇಬ್ಬರ ಬಂಧನದಿಂದ ಗೌರಿ ಲಂಕೇಶ್ ಸಾವಿಗೆ ನ್ಯಾಯ ದೊರಕಿದೆ ಎಂದು ಭಾವಿಸುವುದಕ್ಕೆ ಖಂಡಿತಾ ಸಾಧ್ಯವಾಗದು. ಕೊಲೆಗೈದ ಸುಪಾರಿ ಹಂತಕರನ್ನು ಬಂಧಿಸುವುದರಿಂದಲೂ ಗೌರಿ ಹತ್ಯೆಗೆ ಪೂರ್ತಿ ನ್ಯಾಯ ಸಿಗುವುದಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಕೆಲವೊಮ್ಮೆ ನಿರ್ದಿಷ್ಟ ಶಕ್ತಿಗಳಿಂದ ಹಣಪಡೆದ ಸುಪಾರಿ ಕೊಲೆಗಾರರು ಗೌರಿಯನ್ನು ಕೊಂದಿರುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಈ ಕೊಲೆಗಾರರು ಬರೀ ಆಯುಧಗಳಷ್ಟೇ. ಈ ಆಯುಧಗಳನ್ನು ನಿಯಂತ್ರಿಸಿದವರು ಬಹಿರಂಗವಾಗಿ ನಮ್ಮ ನಡುವೆಯೇ ಓಡಾಡುತ್ತಿರಬಹುದು. ಅವರು ಕೊಲ್ಲಿಸಿರುವುದು ಗೌರಿ ಎನ್ನುವ ಕಾರಣಕ್ಕಾಗಿಯಲ್ಲ. ಆಕೆ ಪ್ರತಿಪಾದಿಸುತ್ತಿದ್ದ ವಿಚಾರಗಳನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ. ಗೌರಿ ನೆಪಮಾತ್ರ. ಕೊಲೆಯಲ್ಲಿ ನೇರ ಪಾಲುದಾರರಾದವರಿಗೆ ತಾವು ಗೌರಿಯನ್ನು ಯಾಕೆ ಕೊಂದಿದ್ದೇವೆ ಎನ್ನುವುದೇ ಗೊತ್ತಿರಲಿಕ್ಕಿಲ್ಲ. ಹಣವೊಂದೇ ಅವರಿಗೆ ಕೊಲ್ಲುವುದಕ್ಕಿರುವ ಕಾರಣವಾಗಿರಬಹುದು. ಹೀಗಿರುವಾಗ, ಕೊಲೆಗಾರರನ್ನು ಬಂಧಿಸುವುದರಿಂದಷ್ಟೇ ಇಂತಹ ಹತ್ಯೆಗಳನ್ನು ತಡೆಯಲು ಸಾಧ್ಯವಿಲ್ಲ.

ಯಾಕೆಂದರೆ, ಇವರಲ್ಲದಿದ್ದರೆ ಇನ್ನೊಬ್ಬ ಸುಪಾರಿ ಕೊಲೆಗಾರರನ್ನು ದುಷ್ಕರ್ಮಿಗಳು ಬಳಸಿಕೊಳ್ಳಬಹುದು. ಕೊಲೆಗೆ ಸಂಚು ರೂಪಿಸಿ ಕೊಲೆಗಾರರನ್ನು ಕಳುಹಿಸಿದವರೇ ನಿಜವಾದ ಕೊಲೆಗಾರರು. ಅವರನ್ನು ಬಂಧಿಸಿ, ಅವರಿಗೆ ಶಿಕ್ಷೆ ನೀಡದೇ ಇದ್ದರೆ ಇನ್ನೊಬ್ಬ ಪ್ರಗತಿಪರ ಚಿಂತಕನ ಕೊಲೆಯನ್ನು ತಪ್ಪಿಸಲು ಸಾಧ್ಯವಿಲ್ಲ. ಹಿಂದಿನ ಸೂತ್ರದಾರ ಶಿಕ್ಷೆಯಿಂದ ಪಾರಾಗುವುದರಿಂದಾಗಿ ಇನ್ನೊಂದು ಅಪಾಯವಿದೆ. ಈ ಹಿಂದೆ ಕಲಬುರ್ಗಿ ಹತ್ಯೆಯ ಗಂಭೀರ ತನಿಖೆ ನಡೆದು ಕೊಲೆಗಾರ ಮತ್ತು ಸಂಚು ರೂಪಿಸಿದವರು ಬಂಧಿಸಲ್ಪಟ್ಟಿದ್ದರೆ ಗೌರಿ ಲಂಕೇಶ್ ಅವರ ಕೊಲೆಯೇ ನಡೆಯುತ್ತಿರಲಿಲ್ಲವೇನೋ? ಇದೀಗ ಗೌರಿ ಹತ್ಯೆ ಪ್ರಕರಣದಲ್ಲೂ ಅದು ಮುಂದುವರಿದದ್ದೇ ಆದರೆ, ಈ ತನಿಖೆಯ ವೈಫಲ್ಯ ಇನ್ನೊಂದು ಹತ್ಯೆಗೆ ಮುನ್ನುಡಿ ಬರೆಯಲಿದೆ. ಅದಕ್ಕೆ ಪೂರಕವಾಗಿ ಈಗಾಗಲೇ ವಿಚಾರವಾದಿ ಲೇಖಕ ಭಗವಾನ್ ಅವರ ಹತ್ಯೆ ಸಂಚು ಕೂಡ ಬೆಳಕಿಗೆ ಬಂದಿದೆ.

