ಪುರುಲಿಯಾದಲ್ಲಿ ಇನ್ನೊಬ್ಬ ಯುವಕನ ಮೃತದೇಹ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆ

Update: 2018-06-02 09:00 GMT

ಪುರುಲಿಯಾ,ಜೂ.2 : ಯುವ  ಬಿಜೆಪಿ ಕಾರ್ಯಕರ್ತನೊಬ್ಬನ ಮೃತದೇಹ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಬಲರಾಮಪುರದ ಮರವೊಂದರಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾದ ಕೆಲವೇ ದಿನಗಳ ಅಂತರದಲ್ಲಿ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಮೃತ ದೇಹ ಅದೇ ಜಿಲ್ಲೆಯ ದಾಭ ಗ್ರಾಮದ ಹೈ ಟೆನ್ಶನ್ ವಿದ್ಯುತ್ ಟವರ್ ಒಂದರಲ್ಲಿ ನೇತಾಡುತ್ತಿರುವುದು ಕಂಡು ಬಂದಿದೆ. ಮೃತ ವ್ಯಕ್ತಿ ದುಲಾಲ್ ಕುಮಾರ್ ತಮ್ಮ ಪಕ್ಷದ ಕಾರ್ಯಕರ್ತ ಎಂದು ಬಿಜೆಪಿ ಹೇಳುತ್ತಿದ್ದರೂ  ತೃಣಮೂಲ ಕಾಂಗ್ರೆಸ್ ನಾಯಕರು ಹಾಗೂ ದುಲಾಲ್ ಕುಮಾರ್ ತಾಯಿ ಇದನ್ನು ನಿರಾಕರಿಸಿದ್ದಾರೆ. ಯುವಕನ ಕುಟುಂಬ ಟಿಎಂಸಿ ಬೆಂಬಲಿಗರೆಂದು ತಿಳಿದು ಬಂದಿದ್ದು ತನ್ನ ಪುತ್ರ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಆತನ ತಾಯಿ ಹೇಳುತ್ತಿದ್ದಾರೆ.

ಪ್ರಕರಣದ ಸಿಐಡಿ ತನಿಖೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶಿಸಿದ್ದಾರೆ.

ಮೃತ ದುಲಾಲ್ ಶುಕ್ರವಾರ ರಾತ್ರಿ 8 ಗಂಟೆಯಿಂದ ಕಾಣೆಯಾಗಿದ್ದು, ಆತ ತನ್ನ ಮೋಟಾರ್ ಸೈಕಲ್ ನಲ್ಲಿ ತೆರಳಿದ ನಂತರ ಹಿಂದೆ ಬಂದಿಲ್ಲ ಎಂದು ಆತನ ಕುಟುಂಬ ತಿಳಿಸಿತ್ತು. ಒಂಬತ್ತು ಗಂಟೆ ಸುಮಾರಿಗೆ ಆತನಿಗಾಗಿ ಹುಡುಕಾಟ  ಆರಂಭವಾಗಿತ್ತು. ಆತನ ಸೋದರ ಸಂಬಂಧಿಯೊಬ್ಬ ಆತನಿಗೆ ಕರೆ ಮಾಡಿದಾಗ ಫೋನ್ ಸ್ವೀಕರಿಸಲಾಯಿತಾದರೂ ಕೂಡಲೇ ಕಟ್ ಆಗಿತ್ತು.

ನಂತರ ಆತನ  ಮೋಟಾರ್ ಸೈಕಲ್ ಹತ್ತಿರದ ಗದ್ದೆಯಲ್ಲಿ ಪತ್ತೆಯಾಗಿತ್ತು. ಇಂದು ಬೆಳಿಗ್ಗೆ ಆತನ ಮೃತ ದೇಹ ವಿದ್ಯುತ್ ಟವರ್ ನಿಂದ ನೇತಾಡುತ್ತಿರುವುದು ಕಂಡು ಬಂದಿದೆ.

ಇತ್ತೀಚಿಗಿನ ಪಂಚಾಯತ್ ಚುನಾವಣೆಗಳಲ್ಲಿ ಆತ ಸಕ್ರಿಯವಾಗಿದ್ದ ಎಂದು ಬಿಜೆಪಿ ಹೇಳಿದೆ. ಪಕ್ಷದ ಕಾರ್ಯಕರ್ತರು ಆತನ ಮೃತದೇಹವನ್ನು ಕೆಳಕ್ಕಿಳಿಸಲೂ ಬಿಡಲಿಲ್ಲ. ಗ್ರಾಮಸ್ಥರು ಪೊಲೀಸರನ್ನು ಸುತ್ತವರಿದರಲ್ಲದೆ ಡಿಎಸ್ಪಿ ಅತುಲ್ ಚಟರ್ಜಿ ಅವರ ವಾಹನವನ್ನು ಪುಡಿಗೈಯ್ಯಲಾಯಿತು. ಬಿಜೆಪಿ ಬೆಂಬಲಿಗರು ಬಲರಾಂಪುರ-ಬಾಘ್ಮುಂಡಿ ರಸ್ತೆಯನ್ನು ಬಂದ್ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ತ್ರಿಲೋಚನ್ ಮಹಾತೋ ಎಂಬ 20 ವರ್ಷದ ಬಿಜೆಪಿ ಕಾರ್ಯಕರ್ತನ ಮೃತದೇಹ ಬಲರಾಂಪುರದಲ್ಲಿ ಆತನ ಮನೆಯ ಸಮೀಪ ನೈಲಾನ್ ಹಗ್ಗದಿಂದ ನೇತಾಡುತ್ತಿರುವುದು ಪತ್ತೆಯಾಗಿತ್ತು. ಇದೊಂದು ರಾಜಕೀಯ ಕೊಲೆಯೆಂದು ಬಿಜೆಪಿ ಹೇಳಿತ್ತು. ಆತ ಧರಿಸಿದ ಟಿ-ಶರ್ಟ್ ನ ಎದುರು ಹಾಗೂ ಹಿಂಬದಿಯಲ್ಲಿ "18 ವರ್ಷದಿಂದ ಬಿಜೆಪಿ ರಾಜಕೀಯದಲ್ಲಿ ಸಕ್ರಿಯವಾಗಿರುವುದರಿಂದ ಹೀಗಾಗಿದೆ. ನಿನ್ನನ್ನು ಮತದಾನದಂದಿನಿಂದ ಕೊಲ್ಲಲು ಯತ್ನಿಸಲಾಗುತ್ತಿತ್ತು. ವಿಫಲವಾಗಿತ್ತು. ಇಂದು ನಿನಗೆ ಸಾವು,'' ಎಂದು ಬರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News