ದಾವಣಗೆರೆ : ಕಳವು ಪ್ರಕರಣದ ಆರೋಪಿಗಳ ಬಂಧನ

Update: 2018-06-04 14:29 GMT

ದಾವಣಗೆರೆ,ಜೂ.4:ಕುರಿ, ಮೇಕೆ, ಬೈಕ್, ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಅವರಿಂದ ಒಟ್ಟು 6.04 ಲಕ್ಷ ಮೌಲ್ಯದ ವಸ್ತುಗಳನ್ನು ಚನ್ನಗಿರಿ ತಾಲೂಕಿನ  ಸಂತೇಬೆನ್ನೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಆರ್. ಚೇತನ್ ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆ ಹಿರೇಕೆರೂರಿನ ವಿಜಯನಗರದ ರವಿ ಅಲಿಯಾಸ್ ಯಲ್ಲಪ್ಪ, ಶಿವು(23 ವರ್ಷ), ಬಳ್ಳಾರಿ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾ. ತಂಬ್ರಹಳ್ಳಿ ಗ್ರಾಮದ ಚಿರಂಜೀವಿ ಅಲಿಯಾಸ್ ಗಾಳೆಪ್ಪ, ತಂಬ್ರಹಳ್ಳಿ ಗ್ರಾಮದ ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕ ಹಾಗೂ ಹರಿಹರ ತಾ. ಭಾನುವಳ್ಳಿ ಗ್ರಾಮದ ಚೌಡ ಅಲಿಯಾಸ್ ಲೂಸ್ ಮಾದ(32) ಬಂಧಿತರು. 

ಕಳೆದ ಮೇ 30ರ ರಾತ್ರಿ ಸಂತೇಬೆನ್ನೂರು ಎಸ್‍ಐ ಹಾಗೂ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದಾಗ ರವಿ ಅಲಿಯಾಸ್ ಶಿವು, ಚಿರಂಜೀವಿ ಅಲಿಯಾಸ್ ಗಾಳೆಪ್ಪ ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಬೈಕ್‍ನಲ್ಲಿ ಕುರಿ, ಮೇಕೆ ಹಿಡಿದುಕೊಂಡು ಹೊರಟಿದ್ದನ್ನು ಪ್ರಶ್ನಿಸಿದಾಗ, ಮೂವರು ಅನುಮಾನಾಸ್ಪದವಾಗಿ ನಡೆದುಕೊಂಡಿದ್ದರಿಂದ ಪೊಲೀಸರು ಪ್ರಶ್ನಿಸಿದ್ದಾರೆ. 

ರವಿ, ಚಿರಂಜೀವಿ ಇಬ್ಬರೂ ಈಗ್ಗೆ 6 ತಿಂಗಳ ಹಿಂದೆ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ಜೈಲಿನಿಂದ ತಪ್ಪಿಸಿಕೊಂಡು ಬಂದಿದ್ದಾಗಿ, ಸೊರಬ, ಹಿರೇಕೆರೂರು ಭಾಗದಲ್ಲಿ ಬೈಕ್ ಕಳವು ಮಾಡಿದ್ದ ವಿಚಾರ ಆರೋಪಿಗಳು ಹೊರ ಹಾಕಿದ್ದಾರೆ ಎಂದರು.

ಕಳೆದ 31ರಂದು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ನ್ಯಾಯಾಧೀಶರ ಅನುಮತಿ ಪಡೆದು, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಬಂಧಿತರು ನೀಡಿದ ಸುಳಿವು ಆಧರಿಸಿ ಹರಿಹರ ತಾಲೂಕಿನ ಭಾನುವಳ್ಳಿಯಲ್ಲಿ 4ನೇ ಆರೋಪಿ ಮಿಕ್ಸಿ ರಿಪೇರಿ ಕೆಲಸ ಮಾಡುವ ಚೌಡ ಅಲಿಯಾಸ್ ಲೂಸ್ ಮಾದನನ್ನು ಬಂಧಿಸಲಾಯಿತು.

ಆರೋಪಿಗಳಿಂದ ಸುಮಾರು 1.40 ಲಕ್ಷ ಮೌಲ್ಯದ 28 ಕುರಿಗಳು, 3.80 ಲಕ್ಷ ಮೌಲ್ಯದ ಚಿನ್ನಾಭರಣ, 4 ಸಾವಿರ ಮೌಲ್ಯದ 120 ಗ್ರಾಂ ಬೆಳ್ಳಿ ಸಾಮಾನು, 80 ಸಾವಿರ ಮೌಲ್ಯದ 2 ಬೈಕ್ ಸೇರಿದಂತೆ ಒಟ್ಟು 6.04 ಲಕ್ಷ ಮೌಲ್ಯದ ವಸ್ತು ಜಪ್ತು ಮಾಡಲಾಗಿದೆ.

5 ಸಾವಿರ ಬಹುಮಾನ : ಚನ್ನಗಿರಿ ಸಿಪಿಐ ಮಧುಸೂದನ್, ಸಂತೇಬೆನ್ನೂರು ಪಿಎಸ್‍ಐ ಬಿ. ಮಲ್ಲಿಕಾರ್ಜುನ, ಚನ್ನಗಿರಿ ಎಸ್‍ಐ ವೀರಬಸಪ್ಪ ಕುಸಲಾಪುರ, ಸಂತೇಬೆನ್ನೂರು ಎಎಸ್‍ಐ ಚನ್ನಪ್ಪ, ಸಿಬ್ಬಂದಿ ಎಸ್. ಧರ್ಮಪ್ಪ, ಎಂ. ರುದ್ರೇಶ, ರುದ್ರಸ್ವಾಮಿ, ಕೊಟ್ರೇಶ, ತಿಮ್ಮಪ್ಪ, ಉಮೇಶ, ರಂಗಸ್ವಾಮಿ, ನಿಂಗಣ್ಣ, ಎಸ್. ಪ್ರಹ್ಲಾದ, ಆಂಜನೇಯ, ಎಸ್.ಆರ್.ರುದ್ರೇಶ, ರವಿ ದಾದಾಪೂರ, ತಾಂತ್ರಿಕ ವಿಭಾಗದ ಆರ್.ಬಿ. ಜಾಧವ್, ಜೀಪು ಚಾಲಕರಾದ ರೇವಣಸಿದ್ದಪ್ಪ, ಹಾಲೇಶರನ್ನು ಒಳಗೊಂಡ ತಂಡ ಕಾರ್ಯಾಚರಣೆಯಲ್ಲಿದ್ದರು. ಇವರಿಗೆ 5 ಸಾವಿರ ರು. ಬಹುಮಾನ ಘೋಷಿಸಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ, ಗ್ರಾಮಾಂತರ ಡಿಎಸ್ಪಿ ಮಂಜುನಾಥ ಕೆ.ಗಂಗಲ್, ಸಿಪಿಐ ಮಧುಸೂದನ್, ಎಸ್‍ಐಗಳಾದ ಬಿ. ಮಲ್ಲಿಕಾರ್ಜುನ, ವೀರಬಸಪ್ಪ ಕುಸಲಾಪುರ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News