ಇಂತಹ ಹತ್ಯೆಗಳಲ್ಲಿ ನಿಜವಾದ ಸೂತ್ರಧಾರರು ಬಚಾವಾಗುತ್ತಾ ಹೋದ ಹಾಗೆಯೇ ಹತ್ಯೆಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತವೆ. ಚಿಂತಕರು, ಹೋರಾಟಗಾರರು ವಿಐಪಿಗಳಾಗಿರುವುದಿಲ್ಲ. ಅವರಿಗೆ ಭದ್ರತೆಗಳೂ ಇರುವುದಿಲ್ಲ. ಅವರು ಜನಸಾಮಾನ್ಯರ ನಡುವೆ ಓಡಾಡುತ್ತಿರುತ್ತಾರೆ. ಅವರನ್ನು ಕೊಲ್ಲುವುದು ತೀರಾ ಸುಲಭ ಮತ್ತು ಹಾಗೆ ಹತ್ಯೆ ಮಾಡುವ ಮೂಲಕವೇ ಸತ್ಯವನ್ನು ಮಾತನಾಡುವವರ ಬಾಯಿಯನ್ನು ಮುಚ್ಚಿಸಬಹುದು ಮತ್ತು ಯಾವ ಶಿಕ್ಷೆಯೂ ಇಲ್ಲದೆ ಪಾರಾಗಬಹುದು ಎನ್ನುವುದು ಸೂತ್ರಧಾರರಿಗೆ ಕಾನೂನು ವ್ಯವಸ್ಥೆ ದುರ್ಬಲ ತನಿಖೆಯ ಮೂಲಕ ಮನವರಿಕೆ ಮಾಡುತ್ತದೆ. ಗೌರಿ ಕೊಲೆಯ ರಕ್ತ ಈ ಮೂಲಕ ಕಾನೂನು ವ್ಯವಸ್ಥೆಯ ಕೈಗೂ ಅಂಟಿಕೊಂಡಿದೆ.

ಕಲಬುರ್ಗಿಯವರ ಹತ್ಯೆಯಾದಾಗ ದಕ್ಷಿಣ ಕನ್ನಡದ ಓರ್ವ ಯುವಕ ಅದನ್ನು ಸಂಭ್ರಮಿಸುತ್ತಾ, ಇನ್ನಿತರ ಪ್ರಗತಿಪರರಿಗೂ ಇದೇ ಶಿಕ್ಷೆ ಕಾದಿದೆ ಎಂಬರ್ಥ ಬರುವಂತೆ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದ. ಆತನ ಬಂಧನವೂ ಆಯಿತು. ಆದರೆ ಒಂದೇ ದಿನದಲ್ಲಿ ಆತನಿಗೆ ಜಾಮೀನು ಸಿಕ್ಕಿತು. ಕಾನೂನಿನ ಈ ದೌರ್ಬಲ್ಯ ಆತನಿಗೆ ಅಪಾರ ಧೈರ್ಯವನ್ನು ಕೊಟ್ಟಿತು. ಮುಂದೆ ಈತ ಬಂಟ್ವಾಳದಲ್ಲಿ ಹರೀಶ್ ಪೂಜಾರಿ ಎನ್ನುವ ಯುವಕನನ್ನೇ ಕೊಂದು ಹಾಕಿದ. ಆ ಮೂಲಕ ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವುದು ಅವನ ಗುರಿಯಾಗಿತ್ತು. ಕಲಬುರ್ಗಿ ಪ್ರಕರಣದಲ್ಲೇ ಈತನ ಕೊಲೆಗಡುಕ ಮನಸ್ಸನ್ನು ಗುರುತಿಸಿ ಕಠಿಣ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದ್ದೇ ಆಗಿದ್ದರೆ, ಹರೀಶ್ ಪೂಜಾರಿ ಎನ್ನುವ ಅಮಾಯಕ ತನ್ನ ಪ್ರಾಣವನ್ನು ಕಳೆದುಕೊಳ್ಳಬೇಕಾಗಿರಲಿಲ್ಲ.

