ಸಲ್ಮಾನ್ ಖಾನ್ ಗೆ ಥಳಿಸಿದವರಿಗೆ 2 ಲಕ್ಷ ಬಹುಮಾನ ಘೋಷಿಸಿದ ತೊಗಾಡಿಯಾ ಸಂಘಟನೆ

Update: 2018-06-01 10:18 GMT

ಆಗ್ರಾ,ಜೂ.1 : ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ನಿರ್ಮಾಣ ಸಂಸ್ಥೆಯ ಚಲನಚಿತ್ರವೊಂದಕ್ಕೆ 'ಲವ್‍ರಾತ್ರಿ' ಎಂಬ ಹೆಸರು ನೀಡಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆಂಬ ಕಾರಣಕ್ಕೆ ಅವರನ್ನು ಸಾರ್ವಜನಿಕವಾಗಿ ಥಳಿಸುವವರಿಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ವಿಶ್ವ ಹಿಂದು ಪರಿಷತ್ತಿನ ಮಾಜಿ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ಹೊಸ ಸಂಘಟನೆ 'ಹಿಂದು ಹೀ ಆಗೇ' ಇದರ ಆಗ್ರಾ ಘಟಕದ ಅಧ್ಯಕ್ಷ  ಗೋವಿಂದ್ ಪರಾಶರ್ ಘೋಷಿಸಿದ್ದಾರೆ.

ಈ ಚಿತ್ರವನ್ನು ಸಲ್ಮಾನ್ ಅವರು ಉದ್ದೇಶಪೂರ್ವಕವಾಗಿ ಹಿಂದುಗಳ ಹಬ್ಬವಾದ ನವರಾತ್ರಿ ಸಂದರ್ಭ ಬಿಡುಗಡೆಗೊಳಿಸಲು ನಿರ್ಧರಿಸಿದ್ದಾರೆಂದೂ ಪರಾಶರ್ ಆರೋಪಿಸಿದ್ದಾರೆ. ಗುರುವಾರ ಸಂಘಟನೆಯ ಕಾರ್ಯಕರ್ತರು ಆಗ್ರಾದ ಭಗವಾನ್ ಚಿತ್ರಮಂದಿರದ ಬಳಿ ಸಲ್ಮಾನ್ ಪೋಸ್ಟರುಗಳನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ನಿಷೇಧಿಸಬೇಕೆಂದು ಬೇಡಿಕೆಯಿಟ್ಟಿರುವ ಸಂಘಟನೆ, ಸೆನ್ಸಾರ್ ಮಂಡಳಿ ಈ ಚಿತ್ರ ಪ್ರದರ್ಶಿಸಲು ನಿರ್ಧರಿಸಿದರೆ ಅದನ್ನು ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚಲಾಗುವುದು,'' ಎಂದೂ ಅವರು ಬೆದರಿಕೆಯೊಡ್ಡಿದ್ದಾರೆ.

ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿರುವ 'ಲವ್‍ರಾತ್ರಿ' ಚಿತ್ರದಲ್ಲಿ ಸಲ್ಮಾನ್ ತಮ್ಮ ಮೈದುನ ಆಯುಷ್ ಶರ್ಮಾನನ್ನು ಪರಿಚಯಿಸಿದ್ದಾರೆ.

ಈ ಹಿಂದೆ ಬಜರಂಗದಳದಲ್ಲಿದ್ದ ಪರಾಶರ್ ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಇತ್ತೀಚೆಗೆ ಮೂರು ದಿನಗಳ ಸಹಿ ಸಂಗ್ರಹ ಅಭಿಯಾನವನ್ನೂ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News