ಕೇಂದ್ರ, ಆದಿತ್ಯನಾಥ್ ಸರಕಾರ ಅಂಬೇಡ್ಕರ್ ರಿಗೆ ಅವಮಾನ ಮಾಡುತ್ತಿವೆ ಎಂದ ಬಿಜೆಪಿ ಸಂಸದೆ

Update: 2018-06-03 09:53 GMT

ಲಕ್ನೋ, ಜೂ 3: ಕೇಂದ್ರ ಹಾಗೂ ಉತ್ತರ ಪ್ರದೇಶ ರಾಜ್ಯ ಸರಕಾರಗಳು ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಿವೆ ಎಂದು ಬಹರೀಚ್ ಕ್ಷೇತ್ರದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು indiatoday.in ವರದಿ ಮಾಡಿದೆ. ಕೇಸರೀಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ದೇಶಾದ್ಯಂತ ಅಂಬೇಡ್ಕರ್ ಪ್ರತಿಮೆಗಳನ್ನು ಧ್ವಂಸಗೊಳಿಸುತ್ತಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಇರುವ ಮೀಸಲಾತಿ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ದೂರಿದ್ದಾರೆ. ಲಕ್ನೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫುಲೆ, "ಅಂಬೇಡ್ಕರ್ ಪ್ರತಿಮೆಗಳನ್ನು ಕೇಸರೀಕರಿಸಲಾಗುತ್ತಿದೆ. ಅವುಗಳನ್ನು ಹಾಲಿನಿಂದ ಸ್ವಚ್ಛಗೊಳಿಸಲಾಗುತ್ತಿದ್ದು, ಇದು ಅವರಿಗೆ ಮಾಡುವ ಅವಮಾನ. ಅವರ ಪ್ರತಿಮೆಗಳನ್ನು ಎಲ್ಲೆಡೆ ದ್ವಂಸಗೊಳಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ವತಃ ನಾನು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಕೋರಿದರೂ ಯಾವುದೇ ಪ್ರಯೋಜನವಾಗಿಲ್ಲ" ಎಂದು ಹೇಳಿದರು.

'ಸಬ್ಕಾ ಸಾಥ್ ಸಬ್ಕಾ ವಿಕಾಸ್' ಎನ್ನುವ ಭರವಸೆಯನ್ನು ದೇಶಕ್ಕೆ ನೀಡಲಾಗಿತ್ತು. ಆದರೆ ಬಹುಜನ ಸಮಾಜ (ದಲಿತ ಮತ್ತು ಹಿಂದುಳಿದ ವರ್ಗ)ವನ್ನು ನಿರಂತರವಾಗಿ ಗುರಿ ಮಾಡಲಾಗುತ್ತಿದೆ. ದಲಿತ ದೌರ್ಜನ್ಯ ಕಾಯ್ದೆ ದುರ್ಬಲಗೊಳಿಸುವ ಹುನ್ನಾರದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಅವರನ್ನು ಹತ್ಯೆ ಮಾಡಲಾಗಿದೆ. ಇದುವರೆಗೂ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ. ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ದಲಿತರು ನಿರುದ್ಯೋಗಿಗಳಾಗಿದ್ದಾರೆ. ತಾರತಮ್ಯದ ಬಲಿಪಶುಗಳಾಗುತ್ತಿದ್ದಾರೆ" ಎಂದವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News