ಬಂಟ್ವಾಳದಂತಹ ಸಣ್ಣ ಊರು ಕೋಮುಗಲಭೆಯಿಂದ ನಲುಗಬೇಕಾಗಿಯೂ ಇರಲಿಲ್ಲ. ಬಹುಶಃ ಚಿಂತಕರು, ಬುದ್ಧಿಜೀವಿಗಳ ಕೊಲೆಗಳಿಗೆ ಹೇಗೆ ಸಂಘಪರಿವಾರದ ಚಿಂತನೆಗಳು ಕಾರಣವಾಗಿದೆಯೋ ಹಾಗೆಯೇ ಕಾನೂನಿನ ದೌರ್ಬಲ್ಯಗಳೂ ತಮ್ಮ ಕೊಡುಗೆಗಳನ್ನು ನೀಡುತ್ತಾ ಬಂದಿವೆ. ಇಂದು ಕಾನೂನು ವ್ಯವಸ್ಥೆ ಕೋಮುಮನಸ್ಥಿತಿಯ ಕುರಿತಂತೆ ದಿನದಿಂದ ದಿನಕ್ಕೆ ಮೃದುವಾಗುತ್ತಾ ಬರುತ್ತಿದೆ. ಬಹುಶಃ ಪೊಲೀಸ್ ಇಲಾಖೆಗಳಲ್ಲೂ ಕೋಮುವಾದಿ ಮನಸ್ಸುಗಳು ತೂರಿಕೊಂಡಿರುವುದು ಇದಕ್ಕೆ ಕಾರಣವಾಗಿರಬಹುದು. ಅಥವಾ ರಾಜಕೀಯ ಒತ್ತಡವೂ ಕಾರಣವಿರಬಹುದು.

ಬಹಿರಂಗವಾಗಿ ದ್ವೇಷಭಾಷಣವನ್ನಾಡುವುದು, ಕೊಲೆ, ಹಲ್ಲೆಗಳಿಗೆ ಕರೆ ನೀಡುವುದು ಇಂದು ನಾಯಕನಾಗಲು ಇರುವ ಸುಲಭ ದಾರಿ ಎಂದು ಕೆಲವರು ಭಾವಿಸಿಕೊಂಡಿದ್ದಾರೆ. ಇವರ ಮೇಲೆ ಬಲವಾದ ಪ್ರಕರಣವನ್ನು ದಾಖಲಿಸಿ ಅವರು ಕೋರ್ಟು ಕಚೇರಿ ಎಂದು ಅಲೆಯುವಂತೆ ಮಾಡಿದ್ದಿದ್ದರೆ ಇಂದು ರಾಜ್ಯಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಇಷ್ಟೇ ಏಕೆ, ‘‘ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಬಂಧಿಸುವೆ’’ ಎಂದು ಹೇಳಿ ಈ ಹಿಂದೆ ಶಾಸಕರಾಗಿ ಆಯ್ಕೆಯಾದ ರಮಾನಾಥ ರೈ ಅವರಿಗೆ ಕೊನೆಗೂ ತಮ್ಮ ಮಾತನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಒಂದು ವೇಳೆ ದಿಟ್ಟತನದಿಂದ ಅದನ್ನು ನಿರ್ವಹಿಸಿದ್ದೇ ಆಗಿದ್ದರೆ, ಆ ಪ್ರದೇಶದಲ್ಲಿ ಸರಣಿ ಹತ್ಯೆಗಳು ನಡೆಯುತ್ತಲೇ ಇರಲಿಲ್ಲವೇನೋ? ಜೊತೆಗೆ ಈ ಬಾರಿ ಅವರು ಹೀನಾಯವಾಗಿ ಸೋಲುತ್ತಲೂ ಇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News