ಕೇಂದ್ರ ಸರಕಾರದ ಬಗ್ಗೆ ಪೇಜಾವರ ಶ್ರೀ ಹೇಳಿಕೆಯಿಂದ ಆಘಾತ : ಕೆ.ಎಸ್.ಈಶ್ವರಪ್ಪ

Update: 2018-06-04 14:02 GMT

ಚಿಕ್ಕಮಗಳೂರು, ಜೂ.4: ಗಂಗಾ ನದಿ ಶುದ್ಧೀಕರಣ ಹಾಗೂ ಕಪ್ಪು ಹಣದ ಬಗ್ಗೆ ಕೇಂದ್ರ ಸರಕಾರ ಹೆಚ್ಚು ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದೆ. ಆದರೆ ಉಡುಪಿ ಪೇಜಾವರ ಶ್ರೀಗಳು ಯಾಕೆ ಕೇಂದ್ರ ಸರಕಾರದ ವಿರುದ್ಧ ಮಾತನಾಡಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಮಾಜಿ ಉಪಮುಖ್ಯಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. 

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಜಾವರ ಶ್ರೀಗಳು ದೇವರ ಸಮಾನರು. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಹೇಳಿಕೆ ನನಗೆ ಆಶ್ಚರ್ಯ ಹಾಗೂ ಅಘಾತ ಉಂಟು ಮಾಡಿದೆ ಎಂದರು.

ಹಿಂದೆ ಗಂಗಾನದಿಯನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ, ಕಾಲಿಡಲು ಅಸಹ್ಯ ಪಡುವಂತ್ತಿತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಸಾಕಷ್ಟು ಶುದ್ಧೀಕರಿಸಲಾಗಿದೆ ಎಂದ ಅವರು, ಪೇಜಾವರ ಶ್ರೀಗಳು ಇತ್ತೀಚೆಗೆ ಗಂಗಾನದಿಯನ್ನು ನೋಡಿಲ್ಲ ಅನಿಸುತ್ತದೆ. ಸಾಧ್ಯವಾದರೆ ಶ್ರೀಗಳನ್ನು ಅಲ್ಲಿಗೆ ಕರೆದೊಯ್ಯುತ್ತೇನೆ. ಈ ರೀತಿಯಾಗಿ ತಮಗೆ ಮತ್ತೊಮ್ಮೆ ಪವಿತ್ರ ಗಂಗಾನದಿಯನ್ನು ನೋಡಲು ಸಾಧ್ಯವಾಗುತ್ತದೆ ಎಂದರು.

ಕಪ್ಪು ಹಣ ವಿಚಾರದಲ್ಲಿಯೂ ಕೇಂದ್ರ ಸರಕಾರ ಸಾಕಷ್ಟು ಕೆಲಸ ಮಾಡಿದೆ. ಆದಾಯ ತೆರಿಗೆ ಇಲಾಖೆ ಅನೇಕರ ಮನೆ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಕಪ್ಪು ಹಣ ವಶಪಡಿಸಿಕೊಳ್ಳಲಾಗಿದೆ. ಈ ವಿಚಾರದ ಬಗ್ಗೆ ಶ್ರೀಗಳೊಂದಿಗೆ ಮಾತುಕತೆ ನಡೆಸಿ ಮನವರಿಕೆ ಮಾಡಿಕೊಡುತ್ತೇವೆ ಎಂದರು.

ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಬಗ್ಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಇದ್ದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಹೊರತುಪಡಿಸಿ ಉಳಿದವರು ಕಾಂಗ್ರೆಸ್ ವಿರೋಧಿಗಳೇ. ನರೇಂದ್ರ ಮೋದಿ, ಬಿಜೆಪಿ ಸೋಲಿಸುವ ಉದ್ದೇಶದಿಂದ ಅಧಿಕಾರದಾಹಿ ಪಕ್ಷಗಳು ಒಂದಾಗಿವೇ. ಯಾರೇ ಒಟ್ಟಾದರು ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ, ಮುಂಬರುವ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News