ಐಪಿಎಲ್ ಬೆಟ್ಟಿಂಗ್: ತಪ್ಪೊಪ್ಪಿಕೊಂಡ ನಟ ಅರ್ಬಾಝ್ ಖಾನ್

Update: 2018-06-02 13:57 GMT

ಥಾಣೆ(ಮಹಾರಾಷ್ಟ್ರ),ಜೂ.2: ಐಪಿಎಲ್ ಪಂದ್ಯಗಳಲ್ಲಿ ತಾನು ಬೆಟ್‌ಗಳನ್ನು ಕಟ್ಟುತ್ತಿದ್ದುದಾಗಿ ಬಾಲಿವುಡ್ ನಟ-ನಿರ್ಮಾಪಕ ಅರ್ಬಾಜ್ ಖಾನ್ ಅವರು ಒಪ್ಪಿಕೊಂಡಿದ್ದಾರೆ. ಕಳೆದ ಆರು ವರ್ಷಗಳಿಂದಲೂ ತಾನು ಬೆಟ್‌ಗಳನ್ನು ಕಟ್ಟುತ್ತಿದ್ದೆ ಎಂದು ಪೊಲೀಸರ ವಿಚಾರಣೆ ಸಂದರ್ಭ ಖಾನ್(50)ತಿಳಿಸಿದ್ದಾರೆ.

ಖಾನ್ ಐಪಿಎಲ್ ಪಂದ್ಯಗಳಲ್ಲಿ ಸೋನು ಜಲಾನ್ ಎಂಬ ಬುಕ್ಕಿಯ ಜೊತೆ ಬೆಟ್‌ಗಳನ್ನು ಕಟ್ಟಿ 2.80 ಕೋ.ರೂ.ಗಳನ್ನು ಕಳೆದುಕೊಂಡಿದ್ದು,ಅದನ್ನು ಆತನಿಗೆ ಪಾವತಿಸಿರಲಿಲ್ಲ. ಹೀಗಾಗಿ ಆತ ಖಾನ್‌ಗೆ ಬೆದರಿಕೆಯನ್ನೊಡ್ಡಿದ್ದ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಶನಿವಾರ ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಖಾನ್ ಮತ್ತು ಜಲಾನ್ ಅವರ ಮುಖಾಮುಖಿಯನ್ನು ಮಾಡಿಸಿದ್ದರು.

ಮೇ 15ರಂದು ದೇಶದ ಅಗ್ರ ಬುಕ್ಕಿಗಳಲ್ಲೋರ್ವ ಎನ್ನಲಾಗಿರುವ ಜಲಾನ್ ಸೇರಿದಂತೆ ನಾಲ್ವರನ್ನು ಮುಂಬೈನಲ್ಲಿ ಬಂಧಿಸುವುದರೊಂದಿಗೆ ಥಾಣೆ ಪೊಲೀಸ್‌ನ ಭ್ರಷ್ಟಾಚಾರ ನಿಗ್ರಹ ಘಟಕ(ಎಇಸಿ)ವು ಬೆಟ್ಟಿಂಗ್ ಜಾಲವನ್ನು ಭೇದಿಸಿತ್ತು.

ತನಿಖೆಯ ವೇಳೆ ಜಲಾನ್ ಮತ್ತು ಖಾನ್ ನಡುವಿನ ನಂಟು ಬೆಳಕಿಗೆ ಬಂದಿದ್ದು,ವಿಚಾರಣೆಗೆ ಹಾಜರಾಗುವಂತೆ ಶುಕ್ರವಾರ ಖಾನ್‌ಗೆ ಸಮನ್ಸ್ ನೀಡಲಾಗಿತ್ತು ಎಂದು ಸೀನಿಯರ್ ಇನ್ಸ್‌ಪೆಕ್ಟರ್ ಹಾಗೂ ಎಇಸಿಯ ಮುಖ್ಯಸ್ಥ ಪ್ರದೀಪ್ ಶರ್ಮಾ ತಿಳಿಸಿದರು.

ಬೆಟ್‌ಗಳನ್ನು ಕಟ್ಟಿದವರ ಮತ್ತು ಬುಕ್ಕಿಗಳ ವಿವರಗಳಿದ್ದ ಡೈರಿಯೊಂದು ಜಲಾನ್ ಬಳಿ ಇತ್ತೆನ್ನಲಾಗಿದೆ. ಆತ ‘ಜ್ಯೂನಿಯರ್ ಕೋಲ್ಕತಾ’ಎಂಬ ಹೆಸರಿನಿಂದ ಕರೆಯಲಾಗುವ ಕಿಕೆಟ್ ಬೆಟ್ಟಿಂಗ್ ಜಾಲದ ಮುಖ್ಯ ರೂವಾರಿಗಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು. ವರದಿಗಳು ಹೇಳುವಂತೆ ಐಪಿಎಲ್ ಬೆಟ್ಟಿಂಗ್‌ಗಾಗಿ ಜಲಾನ್‌ನನ್ನು 2008ರಲ್ಲಿ ಮೊದಲ ಬಾರಿ ಬಂಧಿಸಲಾಗಿತ್ತು. ಆತ ಪಾಕಿಸ್ತಾನದ ಕರಾಚಿಯಲ್ಲಿ ತಲೆಮರೆಸಿಕೊಂಡಿರುವ ಭಯೋತ್ಪಾದಕ ದಾವೂದ್ ಇಬ್ರಾಹೀಂ ಜೊತೆ ನಂಟು ಹೊಂದಿದ್ದಾನೆ ಎನ್ನಲಾಗಿದೆ.

2013ರಲ್ಲಿ ಇನ್ನೋರ್ವ ಬಾಲಿವುಡ್ ನಟ ವಿಂದು ದಾರಾಸಿಂಗ್ ಅವರನ್ನು ಕ್ರಿಕೆಟ್ ಬೆಟ್ಟಿಂಗ್,ವಿಶೇಷವಾಗಿ ಸ್ಪಾಟ್ ಫಿಕ್ಸಿಂಗ್‌ಗಾಗಿ ಮುಂಬೈ ಪೊಲೀಸರು ಬಂಧಿಸಿದ್ದು,ನಂತರ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News