ಚಿಕ್ಕಮಗಳೂರು: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತ ಪೊಲೀಸ್ ಪೇದೆ

Update: 2018-06-01 12:34 GMT

ಚಿಕ್ಕಮಗಳೂರು, ಜೂ.1: ಕೌಟುಂಬಿಕ ಕಲಹದಿಂದ ಬೇಸತ್ತ ಪೊಲೀಸ್ ಪೇದೆಯೊಬ್ಬರು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಗರದ ರಾಮನಹಳ್ಳಿ ಪೊಲೀಸ್ ವಸತಿ ಗೃಹದಲ್ಲಿ ನಡೆದಿದೆ.

ಮೂಲತಃ ಹಾಸನ ಜಿಲ್ಲೆಯವರಾದ ಅನಿಲ್(30) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆಯಾಗಿದ್ದು, ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು.

ಪೊಲೀಸ್ ಪೇದೆ ಅನಿಲ್ ಕಳೆದ ಒಂದು ತಿಂಗಳಿನಿಂದ ವಿವಾಹದ ಹಿನ್ನೆಲೆಯಲ್ಲಿ ರಜೆ ಮೇಲಿದ್ದು ಮೇ 13ರಂದು ಯುವತಿಯೊಬ್ಬರನ್ನು ವಿವಾಹವಾಗಿದ್ದರೆಂದು ತಿಳಿದು ಬಂದಿದೆ. ವಿವಾಹವಾಗಿ ಕೇವಲ 17 ದಿನಗಳಾಗಿದ್ದು, ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಅವರು ಗುರುವಾರ ರಾತ್ರಿ ಚಿಕ್ಕಮಗಳೂರಿಗೆ ಆಗಮಿಸಿ, ನಗರದ ರಾಮನಹಳ್ಳಿ ಬಡಾವಣೆಯಲ್ಲಿರುವ ಪೊಲೀಸ್ ವಸತಿಗೃಹದ ಕಟ್ಟಡದಲ್ಲಿನ ತಮ್ಮ ಮನೆಯಲ್ಲಿ ತಂಗಿದ್ದರು. ಶುಕ್ರವಾರ ಬೆಳಗ್ಗೆ ಡೆತ್ ನೋಟ್ ಬರೆದಿಟ್ಟು ಮನೆಯ ಪ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆಗೆ ಅನಿಲ್ ಶರಣಾಗಿದ್ದಾರೆನ್ನಲಾಗಿದೆ.

ರಾತ್ರಿ ಮನೆಗೆ ಬಂದಿದ್ದ ಪೇದೆ ಅನಿಲ್ ಶುಕ್ರವಾರ ಮಧ್ಯಾಹ್ನವಾದರೂ ಮನೆಯಿಂದ ಹೊರಗೆ ಬಾರದ್ದನ್ನು ಗಮನಿಸಿದ ವಸತಿಗೃಹದ ಇತರ ಪೊಲೀಸ್ ಸಿಬ್ಬಂದಿ ಅನುಮಾನಗೊಂಡಿದ್ದಾರೆ. ಕೂಡಲೇ ಅನಿಲ್ ಅವರ ಮನೆಯ ಬಾಗಿಲು ಬಡಿದರೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮನೆಯ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆಯ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಮೇ 13ರಂದು ವಿವಾಹವಾಗಿದ್ದ ಪೇದೆ ಅನಿಲ್ ಕೌಟುಂಬಿಕ ಕಲಹದಿಂದ ಬೇಸತ್ತಿದ್ದರು ಎನ್ನಲಾಗಿದ್ದು, ಅನಿಲ್‍ರ ಪತ್ನಿಗೆ ಪತಿಯ ತಂದೆ ತಾಯಿ ಜೊತೆಗಿರುವುದು ಇಷ್ಟವಿರಲಿಲ್ಲ. ಅವರಿದ್ದರೇ ನಿಮ್ಮೊಂದಿಗೆ ತಾನು ಇರುವುದಿಲ್ಲ ಎಂದು ಅನಿಲ್ ಪತ್ನಿ ಹೇಳಿದ್ದರು. ಇದರಿಂದ ಹೆತ್ತ ತಂದೆ ತಾಯಿಯನ್ನು ದೂರ ಇಡಲು ಸಾಧ್ಯವಾಗದ ಅನಿಲ್ ಮಾನಿಸಿಕವಾಗಿ ನೊಂದಿದ್ದರು. ಪತ್ನಿಗೆ ಈ ಬಗ್ಗೆ ಎಷ್ಟೇ ಮನವರಿಕೆ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಬಂದು ಶುಕ್ರವಾರ ಬೆಳಗ್ಗೆ ಪೊಲೀಸ್ ವಸತಿ ಗೃಹದ ತಮ್ಮ ಮನೆಯಲ್ಲಿ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.

ಘಟನೆಯ ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಘಟನೆ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣದ ಬಗ್ಗೆ ಪೊಲೀಸರ ಹೆಚ್ಚಿನ ತನಿಖೆಯಿಂದ ತಿಳಿದು ಬರಬೇಕಿದೆ.

ನಗರದ ಜಿಲ್ಲಾಸ್ತ್ರೆಯಲ್ಲಿ ಪೇದೆಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತ ದೇಹವನ್ನು ಅನಿಲ್ ಅವರ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News