ಸಹಾ ಸ್ಥಾನಕ್ಕೆ ಕಾರ್ತಿಕ್ ಆಯ್ಕೆ

Update: 2018-06-02 19:01 GMT

ಹೊಸದಿಲ್ಲಿ, ಜೂ.2: ಗಾಯದ ಸಮಸ್ಯೆ ಎದುರಿಸುತ್ತಿರುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಸಹಾ ಬದಲಿಗೆ ಚೆನ್ನೈ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಸಹಾ ಅನುಪಸ್ಥಿತಿಯಲ್ಲಿ ತೆರವಾದ ವಿಕೆಟ್‌ಕೀಪರ್ ಸ್ಥಾನವನ್ನು ಕಾರ್ತಿಕ್ ತುಂಬಲಿದ್ದಾರೆ ಎಂದು ಬಿಸಿಸಿಐ ಶನಿವಾರ ತಿಳಿಸಿದೆ. ಅಫ್ಘಾನ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜೂ.14 ರಿಂದ 18ರ ತನಕ ನಡೆಯಲಿದೆ.

 ಇತ್ತೀಚೆಗೆ ಕೊನೆಗೊಂಡ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿದ್ದಾಗ ಸಹಾಗೆ ಬಲಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಟೀಮ್‌ಇಂಡಿಯಾದ ವೈದ್ಯಕೀಯ ಸಿಬ್ಬಂದಿಯ ನಿಗಾದಲ್ಲಿರುವ ಸಹಾಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗಿಂತ ಮೊದಲು ಸಾಕಷ್ಟು ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.

 ಎಂಎಸ್‌ಕೆ ಪ್ರಸಾದ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಇಂಗ್ಲೆಂಡ್ ಟೆಸ್ಟ್ ಪ್ರವಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ತಿಕ್‌ಗೆ ಅವಕಾಶ ನೀಡಿದೆೆ ಎನ್ನಲಾಗಿದೆ. ಕಾರ್ತಿಕ್ 2007ರಲ್ಲಿ ಇಂಗ್ಲೆಂಡ್ ಟೆಸ್ಟ್ ಪ್ರವಾಸದ ವೇಳೆ ಮೂರು ಅರ್ಧಶತಕ ಸಿಡಿಸಿದ್ದರು. ಲಾರ್ಡ್ಸ್‌ನಲ್ಲಿ 60, ನಾಟಿಂಗ್‌ಹ್ಯಾಮ್‌ನಲ್ಲಿ 77 ಹಾಗೂ ದಿ ಓವಲ್‌ನಲ್ಲಿ 91 ರನ್ ಗಳಿಸಿದ್ದರು. ಸಹಾ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. 14 ಪಂದ್ಯಗಳಲ್ಲಿ ಕೇವಲ 234 ರನ್ ಗಳಿಸಿದ್ದರು. ಮತ್ತೊಂದೆಡೆ ದಿನೇಶ್ ಕಾರ್ತಿಕ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿ ಐಪಿಎಲ್‌ನಲ್ಲಿ 3ನೇ ಸ್ಥಾನ ಪಡೆಯಲು ನೆರವಾಗಿದ್ದಲ್ಲದೆ 16 ಪಂದ್ಯಗಳಲ್ಲಿ 498 ರನ್ ಗಳಿಸಿದ್ದರು. ಕಾರ್ತಿಕ್ 2010ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಬಾರಿ ಭಾರತದ ಪರ ಟೆಸ್ಟ್ ಪಂದ್ಯ ಆಡಿದ್ದಾರೆ. ಕಾರ್ತಿಕ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 27 ಶತಕಗಳ ಸಹಿತ 9,000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಭಾರತದ ಪರ ಆಡಿರುವ 23 ಟೆಸ್ಟ್ ಪಂದ್ಯಗಳಲಿ 1,000 ರನ್ ಗಳಿಸಿದ್ದು ಇದರಲ್ಲಿ 1 ಶತಕ ಹಾಗೂ 7 ಅರ್ಧಶತಕಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News